ಸಾರಾಂಶ
ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇ. ೧೦೦ರಷ್ಟು ಮತದಾನದ ಗುರಿ ಹಾಕಿಕೊಳ್ಳಬೇಕು ಹಾಗೂ ಮತದಾರರಿಗೆ ಮತದಾನದ ಮಹತ್ವ ತಿಳಿಸಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ೮೩-ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದ ಚಟುವಟಿಕೆ ಅನುಷ್ಠಾನದ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಬೆಳಗಾವಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎರಡ್ಮೂರು ಮತಗಟ್ಟೆಗಳಲ್ಲಿ ಶೇ. ೧೦೦ರಷ್ಟು ಮತದಾನವಾಗಿದೆ. ಇದನ್ನು ಮಾದರಿಯಾಗಿ ತೆಗೆದುಕೊಂಡು ಮತದಾನ ಹೆಚ್ಚಳಕ್ಕೆ ಕ್ರಿಯಾಯೋಜನೆ ತಯಾರಿಸಿಕೊಂಡು ಸ್ವೀಪ್‌ನ ವಿವಿಧ ಚಟುವಟಿಕೆಗಳ ಮೂಲಕ ಮತದಾನ ಅರಿವು ಮೂಡಿಸಬೇಕು. ೧೮ ವರ್ಷ ಮೇಲ್ಪಟ್ಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬರೂ ಹಕ್ಕು ಚಲಾಯಿಸುವಂತೆ ಅರಿವು ಮೂಡಿಸಬೇಕು ಎಂದರು.ಸ್ವೀಪ್‌ನಿಂದ ಆಯೋಜಿಸುವ ಜಾಥಾ, ರ‍್ಯಾಲಿ, ಪ್ರಭಾತಪೇರಿ ಕಾರ್ಯಕ್ರಮಗಳಲ್ಲಿ ಸಹಯವಾಣಿ ಸಂಖ್ಯೆ ೧೯೫೦, ಮತದಾನ ದಿನ, ಸಮಯ ಸೇರಿದಂತೆ ಜಾಗೃತಿ ಮೂಡಿಸುವ ಪ್ಲೇ ಕಾರ್ಡ್ ಪ್ರದರ್ಶಿಸಬೇಕು. ಮತದಾನಕ್ಕೆ ಮತದಾರರ ಚೀಟಿಯ ಹೊರತಾಗಿ ಬಳಕೆ ಮಾಡಬಹುದಾದ ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಸೇರಿದಂತೆ ವಿವಿಧ ದಾಖಲೆಗಳ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಕುರಿತು ಖಚಿತಪಡಿಸಿಕೊಳ್ಳಲು ತಿಳಿಸಬೇಕು ಎಂದು ತಿಳಿಸಿದರು.
ಎವಿಎಂ, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್‌ಗಳ ಕಾರ್ಯನಿರ್ವಹಣೆ ಕುರಿತು ಮತದಾರರಿಗೆ ತಿಳಿವಳಿಕೆ ನೀಡಬೇಕು. ಮತದಾನಕ್ಕೆ ಸಂಬಂಧಿಸಿದ ಮತಯಂತ್ರಗಳು ಯಾವುದೇ ನೆಟ್‌ವರ್ಕ್ ಸಂಪರ್ಕ ವಿಲ್ಲದೆ ಕಾರ್ಯನಿರ್ವಹಿಸುವ ಬಗ್ಗೆ ವಿವರಿಸಬೇಕು. ಮತಯಂತ್ರಗಳ ಪರಿಶೀಲನೆ, ರವಾನೆ ಸೇರಿದಂತೆ ಎಲ್ಲ ಕಾರ್ಯ ವಿಡಿಯೋ ಚಿತ್ರೀಕರಣದಲ್ಲಿ ನಡೆಯುತ್ತದೆ ಎಂಬುದುನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮತದಾರರಿಗೆ ವೋಟರ್ ಸ್ಲೀಪ್ ನೀಡುವ ಸಮಯದಲ್ಲಿ ಮತದಾರರಿಗೆ ಅರಿವು ಮೂಡಿಸಬೇಕು. ಮತದಾನದ ಮಹತ್ವದ ವಿಡಿಯೋ ಹಾಗೂ ಆಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬೇಕು. ಒಟ್ಟಾರೆ ಮತದಾನ ಹೆಚ್ಚಳಕ್ಕೆ ಎಲ್ಲರೂ ಸಮನ್ವಯದಿಂದ ಯಾವುದೇ ಗೊಂದಲಗಳು ಇಲ್ಲದಂತೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕು ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿರುವ ವಿಕಲಚೇತನ ಮತದಾರರಿಗೆ ಮತಗಟ್ಟೆಗೆ ಆಗಮಿಸಲು ಬೇಕಾದ ವಾಹನ ಸೌಕರ್ಯ ಒದಗಿಸಬೇಕು. ಇಲಾಖೆಯಿಂದ ವಾಹನ ಸೌಲಭ್ಯ ಪಡೆದ ವಿಕಲಚೇತನರನ್ನು ಸೇರಿಸಿ ಜಾಗೃತಿ ಕಾರ್ಯಕ್ರಮ ಮಾಡಬೇಕು ಹಾಗೂ ಮತದಾನ ದಿನದಂದು ವಿಶೇಷಚೇತನರನ್ನು ಮತಗಟ್ಟೆಗೆ ಕರೆತರಲು ವಿಶೇಷ ವಾಹನ ವ್ಯವಸ್ಥೆ ಮಾಡುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.ಸ್ವೀಪ್ ಚಟುವಟಿಕೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಮಾತನಾಡಿ, ಸ್ವೀಪ್ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಶಿಗ್ಗಾಂವಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ೧೩೩ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಕೇಂದ್ರಕ್ಕೆ ಒಂದರಂತೆ ೨೪೧ ಚುನಾವಣಾ ಜಾಗೃತಿ ಸಂಘಗಳನ್ನು ರಚಿಸಲಾಗಿದೆ. ವಿವಿಧ ಕಾಲೇಜುಗಳಲ್ಲಿ ೨೪ ಕ್ಯಾಂಪಸ್ ಅಂಬಾಸಿಡರ್‌ಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ. ೭೯.೯೪ರಷ್ಟು ಮತದಾನವಾಗಿದ್ದು, ಶೇ. ೮೧ರಷ್ಟು ಪುರುಷ ಹಾಗೂ ಶೇ. ೭೭.೮೨ರಷ್ಟು ಮಹಿಳಾ ಮತದಾನವಾಗಿದೆ. ಈ ಬಾರಿ ಮತದಾನ ಹೆಚ್ಚಿಸಲು ಮತದಾನ ಪ್ರಮಾಣ ಕಡಿಮೆಯಾದ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಗಂಗಿಭಾವಿ ಹಾಗೂ ಶಿಗ್ಗಾಂವಿ ಮತ್ತು ಸವಣೂರ ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಈ ಪ್ರದೇಶಗಳಲ್ಲಿ ಮತದಾನ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಶಿಗ್ಗಾಂವಿ ಕ್ಷೇತ್ರದಲ್ಲಿ ಐದು ಸಖಿ, ತಲಾ ಒಂದರಂತೆ ವಿಕಲಚೇತನ ಸ್ನೇಹಿ, ಯುವ ಮತದಾರರ ಹಾಗೂ ಥೀಮ್ ಬೇಸ್ಡ್ ಮತಗಟ್ಟೆ ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಮತದಾನ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಚುನಾವಣಾ ರಾಯಭಾರಿಗಳನ್ನಾಗಿ ಗಾಯಕ ಖಾಸೀಂ ಅಲಿ, ಕಲಾವಿದ ಮಾಲತೇಶ ಗರಡಿಮನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಜಿಪಂ ಯೋಜನಾ ಅಂದಾಜು ಮೌಲ್ಯಮಾಪನ ಅಧಿಕಾರಿ ಕುಮಾರ ಮಣ್ಣವಡ್ಡರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಇತರರು ಇದ್ದರು.