ಕನ್ನಡಪ್ರಭ ವಾರ್ತೆ ಮದ್ದೂರು

ಸರ್ವ ಜನಾಂಗವನ್ನು ಪ್ರೀತಿಸುತ್ತಲೇ ಒಕ್ಕಲಿಗ ಜನಾಂಗದ ಅಭ್ಯುದಯಕ್ಕೆ ಶ್ರಮಿಸಿದ ಅಜಾತಶತ್ರು ನಾಗಣ್ಣ ಬಾಣಸವಾಡಿ ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮುಕ್ತ ಕಂಠದಿಂದ ಪ್ರಶಂಸಿದರು.

ನಗರದ ಕುವೆಂಪು ಸಭಾಂಗಣದಲ್ಲಿ ಹೊನ್ನೇರು ಬಳಗ, ಶ್ರೀ ಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಏರ್ಪಡಿಸಿದ್ದ ಒಕ್ಕಲಿಗ ವಜ್ರ ನಾಗಣ್ಣ ಬಾಣಸವಾಡಿ ಅವರ 69ನೇ ಜನ್ಮದಿನಾಚರಣೆ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ದೀಪ ತನ್ನನ್ನು ತಾನು ಸುಟ್ಟುಕ್ಕೊಂಡು ಇತರರಿಗೆ ಬೆಳಕು ಕೊಡುವಂತೆ ನಾಗಣ್ಣ ಬಾಣಸವಾಡಿ ಅವರು ಒಕ್ಕಲಿಗ ಜನಾಂಗದ ಅಭ್ಯುದಯಕ್ಕಾಗಿ ತನ್ನ ಕುಟುಂಬದ ಹಿತವನ್ನು ಬದಿಗೊತ್ತಿ ಶ್ರಮಿಸಿದರು ಎಂದರು.

ಉತ್ತರ ಕರ್ನಾಟದ ಕಡು ಒಕ್ಕಲಿಗರನ್ನು ಮುಖ್ಯವಾಹಿನಿಗೆ ಕರೆ ತಂದು ಅವರಿಗೆ ಒಕ್ಕಲಿಗ ಜನಾಂಗದ ಜಾತಿ ಪ್ರಮಾಣ ಪತ್ರ ಕೊಡಿಸಬೇಕು, ತನ್ಮೂಲಕ ಆ ಭಾಗದಲ್ಲಿ ನಿರಂತರ ಶೊಷಣೆ ಹಾಗೂ ತುಳಿತಕ್ಕೆ ಒಳಗಾದ ಕಡು ಒಕ್ಕಲಿಗರ ರಕ್ಷಿಸಬೇಕೆಂದು ನಾಗಣ್ಣ ಬಾಣಸವಾಡಿ ಅಹರ್ನಿಶಿ ಶ್ರಮಿಸಿದ್ದರು ಎಂದು ಸ್ಮರಿಸಿದರು.

ನಾಗಣ್ಣ ಬಾಣಸವಾಡಿ ಅವರ ಹೆಸರಿನ ಸಮಾಜ ಸೇವಾ ಪ್ರಶಸ್ತಿಯನ್ನು ಸಮುದಾಯ ಹಿತಕ್ಕಾಗಿ ಶ್ರಮಿಸಿದವರಿಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ. ಇದರಿಂದ ಜನಾಂಗ ಪರ ಒಲವು- ನಿಲುವು ಹೊಂದಿರುವವರಿಗೆ ಮತ್ತಷ್ಟು ಪ್ರೇರಣೆ ಸಿಗಲಿದೆ. ವಿಶ್ರಾಂತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡರಿಗೆ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ ಎಂದರು.


ಪ್ರಶಸ್ತಿ ಸ್ವೀಕರಿಸಿದ ಬಲರಾಮೇಗೌಡರು ಮಾತನಾಡಿ, ಒಕ್ಕಲಿಗ ಹಾಗೂ ಒಕ್ಕಲುತನದ ಉಳಿವು, ಬೆಳೆಯುವ ಮಹತ್ವ ಅರಿತು ರಾಜಕಾರಣಿಗಳು, ಮಠಾಧೀಶರು ಒಕ್ಕಲತನಕ್ಕೆ ಒಕ್ಕಲಿಗ ಜನಾಂಗಕ್ಕೆ ಬಾಧಕ ಉಂಟಾದಾಗ ಪ್ರತಿಕ್ರಿಯಿಸುವ, ಪ್ರತಿಭಟಿಸುವ ಸ್ವಭಾವ ಬೆಳೆಸಿಕೊಳ್ಳಬೇಕು. ಆದರೆ, ಅದು ಆಗುತ್ತಿಲ್ಲ. ಒಕ್ಕಲಿಗರು ಸಂಘಟಿತರಾಗಿ ಜಾಗೃತರಾಗುವುದು ಜರೂರು, ಹಿಂದಿಗಿಂತಲೂ ಪ್ರಸ್ತುತ ಅತ್ಯಗತ್ಯ ಹೆಚ್ಚಾಗಿದೆ ಎಂದರು.

ಸಮುದಾಯದ ಹಿತಕ್ಕಾಗಿ ಶ್ರಮಿಸಿದ ನಾಗಣ್ಣ ಬಾಣಸವಾಡಿ ಅವರು ಆ ಮೂಲಕ ತಮ್ಮ ಹುಟ್ಟನ್ನು ಸಾರ್ಥಕಗೊಳಿಸಿಕೊಂಡರು.

ಸಮಾಜದಲ್ಲಿ ರಾಜಕಾರಣ, ಅಧಿಕಾರದ ಯಾವ ಸ್ಥಾನಗಳೂ ಇಲ್ಲದಿದ್ದರೂ ಜನಾಂಗದ ಹಿತಕ್ಕಾಗಿ ಶ್ರಮಿಸಿ ಸಮುದಾಯದ ಮನ್ನಣೆಗಳಿಸಿದ ವ್ಯಕ್ತಿ ರೂಪದ ಶಕ್ತಿ. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಲು ಅಭಿಮಾನ ಹೆಚ್ಚಾಗಿದೆ ಎಂದರು.

ನಿವೃತ್ತ ಕಾರ್ಯಪಾಲಕ ಅಭಿಯಂತರ ನಾಗರಾಜು ಮಾತನಾಡಿ, ಉದ್ಯೊಗದ ಪದೋನ್ನತಿಯ ಮೀಸಲಾತಿ ತಾರತಮ್ಯ ವಿರೊಧಿಸಿ ಆರಂಭಿಸಿದ ಅಹಿಂಸಾ ಸಂಘಟನೆಯ ಮಂಡ್ಯ ಜಿಲ್ಲಾ ಗೌರವಾಧ್ಯಕ್ಷರಾಗಿದ್ದ ನಾಗಣ್ಣ ಬಾಣಸವಾಡಿ ಸರ್ಕಾರಿ ನೌಕರರ ಪರವಾಗಿಯೂ ಹೋರಾಟ ಮಾಡಿ ನ್ಯಾಯ ಕೊಡಿಸಿದ್ದಾರೆ. ಅಂತಹ ಜನ ನಾಯಕರ ಸ್ಮರಣೆ, ಸಮಾಜ ಪರತೆ ಬೆಳೆಸಿಕೊಂಡಿರುವವರಿಗೆ ಪ್ರೇರಣೆ ಆಗಲಿದೆ ಎಂದರು.

ಉತ್ತರ ಕರ್ನಾಟಕದ ಕಡು ಒಕ್ಕಲಿಗ ಮುಖಂಡ ಗುರುನಾಥ್ ದೇಸಾಯಿ ಮಾತನಾಡಿ, ನಮ್ಮ ಭಾಗದ ಕಡು ಒಕ್ಕಲಿಗರ ಸಂಘಟಿಸಿ ಅವರಿಗೆ ಶೈಕ್ಷಣಿಕ‌, ಸಾಮಾಜಿಕ ಮೀಸಲಾತಿಗಾಗಿ ಒಕ್ಕಲಿಗ ಜಾತಿ ಪ್ರಮಾಣ ಪತ್ರ ಕೊಡಿಸಿ ನಮ್ಮನ್ನು ಮುಖ್ಯವಾಹಿನಿಗೆ ತರುವಲ್ಲಿ ನಾಗಣ್ಣ ಬಾಣಸವಾಡಿ ಅವರು ಹಾಕಿದ ಶ್ರಮ ಆಪಾರವಾದದ್ದು ಎಂದರು.

ಈ ವೇಳೆ ಆಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ಸಾಗರ್ ಗೌಡ, ಜಯಶ್ರೀ, ಅಂಬರೀಶ್ ಗೌಡ, ಹೊನ್ನೆರು ಬಳಗದ ಎಸ್.ದಯಾನಂದ್, ಶ್ರೀ‌ಕಾಲಭೈರವ ಕ್ರೀಯಾಶೀಲ ಒಕ್ಕಲಿಗ ಕಾರ್ಯಪಡೆ ಅಧ್ಯಕ್ಷ ಎಂ.ಪಿ.ಲಿಂಗೇಗೌಡ, ನ.ಲಿ.ಕೃಷ್ಣ. ಪ್ರೊ.ಕೃಷ್ಣೇಗೌಡ, ಗುಡಿಗೆರೆ ಮಂಜುನಾಥ್, ಟಿ.ಎಂ.ಗೊಪಾಲ್ ಉಪಸ್ಥಿತರಿದ್ದರು.