ಸಾರಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್(ರಿ) ನೇತೃತ್ವದಲ್ಲಿ ತಾಲೂಕಿನ ವಿವಿಧ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹೊಂಬಾಳೆ ಬಿಡಿಸಿ, ರಾಗಿ ಕಣದ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಇದೇ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು.ಸಂಸ್ಥೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ಮಾತನಾಡಿ, ಅವಕಾಶ ವಂಚಿತರು ಮತ್ತು ಬಡವರ ಬದುಕನ್ನು ಸದೃಢಗೊಳಿಸುವ ಸಂಕಲ್ಪದೊಂದಿಗೆ ಸರ್ವರ ಪ್ರಗತಿಯ ಆಶಯವನ್ನು ಸಂಸ್ಥೆ ಹೊಂದಿದೆ. ಸಾಮಾಜಿಕ ಕಾಳಜಿಯ ಜೊತೆಗೆ ಜನರ ಆರ್ಥಿಕ ಪ್ರಗತಿಯನ್ನೂ ಗುರಿಯಾಗಿಟ್ಟುಕೊಂಡು ಅನೇಕ ಜನಪರ ಯೋಜನೆಗಳು ಜಾರಿಯಲ್ಲಿವೆ. ಸಂಘದ ಸಮಗ್ರ ಚಿಂತನೆಗಳನ್ನು ಜನತೆ ಅರ್ಥ ಮಾಡಿಕೊಂಡು ಪರಸ್ಪರ ಅರಿವು ಮತ್ತು ಸಹಕಾರದ ಮೂಲಕ ಎಲ್ಲರ ಪ್ರಗತಿಯ ಗುರಿ ಸಾಧನೆ ಮಾಡಬೇಕಿದೆ ಎಂದರು.
ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಕುರಿತು ಉಪನ್ಯಾಸ ನೀಡಿದ ಪ್ರಾಧ್ಯಾಪಕ ಪ್ರೊ.ರವಿಕಿರಣ್ ಕೆ.ಆರ್., ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬಂದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್.ಎಸ್.ನಾಗೇಶ್ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡದ ಸಹಾಯಕ ಪ್ರಬಂಧಕ ಮಧು, ಸುಧಾ ಭಾಸ್ಕರ್ ಸೇರಿದಂತೆ ಟ್ರಸ್ಟ್‌ನ ತಾಲೂಕು ಮಟ್ಟದ ಸಿಬ್ಬಂದಿ ಇದ್ದರು.
ಫೋಟೋ-9ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ನಡೆಯಿತು.