ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ಪ್ರಸ್ತುತ ಅಗತ್ಯಗಳಿಗೆ ಪೂರಕವಾದ ಲೀಥಿಯಂ, ಕೊಬಾಲ್ಟ್, ನಿಕ್ಕೆಲ್ ಇತ್ಯಾದಿ ಖನಿಜಗಳ ನಿಕ್ಷೇಪ ಪತ್ತೆ ಮಾಡಲಾಗಿದ್ದು, ಈ ಖನಿಜಗಳ ಗಣಿಗಾರಿಕೆ ಆರಂಭಿಸುವ ಮೂಲಕ ಆತ್ಮನಿರ್ಭರತೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ಕಾಂತ ರಾವ್ ಹೇಳಿದ್ದಾರೆ.ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸಾಗರ ಮತ್ತು ಕರಾವಳಿ ಸಮೀಕ್ಷಾ ವಿಭಾಗದಿಂದ ನಗರದ ಖಾಸಗಿ ಹೊಟೇಲಲ್ಲಿ ಹಮ್ಮಿಕೊಳ್ಳಲಾದ ‘ಕಡಲಾಚೆಗಿನ ಅನ್ವೇಷಣೆಗಳು’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಲೀಥಿಯಂನಂಥ ಉತ್ಪನ್ನಗಳನ್ನು ಬಹುತೇಕ ಆಮದು ಮಾಡಲಾಗುತ್ತಿದೆ. ತಜ್ಞರ ನೆರವಿನಿಂದ ಇದೀಗ ಅನೇಕ ಕಡೆಗಳಲ್ಲಿ ಈ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ಗಣಿಗಾರಿಕೆ ಮೂಲಕ ತೆಗೆಯಲು ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕಡಲಾಚೆಗಿನ ಇಂಥ ಅಭಿವೃದ್ಧಿ ಪೂರಕ ಅನ್ವೇಷಣೆಗಳಿಗೆ ಸರ್ಕಾರದ ವಿವಿಧ ಸಂಸ್ಥೆಗಳ ಸಹಕಾರ ಬೇಕಿದೆ ಎಂದರು.ಪ್ರಸ್ತುತ ಭಾರತದ ಭೂಭಾಗದಲ್ಲಿ 3000ಕ್ಕೂ ಅಧಿಕ ಬೃಹತ್ ಗಣಿಗಳು, 30 ಸಾವಿರಷ್ಟುಸಣ್ಣ ಗಣಿಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತಕ್ಕೆ 20 ಲಕ್ಷ ಚದರ ಕಿ.ಮೀ.ನಷ್ಟು ವಿಶಾಲ ಎಕ್ಸ್‌ಕ್ಲೂಸಿವ್ ಎಕನಾಮಿಕ್ ಝೋನ್ ಇದ್ದು, ಇದರಲ್ಲಿ ಅಪಾರ ಖನಿಜ, ನಿರ್ಮಾಣಯೋಗ್ಯ ಮರಳು ಲಭ್ಯವಿದೆ. ಕಳೆದ 40 ವರ್ಷಗಳಿಂದ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಈ ನಿಟ್ಟಿನಲ್ಲಿ ಕಡಲಾಳದ ಅನ್ವೇಷಣೆ ನಡೆಸುತ್ತಿದ್ದು, 35ರಷ್ಟು ಖನಿಜ ಬ್ಲಾಕ್‌ಗಳನ್ನು ಗುರುತಿಸಿ ಸರ್ಕಾರಕ್ಕೆ ನೀಡಿದೆ. ಪ್ರತಿ ವರ್ಷ ಇಂತಹ 4-5 ಬ್ಲಾಕ್‌ಗಳ ಅನ್ವೇಷಣೆ ನಡೆಯುತ್ತಿದೆ, ಈ ಬ್ಲಾಕ್‌ಗಳ ಸದ್ಬಳಕೆ ಮಾಡಿಕೊಳ್ಳಬೇಕು. ಖಾಸಗಿಯವರನ್ನು ಇದರಲ್ಲಿ ಸೇರಿಸಿಕೊಂಡಾಗ ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದು ಕಾಂತ ರಾವ್ ಹೇಳಿದರು.
ಕಡಲಾಳದಲ್ಲಿ ನಿರ್ಮಾಣಯೋಗ್ಯ ಮರಳು, ಲೈಮ್ ಮಡ್, ಖನಿಜಗಳ ನಿಕ್ಷೇಪ ಗುರುತಿಸಲಾಗಿದೆ. ಮೊದಲ ಕಡಲಾಳದ ಗಣಿಗಾರಿಕೆ ಗುತ್ತಿಗೆಯನ್ನು ಜೆಎನ್‌ಪಿಟಿ ಬಂದರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಶೇ.90ರಷ್ಟು ಆಮದು ಮಾಡಲಾಗುತ್ತಿದ್ದ ಫಾಸ್ಪೋರೈಟ್ ಖನಿಜ ನಿಕ್ಷೇಪ ಇದೀಗ ಮಂಗಳೂರು, ಕಾರವಾರ ಮತ್ತಿತರ ಕಡಲಾಳದ ಪರ್ವತಗಳಲ್ಲಿ ಪತ್ತೆಯಾಗಿದೆ ಎಂದರು.
ಗಣಿ ಸಚಿವಾಲಯದ ನಿರ್ದೇಶಕ ಮುಸ್ತಾಕ್ ಅಹ್ಮದ್ ಮಾತನಾಡಿ, ಕಡಲಾಳ ಪ್ರದೇಶ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯಲ್ಲಿ ಹಿಂದೆ ಕಡಲಾಳದ ಗಣಿಗಳನ್ನು ಹರಾಜು ಮಾಡುವುದಕ್ಕೆ ಅವಕಾಶ ಇರಲಿಲ್ಲ, ಈಗ ತಿದ್ದುಪಡಿ ತರಲಾಗಿದ್ದು, ಈ ಮೂಲಕ ಕಡಲಾಳದ ಖನಿಜ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವುದು ಸರಳವಾಗಿದೆ ಎಂದು ಹೇಳಿದರು.ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಮಹಾನಿರ್ದೇಶಕ ಜನಾರ್ದನ್ ಪ್ರಸಾದ್, ಉಪಮಹಾನಿರ್ದೇಶಕ ಬಸಬ್ ಮುಖ್ಯೋಪಾಧ್ಯಾಯ್ ಇದ್ದರು.