ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲು ಕ್ಷಣಗಣನೆ

| Published : Nov 13 2024, 12:00 AM IST

ಸಾರಾಂಶ

ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿರುವ ಗುರುತಿಸಿಕೊಂಡಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಈಗ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಪ್ರಶ್ನೆ ಎದುರಾಗಿದೆ. ಮೇಲ್ನೋಟಕ್ಕೆ ನೇರ ಸ್ಪರ್ಧೆ ಕಂಡು ಬರುತ್ತಿದ್ದರೂ ಕಣದಲ್ಲಿರುವ ಒಟ್ಟು 31 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಇಂದು ಬರೆಯಲು ಕಾತುರರಾಗಿದ್ದಾರೆ.

ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿರುವ ಗುರುತಿಸಿಕೊಂಡಿರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಈಗ ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಪ್ರಶ್ನೆ ಎದುರಾಗಿದೆ. ಮೇಲ್ನೋಟಕ್ಕೆ ನೇರ ಸ್ಪರ್ಧೆ ಕಂಡು ಬರುತ್ತಿದ್ದರೂ ಕಣದಲ್ಲಿರುವ ಒಟ್ಟು 31 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಇಂದು ಬರೆಯಲು ಕಾತುರರಾಗಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದು ಮತದಾನಕ್ಕೆ ಕ್ಷಣ ಗಣನೆ ಆರಂಭಗೊಳ್ಳುತ್ತಿದ್ದಂತೆ ಅಖಾಡದಲ್ಲಿರುವ ಅಭ್ಯರ್ಥಿಗಳು

ತಳಮಳಗೊಂಡಿದ್ದಾರೆ. ಕೆಲ ಅಭ್ಯರ್ಥಿಗಳು ಮಂಗಳವಾರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರೆ, ಇನ್ನುಳಿದವರು ಬೂತ್ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ 20 ದಿನಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ ರಾಜಕೀಯ ನಾಯಕರು ಆರೋಪಕ್ಕೆ ಪ್ರತ್ಯಾರೋಪ, ಟೀಕೆಗೆ ಪ್ರತಿಟೀಕೆಗಳಲ್ಲಿ ತೊಡಗಿದ್ದರು.

ಎಲ್ಲ ಪ್ರಯತ್ನಗಳನ್ನು ಮುಗಿಸಿರುವ ಅಭ್ಯರ್ಥಿಗಳು ಈ ಕಾರ್ಯಕರ್ತರಿಗೆ ಹೆಚ್ಚಿನ ಮತ ತಂದುಕೊಡುವ ಟಾಸ್ಕ್ ನೀಡಿದ್ದಾರೆ.

ವಿಶೇಷ ಮತಗಟ್ಟೆಗಳು :

ಚನ್ನಪಟ್ಟಣ ಟಾಯ್ಸ್ (ಗೊಂಬೆ) ಸೇರಿದಂತೆ ವಿಶೇಷ ಮತಗಟ್ಟೆಗಳನ್ನು ಜಿಲ್ಲಾಡಳಿತ ತೆರೆಯಲಿದೆ. ಇದರೊಂದಿಗೆ ಮಹಿಳಾ ಮತಗಟ್ಟೆ, ಯುವ ಮತಗಟ್ಟೆ, ಅಧಿಕಾರಿಗಳ ಮತಗಟ್ಟೆಗಳು ಕಾರ್ಯನಿರ್ವಹಿಸಲಿದ್ದು, ಇವುಗಳಲ್ಲಿ ಮಹಿಳೆಯರು, ಯುವಕರು, ಅಧಿಕಾರಿಗಳೇ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಈ ಬಾರಿ 2,32,836 ಮಂದಿ ನೋಂದಾಯಿತ ಮತದಾರರಿದ್ದು, ಇವರಲ್ಲಿ 1,12,271 ಮಂದಿ ಪುರುಷರು, 1,20,557 ಮಂದಿ ಮಹಿಳೆಯರು, 8 ಮಂದಿ ಇತರ ಮತದಾರರು ಒಳಗೊಂಡಿದ್ದಾರೆ. 85 ವರ್ಷಕ್ಕೆ ಮೇಲ್ಪಟ್ಟ 1,613 ಮಂದಿ ಹಿರಿಯ ಮತದಾರರು, 3011 ಮಂದಿ ವಿಶೇಷ ಚೇತನ ಮತದಾರರು, 8338 ಮಂದಿ 19 ವರ್ಷದೊಳಗಿನ ಯುವ ಮತದಾರರು, 47 ಮಂದಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾಮತದಾರರಿದ್ದಾರೆ.

271 ಮತಗಟ್ಟೆಗಳ ಸ್ಥಾಪನೆ :

ಲೋಕಸಭಾ ಚುನಾವಣೆಯ ಸಮಯದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಉಪಚುನಾವಣೆಯಲ್ಲಿ 276 ಮತಗಟ್ಟೆಗಳನ್ನು ಸ್ಥಾಪಿಸಲಾಗುತಿದೆ.. ಮತದಾರರ ಸಂಖ್ಯೆಯನ್ನು ಆಧರಿಸಿ 5 ಹೊಸ ಮತಗಟ್ಟೆಗಳನ್ನು ರಚನೆ ಮಾಡಲಾಗಿದೆ. ಚನ್ನಪಟ್ಟಣ ನಗರಪ್ರದೇಶದಲ್ಲಿ 62 ಮತಗಟ್ಟೆಗಳು, 214 ಮತಗಟ್ಟೆಗಳು ಗ್ರಾಮಾಂತರ ಭಾಗದಲ್ಲಿ ಸ್ಥಾಪಿಸಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ, ವಿಕಲಚೇತನರಿಗಾಗಿ ರ್ಯಾಂಪ್ ವ್ಯವಸ್ಥೆಗಳನ್ನು ಮಾಡಲು ಕ್ರಮವಹಿಸಲಾಗಿದೆ. ಪ್ರತಿಯೊಂದು ಮತಗಟ್ಟೆಗಳಲ್ಲಿ 100 ಮೀಟರ್ ಅಂತರದಲ್ಲಿ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಅವರ ಕ್ರಮಸಂಖ್ಯೆಯನ್ನು ಪರಿಶೀಲಿಸಿ ತಿಳಿಸುವ ಸಲುವಾಗಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಅದರಲ್ಲಿ ಬೂತ್ ಲೆವಲ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ತ್ವರಿತವಾಗಿ ಮತದಾರರ ಹೆಸರು ಹುಡುಕಲು ಆಂಗ್ಲ ಭಾಷೆಯಲ್ಲಿ ಮತದಾರರ ಪಟ್ಟಿಯನ್ನು ಒದಗಿಸಲಾಗುವುದು.

ಮೊಬೈಲ್ ಫೋನ್ , ಕ್ಯಾಮರಾ ನಿಷೇಧ :

ಸೆಕ್ಷನ್ 128 ಮತ್ತು ಚುನಾವಣೆ ನಡೆಸುವ ನಿಯಮಗಳ ನಿಯಮ 39 ರಂತೆ ನ.13ರಂದು ಮತದಾನದ ದಿನದಂದು ಮತದಾರರು ಮೊಬೈಲ್ ಪೋನ್ ಅಥವಾ ಕ್ಯಾಮರಾಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ. ಛಾಯಾ ಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂಘನೆಯಾಗಲಿದೆ. ಚುನಾವಣಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳು ಇರುವ ಕಾರಣಕ್ಕೆ ಪ್ರತಿ ಮತಗಟ್ಟೆಯಲ್ಲಿಯು 2 ಬ್ಯಾಲೆಟ್ ಯೂನಿಟ್‌ಗಳು ಕೆಲಸ ಮಾಡಲಿವೆ.

ಹೊರಗಿರುವ ಮತದಾರರಿಗೆ ಡಿಮ್ಯಾಂಡ್ :

ಈ ವರೆಗೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತ ಶಿಕಾರಿ ನಡೆಸುತ್ತಿದ್ದ ಅಭ್ಯರ್ಥಿಗಳು ಇದೀಗ ಉದ್ಯೋಗ ಅರಸಿ ಅಥವಾ ಇನ್ಯಾವುದೇ ಕಾರಣಗಳಿಂದ ಬೇರೆ ಊರುಗಳಲ್ಲಿ ನೆಲೆಸಿರುವ ಕ್ಷೇತ್ರದ ಮತದಾರರಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಅವರನ್ನು ಹುಡುಕಾಡುವ ಕಾರ್ಯ ನಡೆದಿದೆ.

ಗ್ರಾಮದಲ್ಲಿನ ಯುವ ಮತದಾರರು, ಉದ್ಯೋಗ ಇಲ್ಲವೇ ಶಿಕ್ಷಣಕ್ಕಾಗಿ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರೆಡೆ ನೆಲೆಸಿದ್ದಾರೆ. ಹೀಗಾಗಿ ಇಂತಹ ಮತದಾರರನ್ನು ಇಂದು ಊರಿಗೆ ಕರೆತಂದು ಮತ ಪಡೆಯಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಪ್ರತಿ ಬ್ಲಾಕ್ ಹಾಗು ಗ್ರಾಪಂ ವ್ಯಾಪ್ತಿಗೊಂದು ತಂಡ ರಚನೆ ಮಾಡಿರುವ ಅಭ್ಯರ್ಥಿಗಳು, ಈ ತಂಡದ ಮೂಲಕ ಊರು ಬಿಟ್ಟು ಮತದಾರರ ಪತ್ತೆಗೆ ಮುಂದಾಗಿದ್ದಾರೆ ಎಂಬುದು ಈ ಬಾರಿಯ ಚುನಾವಣೆಯ ವಿಶೇಷ. ಕ್ಷೇತ್ರದಿಂದ ದೂರ ಇರುವವರು ಮತದಾನದಲ್ಲಿ ಭಾಗಿಯಾದರೆ, ಅವರಿಗೆ ಟಿಎ, ಡಿಎ ಸೇರಿ ಹೆಚ್ಚುವರಿ ಹಣ ಹಂಚಿಕೆಯಾಗುವ ಬಗ್ಗೆಯು ಮಾತುಗಳು ಹರಿದಾಡುತ್ತಿವೆ.

ಬಾಕ್ಸ್‌............

ಸಾರ್ವಜನಿಕ ರಜೆ ಘೋಷಣೆ :

ನ.13ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿರುವುದರಿಂದ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರನಾಗಿರುವ ಎಲ್ಲಾ ಅರ್ಹ ಮತದಾರರಿಗೆ ಮತದಾನ ಮಾಡುವುದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ನೌಕರರಿಗೂ ಸಹ ಪ್ರಜಾಪ್ರತಿನಿಧಿ ಕಾಯಿದೆ 1954 ರ ಕಲಂ 135 ಬಿ ರಡಿ ವೇತನ ಸಹಿತ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಬಾಕ್ಸ್ .................

ರೌಡಿಶೀಟರ್‌ಗಳ ಪೆರೇಡ್

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರೌಡಿಶೀಟರ್‌ಗಳ ಪೆರೇಡ್ ನಡೆಸಲಾಗಿದ್ದು, 17 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಜಿಲ್ಲಾದ್ಯಂತ 16 ಕಡೆ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ಕಣ್ಣಿಡಲು ಒಟ್ಟು 2 ತಂಡಗಳಿವೆ.

ಬಾಕ್ಸ್‌..................

ವಿಶೇಷ ಮತಗಟ್ಟೆ ಸ್ಥಾಪನೆ!

ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ 5 ಸಖಿ ಮತಗಟ್ಟೆಗಳು, 1 ವಿಶೇಷ ಚೇತನರ ನಿರ್ವಹಣೆ ಮತಗಟ್ಟೆ, 1 ಯುವಜನ ನಿರ್ವಹಣೆಯ ಮತಗಟ್ಟೆ, 1 ಧ್ಯೇಯ ಆಧಾರಿತ ಮತಗಟ್ಟೆ, 1 ಸಾಂಪ್ರದಾಯಿಕ ಮತಗಟ್ಟೆ , 1 ಪಿಡ್ಲಬ್ಲೂಡಿ ಮತಗಟ್ಟೆ ಸ್ಥಾಪಿಸಲಾಗಿದೆ.

ಬಾಕ್ಸ್ ...........

- ಚನ್ನಪಟ್ಟಣ ಕ್ಷೇತ್ರಕ್ಕೆ 1350ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

- 8 ತುಕಡಿ ಅರೆಸೇನಾ ಪಡೆಯ ನಿಯೋಜನೆ,

-504 ಅರೆಸೇನಾ ಪಡೆಯ ಸಿಬ್ಬಂದಿ,

-4 ಕೆಎಸ್‌ಆರ್‌ಪಿ ತುಕಡಿ,

-680 ಸಿವಿಲ್‌ಪೊಲೀಸರು,

-15 ಎಫ್‌ಐಆರ್‌ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ

-32 ಸೆಕ್ಟರ್ ಮೊಬೈಲ್,

-12ಕ್ಕೂ ಹೆಚ್ಚುಎನ್ ಸಿಆರ್,

- ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆ,

- 196 ಕ್ರಿಟಿಕಲ್ ಮತಗಟ್ಟೆ (7 ಪ್ಯಾರಾ ಮಿಲಿಟರಿ ನಿಯೋಜನೆ)

- 276 ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟ್

- 1,252ಮತಗಟ್ಟೆ ಸಿಬ್ಬಂದಿ

ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಡುವ 9 ಅಬಕಾರಿ ಪ್ರಕರಣ ದಾಖಲು

ಜಪ್ತಿ ವಸ್ತುಗಳು - 676 ಸೀರೆ

ಸೂಕ್ಷ್ಮ ವೀಕ್ಷಕರು- 152

ಸೂಕ್ಷ್ಮ ಮತಗಟ್ಟೆಗಳಲ್ಲಿ ಒಬ್ಬರು ಪೊಲೀಸ್ ಹಾಗೂ ಒಬ್ಬರು ಗೃಹ ರಕ್ಷಕರು (ಹೋಮ್ ಗಾರ್ಡ್) ಇರುತ್ತಾರೆ. ಸಾಮಾನ್ಯ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಹಾಗೂ 54 ಕ್ಲಸ್ಟರ್ ಮತಗಟ್ಟೆಗಳಿಗೆ ಎಎಸ್‌ಐ ರ್ಯಾಂಕ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಕೋಟ್...........

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಎಲ್ಲರು ತಪ್ಪದೆ ಭಾಗವಹಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಪಾರದರ್ಶಕ ಚುನಾವಣೆಗೆ ಸಹಕಾರ ನೀಡಿ. ಶೇ.100ರಷ್ಟು ಮತದಾನದ ಗುರಿ ತಲುಪಲು ಮತದಾರರೇ ಸಹಕಾರ ನೀಡಬೇಕು.

-ಯಶವಂತ್ ವಿ.ಗುರುಕರ್, ಜಿಲ್ಲಾಕಾರಿ, ರಾಮನಗರ

ಕೋಟ್ ............

ಉಪಚುನಾವಣೆ ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.

-ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, ರಾಮನಗರ.