ಸಾರಾಂಶ
ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಭಾನುವಾರ ಪುತ್ತೂರಿನ ಶಾಸಕ ಕಚೇರಿ ಸಭಾಂಗಣದಲ್ಲಿ ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರ ನಡೆಯಿತು.
ರೈ ಚಾರಿಟೇಬಲ್ ಟ್ರಸ್ಟ್‌ನಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರಕನ್ನಡಪ್ರಭ ವಾರ್ತೆ ಪುತ್ತೂರು
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಜಿಲ್ಲೆಯ ಯುವಕರ ಭಾಗವಹಿಸುವಿಕೆ ಕಡಿಮೆಯಾಗಿದೆ, ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಠ ಹತ್ತು ಮಂದಿಯಾದರೂ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸೃಷ್ಟಿ ಮಾಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನಡೆಸಲಾಗುತ್ತಿದೆ ಎಂದು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಭಾನುವಾರ ಪುತ್ತೂರಿನ ಶಾಸಕ ಕಚೇರಿ ಸಭಾಂಗಣದಲ್ಲಿ ನಡೆದ ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಒಂದು ದಿನದ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಲಿಕೆಗೆ ಪ್ರಾಯದ ಅಡ್ಡಿಯಿಲ್ಲ, ಯುವ ವಿದ್ಯಾರ್ಥಿಗಳು ಕಲಿಕೆಯತ್ತ ತಮ್ಮ ಗಮನ ಹರಿಸುವ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಬೇಕು, ದುಶ್ಚಟಗಳಿಂದ ಮುಕ್ತವಾಗಿ ಮುಂದೆ ತಾನೊಬ್ಬ ಉತ್ತಮ ನಾಗರಿಕನಾಗಿ ಬದುಕಬೇಕು ಎಂಬ ಕನಸು ಹೊಂದಿರಬೇಕು ಎಂದು ಕರೆ ನೀಡಿದರು.ಶಿವಮೊಗ್ಗದ ಐಎಎಸ್ ದರ್ಶನ ಸಂಸ್ಥೆ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಅವರು ಐಎಎಸ್, ಐಪಿಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಕಾರ್ಯಾಗಾರ ನಡೆಸಿದರು.ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್, ಟ್ರಸ್ಟ್ ಸದಸ್ಯರಾದ ಯೋಗೀಶ್ ಸಾಮಾನಿ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ದರ್ಶನ ಸಂಸ್ಥೆಯ ನಿರ್ದೇಶಕರಾದ ನೇಹಾ ಸುಧಾಕರ್, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ನೆಲ್ಲಿಕಟ್ಟೆ, ಗುತ್ತಿಗೆದಾರರಾದ ಸಾಹಿರಾ ಬನ್ನೂರು ಉಪಸ್ಥಿತರಿದ್ದರು.ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು. ನಿಹಾಲ್ ಪಿ ಶೆಟ್ಟಿ ವಂದಿಸಿದರು. ಟ್ರಸ್ಟ್ ಮೆನೆಜರ್ ಲಿಂಗಪ್ಪ ಕುದ್ಮಾನ್, ಸಿಬಂದಿ ರಚನಾ ನಿರೂಪಿಸಿದರು.