ಸಾರಾಂಶ
ಅತೀ ಸಂಪ್ರದಾಯಬದ್ದವಾದ ಸಮಾಜದ ಕಟ್ಟುಪಾಡುಗಳ ನಡುವೆ ದಿಗಂಬರವನ್ನೇ ದಿವ್ಯಾಂಬರ ಮಾಡಿಕೊಂಡು ನಡೆದವರು ಅಕ್ಕಮಹಾದೇವಿ. ಅಕ್ಕನ ಈ ನಡೆ ಅಂದಿನ ಕೆಲವರಿಗೆ ವಿಲಕ್ಷಣವೆನಿಸಿದರೂ, ಇಂದು ನಿಂತು ನೋಡಿದರೆ, ಯಾವುದೇ ವ್ಯಕ್ತಿಯ ಆತ್ಮಬಲದ ಉನ್ನತ ಅಭಿವ್ಯಕ್ತಿಯಾಗಿ ಕಾಣುತ್ತದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ವಿಶ್ಲೇಷಿಸಿದರು.
ಶರಣ ಸಂಗಮ
ಶಿವಮೊಗ್ಗ: ಅತೀ ಸಂಪ್ರದಾಯಬದ್ದವಾದ ಸಮಾಜದ ಕಟ್ಟುಪಾಡುಗಳ ನಡುವೆ ದಿಗಂಬರವನ್ನೇ ದಿವ್ಯಾಂಬರ ಮಾಡಿಕೊಂಡು ನಡೆದವರು ಅಕ್ಕಮಹಾದೇವಿ. ಅಕ್ಕನ ಈ ನಡೆ ಅಂದಿನ ಕೆಲವರಿಗೆ ವಿಲಕ್ಷಣವೆನಿಸಿದರೂ, ಇಂದು ನಿಂತು ನೋಡಿದರೆ, ಯಾವುದೇ ವ್ಯಕ್ತಿಯ ಆತ್ಮಬಲದ ಉನ್ನತ ಅಭಿವ್ಯಕ್ತಿಯಾಗಿ ಕಾಣುತ್ತದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ವಿಶ್ಲೇಷಿಸಿದರು.ಇಲ್ಲಿನ ಬಸವಕೇಂದ್ರದಲ್ಲಿ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಅಕ್ಕಮಹಾದೇವಿ ಮೇರು ಕವಿಯತ್ರಿ, ಮಹಾನುಭಾವಿ, ಅಪ್ರತಿಮ ವಿರಾಗಿ. ಏಕಾಂತವ ಬಯಸಿದ ಅಕ್ಕ ಚೆನ್ನಮಲ್ಲಿಕಾರ್ಜುನನ ಕೂಡುವ ಹಂಬಲದೊಂದಿಗೆ ಲೋಕ ಸಂಚಾರಿಯಾದ ಜಂಗಮ ಮೂರ್ತಿಯಾಗುತ್ತಾಳೆ. ಹಾಗಾಗಿ ಅಕ್ಕನ ವಚನಗಳಲ್ಲಿ ಲೋಕಾನುಭವದ ಮೂಸೆಯಲ್ಲಿ ಫಲಿತಗೊಂಡ ಶಿವಾನುಭವವನ್ನು ಕಾಣುತ್ತೇವೆ ಎಂದರು.
ಅಕ್ಕನ ಅರಿವು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಚಿಕ್ಕಮಗಳೂರು ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಸದಸ್ಯರಾದ ಈ ಪ್ರೇಮಾ, ಮಹಿಳಾ ಸಂವೇದನೆಗೆ ಭಾಷ್ಯ ಬರೆದವರು ಅಕ್ಕಮಹಾದೇವಿ ಎಂದು ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಡಾ.ಕಲೀಮ್ ಉಲ್ಲಾ ಹಾಗೂ 2024ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸಮೂರ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದ ನಾಜೀಮರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಬಸವಕೇಂದ್ರದ ಅಧ್ಯಕ್ಷರಾದ ಬೆನಕಪ್ಪ ವೇದಿಕೆಯಲ್ಲಿ ಇದ್ದರು. ಉಪಾಧ್ಯಕ್ಷರಾದ ಚಂದ್ರಪ್ಪ ಸ್ವಾಗತಿಸಿದರು. ಲವಕುಮಾರ್ ನಿರೂಪಿಸಿದರು.