ಹಾವೇರಿ: ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆಯನ್ನು ಮಾಡಿ ಎಲ್ಲ ಹಿರಿಯ ಶರಣರಿಂದ ಅಕ್ಕ ಎಂಬ ಅಭಿದಾನವನ್ನು ಪಡೆದವರು ಅಕ್ಕಮಹಾದೇವಿ ಎಂದು ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಹೇಳಿದರು. ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ಬಸವ ಬಳಗ ಹಾಗೂ ಮಹಿಳಾ ಬಸವ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧ್ಯಾತ್ಮಿಕತೆಯೊಂದಿಗೆ ದೀನ ದುರ್ಬಲರ ಸೇವೆ ಸಾಮಾಜಿಕ ಕಾರ್ಯಗಳಲ್ಲಿ ಸೇವೆಗೈದ ದಾನಮ್ಮದೇವಿ ಮತ್ತು ಆಧ್ಯಾತ್ಮಿಕದ ಜತೆಗೆ ಶ್ರೇಷ್ಠ ವಚನಗಳ ಕೊಡುಗೆಯನ್ನು ನೀಡಿರುವ ಅಕ್ಕಮಹಾದೇವಿ ಇಬ್ಬರೂ ಎಲ್ಲ ಹಿರಿಯ ಶರಣರ ಪ್ರೀತಿ ಮತ್ತು ಗೌರವಾದರಗಳಿಗೆ ಭಾಜನರಾಗಿದ್ದರು ಎಂದರು. ಬಸವ ಬಳಗದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿಂಚಿಗೇರಿ ಮಾತನಾಡಿ, ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನದ ಪ್ರತೀಕ ಅಕ್ಕಮಹಾದೇವಿ. ಅಕ್ಕನ ಒಂದೊಂದು ವಚನಗಳು ನೊಂದ ಜೀವಕ್ಕೆ ಧೈರ್ಯ ಹಾಗೂ ಸಾಂತ್ವನವನ್ನು ನೀಡಿ ಹತಾಶ ಮನುಷ್ಯನಲ್ಲಿಯೂ ಜೀವನೋಲ್ಲಾಸವನ್ನು ಹೆಚ್ಚಿಸುತ್ತವೆಂದು ಎಂದರು. ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ, ಪ್ರಥಮ ಕವಯಿತ್ರಿ ವೀರ ವೀರಾಗಿಣಿ, ವೈರಾಗ್ಯನಿಧಿ ಅಕ್ಕಮಹಾದೇವಿ ಮತ್ತು ಮಹಾಶರಣೆ ದಾನಮ್ಮದೇವಿಯವರ ಕೊಡುಗೆ ಸಾಧನೆ ಸಂದೇಶಗಳ ತುಲನಾತ್ಮಕ ವಿಶ್ಲೇಷಣೆ ಮಾಡಿ ಅವರ ಆಚಾರ-ವಿಚಾರ ಸಂದೇಶಗಳನ್ನು ಅನುಸರಿಸಿ ನಡೆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಅರ್ಚಕರಾದ ಚಂದ್ರಶೇಖರಯ್ಯ, ಬಸವರಾಜಯ್ಯ, ಶಿವಬಸಪ್ಪ ಮುದ್ದಿ, ರೇವಣಸಿದ್ದಪ್ಪ ಹೆಗಡಾಳ, ಮಾಲತೇಶ ಕರಿಮಣ್ಣನವರ, ಕೆ.ಎಂ. ಬಿಜಾಪುರ, ಶಿವಾನಂದ ಹೊಸಮನಿ, ಶಿವಾನಂದ ಅಂಗಡಿ, ಕಾವ್ಯಾ ಅಂಗಡಿ, ರಾಜೇಶ್ವರಿ ಯಳಮಲ್ಲಿ, ಚಂಬಕ್ಕ ಎರೇಸೀಮೆ, ನೇತ್ರಾ ಪಾಟೀಲ, ಕಮಲಕ್ಕ ಬುಕ್ಕಶೆಟ್ಟಿ, ಶಾಂತಕ್ಕ ಮಡಿವಾಳರ ಇದ್ದರು. ಎನ್.ಬಿ. ಕಾಳೆ ಅಕ್ಕನ ವಚನಗಳನ್ನು ಹಾಡಿದರು. ಲಕ್ಕಣ್ಣ ಸಹೋದರಿಯರು ವಚನ ಪ್ರಾರ್ಥನೆ ಮಾಡಿದರು. ಅರ್ಚಕ ಕುಮಾರಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶಿವಯೋಗಿ ಅಂಗಡಿ ವಂದಿಸಿದರು.