ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಮಹಿಳೆಯರ ಉದ್ಯಮಶೀಲ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಜನಸಾಮಾನ್ಯರಿಗೆ ಕೈಗೆಟುವ ಬೆಲೆಯಲ್ಲಿ ಶುಚಿ-ರುಚಿ ಆಹಾರ ಒದಗಿಸಲು ಬೆಳಗಾವಿ ಜಿಲ್ಲಾ ಪಂಚಾಯಿತಿ ಮಹತ್ವದ ಯೋಜನೆಯೊಂದನ್ನು ತಾಲೂಕು ಕೇಂದ್ರ ಸ್ಥಾನಗಳಲ್ಲೂ ಅನುಷ್ಠಾನಕ್ಕೆ ಮುಂದಡಿ ಇಟ್ಟಿದೆ. ತನ್ಮೂಲಕ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರನ್ನು ಹೋಟೆಲ್ ಉದ್ಯಮದಲ್ಲಿ ತೊಡಗಿಸಿ ಅವರ ಸ್ವಾವಲಂಬಿ ಜೀವನಕ್ಕೆ ನೆರವಾಗುವ ಉದ್ದೇಶ ಹೊಂದಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ಎಲ್ಎಂ) ಅಡಿ ಈಗಾಗಲೇ ಜಿಪಂ ಆವರಣದಲ್ಲಿ ಆರಂಭಿಸಿರುವ ಅಕ್ಕ ಕೆಫೆಗೆ ಉತ್ತಮ ಸ್ಪಂದನೆ ಮತ್ತು ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಒಲವಿನ ಊಟ ಟ್ಯಾಗ್ಲೈನ್ ಹೊಂದಿರುವ ಅಕ್ಕ ಕೆಫೆ ಆರಂಭದಿಂದ ಜಿಲ್ಲೆಯ ಮಹಿಳಾ ಸ್ವಾವಲಂಬಿ ಬದುಕಿಗೆ ಮತ್ತಷ್ಟು ಬಲ ಬರುವ ಆಶಾಭಾವ ಮೂಡಿಸಿದೆ.ಮಹಿಳೆಯರ ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ವರ್ಷ ರಾಜ್ಯಾದ್ಯಂತ 50ಕ್ಕೂ ಅಧಿಕ ಅಕ್ಕ ಕೆಫೆ ಸ್ಥಾಪನೆಯ ಗುರಿ ಹೊಂದಿದೆ. ಅಕ್ಕ ಕೆಫೆ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕೈಗೆಟುವ ಬೆಲೆಯಲ್ಲಿ ಆಹಾರ ಒದಗಿಸುವ ಯೋಜನೆ ಇದಾಗಿದೆ. ಈ ಅಕ್ಕ ಕೆಫೆಗಳಲ್ಲಿ ಪಾನೀಯ, ಉಪಹಾರ, ಊಟ, ಹೋಳಿಗೆ ಊಟ, ತಿಂಡಿ ಚಹಾ ಮತ್ತಿತರ ಆಹಾರ ಸಿಗಲಿದೆ.ತಾಲೂಕು ಸ್ಥಳಗಳಲ್ಲಿ ಅಕ್ಕ ಕೆಫೆ ಆರಂಭಕ್ಕೆ ಅಗತ್ಯ ಜಾಗ ಗುರುತಿಸಲಾಗಿದೆ. ಇದಕ್ಕೆ ತಗುಲುವ ವೆಚ್ಚ ಮತ್ತು ನಿರೀಕ್ಷಿತ ಮಾಸಿಕ ವಹಿವಾಟು ಅಂದಾಜಿಸಿ ಯೋಜನೆಯ ವಿಸ್ಕೃತ ವರದಿಯುಳ್ಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಾಗಾಗಿ ಅಕ್ಕ ಕೆಫೆ ನಿರ್ಮಾಣಕ್ಕೆ ಬೇಕಾದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಇದರಿಂದ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ನಿವಾರಣೆಯಾಗಲಿದೆ.ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಸವದತ್ತಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರು, ಖಾನಾಪುರ, ಬೆಳಗಾವಿ ಕೋಟೆ ಕೆರೆ ಆವರಣದಲ್ಲಿ ತಲಾ 15 ಲಕ್ಷ ವೆಚ್ಚದಲ್ಲಿ ಅಕ್ಕ ಕೆಫೆಗಳು ತಲೆ ಎತ್ತಲಿವೆ. ಇದರಿಂದ ಪ್ರತಿ ಕೆಫೆಗಳಿಂದ ಮಾಸಿಕ 3 ಲಕ್ಷ ರೂ ಆದಾಯ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ಊಟ, ಉಪಹಾರಕ್ಕಾಗಿ ನೌಕರರು, ಸಿಬ್ಬಂದಿ, ಕಚೇರಿಗಳಿಗೆ ಆಗಮಿಸುವ ಜನರು, ಕಾರ್ಮಿಕರು, ವಿದ್ಯಾರ್ಥಿಗಳು ಬೇರೆಡೆ ಹೋಗುವುದು ತಪ್ಪಲಿದೆ.ಸರ್ಕಾರದ ಹಣದಿಂದಲೇ ಅಕ್ಕ ಕೆಫೆ ನಿರ್ಮಿಸಿ ಮಹಿಳಾ ಸ್ವಸಹಾಯ ಗುಂಪಿಗೆ ಹಸ್ತಾಂತರ ಮಾಡಲಾಗುವುದು. ಆನಂತರ ಕೆಫೆಯ ಖರ್ಚು ವೆಚ್ಚ, ಆದಾಯ ಎಲ್ಲವೂ ಸ್ವಸಹಾಯ ಗುಂಪಿಗೇ ಸೇರಿದ್ದು ಸ್ವಸಹಾಯ ಗುಂಪುಗಳ ಆಯ್ಕೆಗೆ ಸಮಿತಿ ಇದ್ದು ಉತ್ತಮ ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಲಿದೆ.ಗುಣಮಟ್ಟದ ಆಹಾರ ಪೂರೈಸುವ ಸ್ವಸಹಾಯ ಗುಂಪುಗಳನ್ನು ಸಮಿತಿಯು ಮೇಲ್ವಿಚಾರಣೆ ನಡೆಸಿ, ಎರಡು ಗುಂಪುಗಳಿಗೆ ಅಕ್ಕ ಕೆಫೆ ನಿರ್ಮಿಸಲು ಅವಕಾಶ ನೀಡಲಾಗುವುದು. ಮೂರು ತಿಂಗಳಿಗೊಮ್ಮೆ ಆಹಾರದ ಗುಣಮಟ್ಟದ ಬಗ್ಗೆ ಸಮಿತಿ ಮೌಲ್ಯಮಾಪನ ಮಾಡುತ್ತದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಬೇರೆಯವರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗುವುದು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುವ ದರದಲ್ಲಿ ಒದಗಿಸಲು ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗಾಗಿಯೇ ಅಕ್ಕ ಕೆಫೆ ತೆರೆಯಲಾಗುತ್ತಿದೆ ಎಂದು ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ತಿಳಿಸಿದ್ದಾರೆ.
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಭದ್ರ ಬುನಾದಿ ಹಾಕಲು ಜಿಲ್ಲೆಯ ವಿವಿಧೆಡೆ ಅಕ್ಕ ಕೆಫೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಸ್ತ್ರೀಶಕ್ತಿ ಮಹಿಳಾ ಸಂಘಗಳನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ.
- ರಾಹುಲ್ ಶಿಂಧೆ, ಸಿಇಒ ಜಿಪಂ ಬೆಳಗಾವಿಜಿಲ್ಲಾ ಪಂಚಾಯತಿ ಅಧಿಕಾರಿಗಳ ಆದೇಶದ ಮೇರೆಗೆ ಹುಕ್ಕೇರಿಯಲ್ಲಿ ಜನಸಾಮಾನ್ಯರ ಸ್ನೇಹಿ ಅಕ್ಕ ಕೆಫೆ ಆರಂಭಿಸಲು ಕ್ರಮ ವಹಿಸಲಾಗಿದೆ. ಇದರಿಂದ ಜನರಿಗೆ ಅನುಕೂಲ ಆಗುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಬಲ ಬರಲಿದೆ.-ಟಿ.ಆರ್.ಮಲ್ಲಾಡದ,
ಇಒ ತಾಪಂ ಹುಕ್ಕೇರಿ