- ಬೆಳಲಗೆರೆಯಲ್ಲಿ ನಿಷೇಧಾಜ್ಞೆ । ಡಿಸಿ-ಎಸ್ಪಿ ನೇತೃತ್ವದಲ್ಲಿ ಉಭಯ ಜಾತಿಗಳ ಮುಖಂಡರ ಸಭೆ, ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಲಿತ ಸಮುದಾಯದವರು ದೇವಸ್ಥಾನ ಪ್ರವೇಶ ಮಾಡಿದರು ಎಂಬ ಕಾರಣಕ್ಕೆ ಓರ್ವನ ಮೇಲೆ ಹಲ್ಲೆ ಮಾಡಿದ್ದರಿಂದ ಚನ್ನಗಿರಿ ತಾ. ಬೆಳಲಗೆರೆ ಗ್ರಾಮದಲ್ಲಿ ಶುಕ್ರವಾರ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ವರದಿಯಾಗಿದೆ.

ಬೆಳಲಗೆರೆಯಲ್ಲಿ ಶುಕ್ರವಾರ ಅಜ್ಜಿ ಹಬ್ಬ ಆಚರಿಸಿ, ಪದ್ಧತಿಯಂತೆ ಮನೆಯಲ್ಲಿ ಸಿಹಿ ಅಡುಗೆ ಮಾಡಿಕೊಂಡು, ಎಡೆ ಸಹಿತವಾಗಿ ಅಮ್ಮನನ್ನು ಹರಿಜನ ಕಾಲನಿಯ ಎಲ್ಲರೂ ಒಂದೇ ಕಡೆ ಅಮ್ಮನನ್ನು (ಕೇಲು) ತಂದಿಟ್ಟು, ಪೂಜಿಸುತ್ತಾರೆ. ನಂತರ ಅವುಗ‍ಳನ್ನು ಒಟ್ಟಿಗೆ ಭಜನೆ, ಮೆರವಣಿಗೆಯಲ್ಲಿ ಕೊಂಡೊಯ್ದು ಗ್ರಾಮದ ಗಡಿಭಾಗಕ್ಕೆ ಇಟ್ಟು ಬರುವ ಪದ್ಧತಿಯಂತೆ ಶುಕ್ರವಾರವೂ ಆಚರಿಸಲಾಯಿತು.


ಯುವಕರನ್ನು ಹಗ್ಗಗಳಿಂದ ಕಟ್ಟಿದರು:

ಊರ ಹೊರಗೆ ಎಡೆ ಇಟ್ಟು ಬರುವಾಗ ದಲಿತ ಸಮುದಾಯದ ಐದಾರು ಯುವಕರು ಗ್ರಾಮದ ದೊಡ್ಡಯ್ಯ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿಕೊಂಡು, ಕೈಮುಗಿದು ಹೊರ ಬರುತ್ತಿದ್ದರು. ಈ ವೇಳೆ ಮತ್ತೊಂದು ಜಾತಿಯ ಜನರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ತಮ್ಮ ದೇವಸ್ಥಾನದ ಬಳಿ ಬರಬಾರದೆಂದು ಹೇಳಿ ಆಕ್ಷೇಪಿಸಿದ್ದಾರೆ. ಘಟನೆಯಲ್ಲಿ ದಲಿತ ಯುವಕರನ್ನು ಹಗ್ಗಗಳಿಂದ ಕಟ್ಟಿ ಹಾಕಿ, ಹಲ್ಲೆ ಮಾಡಿದ್ದಾರೆಂದು ಗ್ರಾಮದ ದಲಿತರು ಆರೋಪಿಸಿದ್ದಾರೆ.

ಎರಡೂ ಜಾತಿಯವರ ಮಧ್ಯೆ ಜಗಳ ನಡೆದು, ಈ ಪೈಕಿ ಐದಾರು ಜನ ದಲಿತ ಯುವಕರಿಗೆ ನಿಂದಿಸಿ, ಹಲ್ಲೆ ಮಾಡಲಾಗಿದೆ. ದಲಿತ ಯುವಕರಿಗೆ ಹಲ್ಲೆ ಮಾಡುವ ವೇಳೆ ಬಸವಾಪಟ್ಟಣ ಪೊಲೀಸರು ವಾಹನ ಬರುತ್ತಿರುವುದನ್ನು ಗಮನಿಸಿ, ಹಗ್ಗ ಬಿಚ್ಚಿದ್ದಾರೆ. ನಂತರ ಹಲ್ಲೆಗೊಳಗಾದ ಯುವಕರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಗ್ರಾಮದ ಈ ದಿಢೀರ್ ಘಟನೆ ಬಿಗುವಿನ ವಾತಾವರಣಕ್ಕೂ ಕಾರಣವಾಯಿತು.

ವಿಷಯ ತಿಳಿದ ದಲಿತ ಸಂಘಟನೆ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ, ಮಾದಿಗ ಸಮಾಜದವರಿಗೆ ಧೈರ್ಯ ಹೇಳಿದರು. ನಂತರ ಸಮುದಾಯದವರು ಘಟನೆಯ ಬಗ್ಗೆ ಮುಖಂಡರಿಗೆ ವಿವರಿಸಿದ್ದಾರೆ. ಊರಲ್ಲಿ ಶುಕ್ರವಾರ ಅಜ್ಜಿ ಹಬ್ಬ ಮಾಡಿದ್ದು, ಪದ್ಧತಿಯಂತೆ ಭಜನೆ ಮಾಡಿಕೊಂಡು ಹೋಗಿ ಊರ ಹೊರಗೆ ಎಡೆ ಇಟ್ಟು ಬರುತ್ತೇವೆ. ಅದೇ ರೀತಿ ಎಡೆ ಇಟ್ಟು ಬರುವಾಗ ದೇವಸ್ಥಾನದಲ್ಲಿದ್ದ ದೇವರಿಗೆ ಕೈಮುಗಿದು ಬರಲು ಐದಾರು ಹುಡುಗರು ಹೋಗಿ, ದೇವರಿಗೆ ಕೈಮುಗಿದಿದ್ದಾರೆ. ದೇಗುಲದಿಂದ ಬರುವಾಗ ಮತ್ತೊಂದು ಜಾತಿಗೆ ಸೇರಿದವರು ನಿಂದಿಸಿ, ಹಗ್ಗದಿಂದ ಕಟ್ಟಿ ಹಲ್ಲೆ ಮಾಡಿದ್ದಾರೆಂದು ಅಳಲು ತೋಡಿಕೊಂಡಿದ್ದಾರೆ.

ಓರ್ವನಿಗೆ ಹಲ್ಲೆ ಮಾಡಿದ್ದು, ಐದಾರು ಜನ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವಸ್ಥಾನ ಪ್ರವೇಶಿಸಿದರೆಂಬ ಕಾರಣಕ್ಕೆ ತಮ್ಮ ಜಾತಿಯ ಐದಾರು ಹುಡುಗರ ಮೇಲೆ ಏಕಾಏಕಿ ಹಲ್ಲೆ ಮಾಡಿ, ಕಟ್ಟಿ ಹಾಕಿದ್ದು ಸರಿಯಲ್ಲ. ಘಟನೆಗೆ ಸಂಬಂಧಿಸಿದ ವೀಡಿಯೋ ಇದೆ. ಹಲ್ಲೆ ಮಾಡಿರುವ ವೀಡಿಯೋ ಇದೆ. ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲೂ ದಾಖಲಾಗಿರಬಹುದು. ಅದೇ ವೇಳೆಗೆ ಪೊಲೀಸ್ ವ್ಯಾನ್ ಗ್ರಾಮಕ್ಕೆ ಬರುತ್ತಿದ್ದಂತೆ ಹಗ್ಗ ಬಿಚ್ಚಿದ್ದಾರೆ. ದೇವಸ್ಥಾನದಲ್ಲಿ ಏನಾಯಿತೆಂದು ಸಿಸಿ ಕ್ಯಾಮೆರಾ ಪರಿಶೀಲಿಸಲಿ. ಈ ಹಿಂದೆ ಇಂತಹ ಯಾವುದೇ ಘಟನೆ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

- --

(ಬಾಕ್ಸ್‌-1)

* ಎಲ್ಲರೂ ಸೇರಿ ದೇವಸ್ಥಾನ ಪ್ರವೇಶಿಸೋಣ

ದೇವಸ್ಥಾನಕ್ಕೆ ನಮಗೆ ಪ್ರವೇಶವಿಲ್ಲ. ಹಣ್ಣು-ಕಾಯಿ ಕೊಟ್ಟರೆ, ನೀರು ಚುಮುಕಿಸಿ ಒಳಗೆ ಒಯ್ಯುತ್ತಾರೆ ಎಂದು ದಲಿತ ಸಮುದಾಯದವರು ದೂರಿದ್ದಾರೆ. ಅನಂತರ ದಲಿತ ಮುಖಂಡರು ತಮ್ಮ ಸಮುದಾಯದವರಿಗೆ ಧೈರ್ಯ ಹೇಳಿದರು. ಹಲ್ಲೆ ಮಾಡಿದವರು ಯಾರಿದ್ದಾರೋ ಅಂತಹವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಹಲ್ಲೆ ಮಾಡಿದವರ ಇಡೀ ಸಮುದಾಯವನ್ನು ನಾವು ದೂರುವುದು ಬೇಡ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಅಧಿಕಾರಿಗಳೂ ಗ್ರಾಮಕ್ಕೆ ಬಂದಿದ್ದಾರೆ. ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು. ಮನುಷ್ಯರ ದೃಷ್ಟಿಯಲ್ಲಿ ಮನುಷ್ಯರೇ ಸಮಾನರಲ್ಲ. ಎಲ್ಲರೂ ಸೇರಿ ದೇವಸ್ಥಾನ ಪ್ರವೇಶಿಸೋಣ ಎಂದು ದಲಿತ ಮುಖಂಡರು ಧೈರ್ಯ ತುಂಬಿದ್ದಾರೆ.

- - -

(ಬಾಕ್ಸ್‌-2)

* ಡಿಸಿ, ಎಸ್ಪಿ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ: ದೇಗುಲಕ್ಕೆ ದಲಿತರು ಪ್ರವೇಶ

ದಲಿತರು ದೇವಸ್ಥಾನ ಪ್ರವೇಶ, ಹಲ್ಲೆ ಘಟನೆ ಹಿನ್ನೆಲೆಯಲ್ಲಿ ಶನಿವಾರ ಬೆಳಲಗೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಚನ್ನಪ್ಪ, ಉಭಯ ಜಾತಿಗಳ ಮುಖಂಡರು, ಹಿರಿಯರು, ಸಮಾಜದವು ಹಾಗೂ ಗ್ರಾಮಸ್ಥರ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು. ಇನ್ನು ಮುಂದೆ ಗ್ರಾಮದ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದರು.

ಸಭೆಯನ್ನು ಸುಖಾಂತ್ಯಗೊಳಿಸಿದ ನಂತರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ಸಮಕ್ಷಮದಲ್ಲಿ ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡಿದರು. ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ, ತಹಸೀಲ್ದಾರ್ ಎನ್.ಜೆ.ನಾಗರಾಜ, ದಲಿತ ಸಂಘಟನೆಗಳ ಮುಖಂಡರಾದ ಕಗತೂರು ಆನಂದ, ರಂಗನಾಥ, ಕುಬೇಂದ್ರ ಸ್ವಾಮಿ, ಪ್ರಭಾಕರ, ಉಭಯ ಜಾತಿಗಳ ಮುಖಂಡರು, ಹಿರಿಯರು, ಗ್ರಾಮದ ವಿವಿಧ ಸಮುದಾಯದವರು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಧ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ.

- - -

-1ಕೆಡಿವಿಜಿ3, 4.ಜೆಪಿಜಿ: -1ಕೆಡಿವಿಜಿ5, 6.ಜೆಪಿಜಿ: