ಉಡುಪಿ: ಕರ್ನಾಟಕ ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿಯ ಎರ್ಮಾಳ್‌ನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ಕೇಂದ್ರ ವಿಮಾನ ಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆ ಮೇರೆಗೆ ಸಂಸದ ಕೋಟ ಅವರು ಎರ್ಮಾಳ್ ನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಚಿವರು ಸಂಸದರಿಗೆ ಬರೆದ ಪತ್ರದಲ್ಲಿ, ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಸುಧಾರಣೆಗೆ ಅವಕಾಶವಿದೆ. ಅದರಂತೆ ಸೂಕ್ತವಾದ ಸ್ಥಳವನ್ನು ಗುರುತಿಸಿ, ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ನಡೆಸಿ, ಪ್ರಸ್ತಾಪನೆ ಸಲ್ಲಿಸಿದರೆ ಕೇಂದ್ರ ಸರಕಾರದ ಗ್ರೀನ್ ಫೀಲ್ಡ್ ನೀತಿಯಂತೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ವಿಮಾನ ಯಾನ ಸಚಿವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರ ಭರವಸೆಯಿಂದ ಉಡುಪಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ಬಹು ದಿನಗಳ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಕಾಪು ತಾಲೂಕಿನ ಎರ್ಮಾಳು ಎಂಬಲ್ಲಿ ಈ ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಭೂಮಿಯನ್ನು ಒದಗಿಸುವುದು ರಾಜ್ಯ ಸರ್ಕಾರದ ಬಾಧ್ಯತೆಯಾಗಿದ್ದು, ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ.