ಜಿಲ್ಲೆಯಲ್ಲಿ ಶಿಥಲೀಕರಣ ಘಟಕ ಸ್ಥಾಪನೆಗೆ ಕ್ರಮವಹಿಸಿ: ಮಹಮ್ಮದ ಮೊಹಸಿನ್

| Published : Mar 07 2024, 01:49 AM IST

ಜಿಲ್ಲೆಯಲ್ಲಿ ಶಿಥಲೀಕರಣ ಘಟಕ ಸ್ಥಾಪನೆಗೆ ಕ್ರಮವಹಿಸಿ: ಮಹಮ್ಮದ ಮೊಹಸಿನ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಜಿಪಂ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ ಮೊಹಸಿನ್ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಪ್ರಮಾಣ ಅಧಿಕವಾಗಿದ್ದು, ರಪ್ತು ಪ್ರಮಾಣ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಶಿಥಿಲೀಕರಣ ಘಟಕ ಸ್ಥಾಪನೆಗೆ ಕ್ರಮವಹಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಪ್ರಮಾಣ ಅಧಿಕವಾಗಿದ್ದು, ರಪ್ತು ಪ್ರಮಾಣ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಶಿಥಿಲೀಕರಣ ಘಟಕ ಸ್ಥಾಪನೆಗೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹಮ್ಮದ ಮೊಹಸಿನ್ ಸೂಚಿಸಿದರು.

ಜಿಪಂ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ಮತ್ತು ಅರಿಶಿಣ ಬೆಳೆ ಸಂಗ್ರಹಣೆಗೆ ಶಿಥಲೀಕರಣ ಘಟಕ ಅವಶ್ಯವಿದ್ದು, ತೋಟಗಾಕೆ ಇಲಾಖೆ ಸಹಾಯಧನ ನೀಡುವ ಮೂಲಕ ಘಟಕ ಸ್ಥಾಪನೆಗೆ ಕ್ರಮವಹಿಸಬೇಕು ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಪ್ರಮಾಣದ ಮಾಹಿತಿ ಪಡೆದುಕೊಂಡರು.

ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಸಲ್ಲದು. ಸಮಸ್ಯೆ ಹತೋಟಿ ಮೀರುವ ಮೊದಲೇ ಸಮಸ್ಯೆ ಬಗೆಹರಿಸುವ ಕೆಲಸವಾಗಬೇಕು. ಗ್ರಾಮಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜವಾಬ್ದಾರಿ ಹೆಚ್ಚಿಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹೆಸ್ಕಾಂನವರು ವಿದ್ಯುತ್ ಕಡಿತಗೊಳಿಸಬಾರದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಚಾಲ್ತಿಯಲ್ಲಿರಬೇಕು ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಪ್ರಥಮ ಆದ್ಯತೆ ನೀಡಿ, ನಂತರ ಖಾಸಗಿ ಕೊಳವೆಬಾವಿಯಿಂದ ಬಾಡಿಗೆ ಪಡೆದು ನೀರು ಒದಗಿಸಲು ಕ್ರಮವಹಿಸಿ, ಅನಿವಾರ್ಯ ಪರಿಸ್ಥಿತಿ ಇದ್ದಾಗ ಮಾತ್ರ ಹೊಸ ಕೊಳವೆಬಾವಿ ಕೊರೆಯಿಸಬೇಕು. ಗೋಶಾಲೆಗಳಿಗೆ ಮೇವು ಒದಗಿಸಬೇಕು. ಹೊಸದಾಗಿ ಗೋಶಾಲೆ ನಿರ್ಮಿಸಲು ಮುಂದೆ ಬಂದಲ್ಲಿ ಅನುಕೂಲ ಮಾಡಿಕೊಡಲು ತಿಳಿಸಿದರು.

ಬರುವ ಮುಂಗಾರು ಹಂಗಾಮಿಗೆ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆ ಇದೆ. ಪ್ರತಿಯೊಂದು ಇಲಾಖೆ ಅಧಿಕಾರಿಗಳು ಬಾಕಿ ಇರುವ ಎಲ್ಲ ಬಿಲ್‌ಗಳನ್ನು 2-3 ದಿನಗಳಲ್ಲಿ ಕ್ಲಿಯರ್‌ ಮಾಡಿಕೊಳ್ಳಬೇಕು. ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮವಹಿಸಬೇಕು. ವಿವಿಧ ಇಲಾಖೆಯ ಪ್ರಗತಿಯ ಮಾಹಿತಿಯನ್ನು ಪಡೆದ ಕಾರ್ಯದರ್ಶಿಗಳು, ಪ್ರಗತಿ ಕಡಿಮೆ ಇರುವ ಇಲಾಖೆಯ ಅಧಿಕಾರಿಗಳು ಮಾರ್ಚ್‌ ಅಂತ್ಯಕ್ಕೆ ಶೇ.100ರಷ್ಟು ಪ್ರಗತಿ ಸಾಧಿಸಲು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಮುಖ್ಯ ಸಿಇಒ ಶಶಿಧರ ಕುರೇರ, ಎಸ್ಪಿ ಅಮರನಾಥ ರೆಡ್ಡಿ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ವಿಶೇಷ ಜಿಲ್ಲಾಧಿಕಾರಿ ದುರುಗೇಶ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಇತರರು ಉಪಸ್ಥಿತರಿದ್ದರು.