ಬೆಳಗಿನ ಶಾಲೆಯ ಮತ್ತು ಸರ್ಕಾರಿ ಕಚೇರಿ ಪ್ರಾರಂಭದ ಅವಧಿಯಲ್ಲಂತೂ ಸಂಚಾರ ದಟ್ಟಣೆ ಮಿತಿ ಮೀರಿರುತ್ತದೆ

ಕಾರಟಗಿ: ಇಲ್ಲಿನ ಆರ್.ಜಿ. ರಸ್ತೆಯಲ್ಲಿನ ನ್ಯಾಶನಲ್ ಶಾಲೆಯ ಬಳಿ ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಪುರಸಭೆ, ಪೊಲೀಸ್ ಇಲಾಖೆ ಹಾಗೂ ರಸ್ತೆ ನಿರ್ವಹಣೆಯ ಹೊಣೆ ಹೊತ್ತಿರುವ ಟೋಲ್ ನಿರ್ವಹಣೆಯವರು ರಸ್ತೆ ದಾಟುವ ವಿದ್ಯಾರ್ಥಿಗಳ ಸುರಕ್ಷತೆಗೆ ಹಾಗೂ ಅಪಘಾತ ತಪ್ಪಿಸಲು ವೇಗ ನಿಯಂತ್ರಕ ಹಾಗೂ ಹಂಪ್ಸ್‌ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದ್ದಾರೆ.

ಇಲ್ಲಿನ ನ್ಯಾಶನಲ್ ಸ್ಕೂಲ್ ಬಳಿ ಯಾವುದೇ ವೇಗ ನಿಯಂತ್ರಕಗಳಾಗಲಿ ಹಾಗೂ ಹಂಪ್ಸ್ ಇರದ ಕಾರಣ ನಿತ್ಯ ಒಂದಿಲ್ಲ, ಒಂದು ಅಪಘಾತ ಘಟಿಸುತ್ತಿದ್ದು, ಕಳೆದ ಗುರುವಾರ ಮತ್ತು ಶುಕ್ರವಾರದಂದು ಬಿಟ್ಟು ಬಿಡದೇ ಬೈಕ್ ಹಾಗೂ ವಾಹನಗಳ ಮಧ್ಯ ಅಪಘಾತ ಸಂಭವಿಸಿ,ಗಂಭೀರ ಗಾಯಗಳಾಗಿವೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಾಲಾಡಳಿತ ಮಂಡಳಿಯವರು ಆಕ್ರೋಶ ವ್ಯಕ್ತಪಡಿಸಿ, ಈ ಎಲ್ಲ ಅಪಘಾತಗಳಿಗೆ ಶಾಲೆ ಬಳಿಯ ರಸ್ತೆಗೆ ಯಾವುದೇ ಹಂಪ್ಸ್ ಹಾಗೂ ವೇಗ ನಿಯಂತ್ರಕಗಳು ಇಲ್ಲದ ಕಾರಣಕ್ಕೆ ಇಷ್ಟೆಲ್ಲ ಆಗುತ್ತಿವೆ ಎಂದು ದಿಢೀರ್ ಎಂದು ಪುರಸಭೆ ಕಚೇರಿಗೆ, ಪೊಲೀಸ್ ಠಾಣೆಗೆ ಹಾಗೂ ಮರಳಿ ಬಳಿಯ ಟೋಲ್‌ಗೇಟ್‌ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ಕೂಡಲೇ ಹಂಪ್ಸ್ಅಥವಾ ಸ್ಪೀಡ್ ಬ್ರೇಕರ್ಸ್ಗಳನ್ನು ಹಾಕಿಕೊಡುವಂತೆ ಆಗ್ರಹಿಸಿದರು.

ಬಳಿಕ ಪೋಷಕರು ಈ ಕುರಿತು ಮಾಹಿತಿ ನೀಡಿ ರಾಜ್ಯ ಹೆದ್ದಾರಿಯಾಗಿರುವ ಆರ್.ಜಿ ರಸ್ತೆಯಲ್ಲಿನ ನ್ಯಾಶನಲ್ ಸ್ಕೂಲ್‌ನ ಮುಂಭಾಗದಲ್ಲಿ ನಿತ್ಯ ಸಾವಿರಾರು ವಾಹನಗಳು ಹಾದು ಹೋಗುತ್ತವೆ. ಬೆಳಗಿನ ಶಾಲೆಯ ಮತ್ತು ಸರ್ಕಾರಿ ಕಚೇರಿ ಪ್ರಾರಂಭದ ಅವಧಿಯಲ್ಲಂತೂ ಸಂಚಾರ ದಟ್ಟಣೆ ಮಿತಿ ಮೀರಿರುತ್ತದೆ. ಈ ಸಮಯದಲ್ಲಿ ಚಲನೆಯ ವೇಗ ನಿಯಂತ್ರಿಸಲು ಯಾವುದೇ ವೇಗದ ಉಬ್ಬುಗಳಿಲ್ಲ (ಹಂಪ್ಸ್) ಮಕ್ಕಳು, ಅವರನ್ನು ಕರೆದುಕೊಂಡು ಬರುತ್ತಿರುವ ಪೋಷಕರು ಹಾಗೂ ಆಟೋಗಳವರಿಗೆ ರಸ್ತೆ ದಾಟಲು ಭಯಪಡುತ್ತಾರೆ. ಅದರಲ್ಲೂ ಗುರುವಾರ ಮತ್ತು ಶುಕ್ರವಾರದಂದು ಬಿಟ್ಟು ಬಿಡದೇ ಅಪಘಾತ ಸಂಭವಿಸಿ, ಇಬ್ಬರು ಪೋಷಕರಿಗೆ ಗಂಭೀರ ಗಾಯವಾಗಿದೆ. ಇನ್ನು ಕೆಲವರು ಅಜಾಗೂರೂಕತೆಯಿಂದ ವಾಹನ ಚಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ಉಂಟಾಗುವ ಸಂಭವ ಇರುತ್ತದೆ. ಈಗಲಾದರೂ ಸಂಬಂಧಪಟ್ಟ ಪುರಸಭೆ, ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಮರಳಿ ಬಳಿಯ ಟೋಲ್ ನಿರ್ವಹಣೆಯ ಕಂಪನಿ ವೇಗ ನಿಯಂತ್ರಕ ಹಾಗೂ ಹಂಪ್ಸ್ ನಿರ್ಮಿಸಲು ಮುಂದಾಗುವ ಅಪಾಯವನ್ನು ತಡೆಗಟ್ಟಬೇಕು. ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯವಹಿಸಿದಲ್ಲಿ ಈ ಎಲ್ಲ ಸಂಸ್ಥೆಗಳ ಕಚೇರಿ ಮುಂದೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಶನಲ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.