ಸಾರಾಂಶ
ಕುಶಾಲನಗರ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಅಕ್ಕಮಹಾದೇವಿ ಜಯಂತಿ
ಕನ್ನಡಪ್ರಭ ವಾರ್ತೆ ಕುಶಾಲನಗರಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿ ಇಡೀ ಮನುಕುಲದ ಮಹಾಬೆಳಕು. ಮಹಿಳೆಯರ ಪಾಲಿಗೆ ಸದಾ ಹಿರಿಯಕ್ಕ ಎಂದು ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್ ಹೇಳಿದರು.ಕುಶಾಲನಗರದ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ಮಹಾದೇವಿಯ ಸಹಜ ಸೌಂದರ್ಯಕ್ಕೆ ಮರುಳಾದ ಕೌಶಿಕ ಮಹಾರಾಜ, ಮಹಾದೇವಿಯನ್ನು ವಿವಾಹವಾಗಲು ಪರಿತಪಿಸಿದಾಗ, ಮಹಾದೇವಿ ಒಡ್ಡಿದ್ದ ಷರತ್ತುಗಳನ್ನು ಧಿಕ್ಕರಿಸಿ ಲೈಂಗಿಕ ಕ್ರೌರ್ಯ ಮೆರೆಯಲು ಮುಂದಾದ. ರಾಜನ ವಿರುದ್ಧ ಬಂಡೆದ್ದು, ದಿಂಗಂಬರಳಾಗಿಯೇ ಕಲ್ಯಾಣಕ್ಕೆ ಹೆಜ್ಜೆ ಹಾಕುವ ಮಹಾದೇವಿ, ತನ್ನ ಇಷ್ಟಾರ್ಥ ದೈವ ಶ್ರೀಚೆನ್ನಮಲ್ಲಿಕಾರ್ಜುನನನ್ನು ನೆನೆಯುತ್ತಾ ಇಡೀ ಜೀವನ ಕಳೆದು, ಅಲ್ಲಮ ಪ್ರಭುಗಳಿಂದ ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿಯಾಗಿ ರೂಪುಗೊಂಡ ಬಗೆಯನ್ನು ಡಾ.ಕಾವೇರಿ ವಿಶ್ಲೇಷಿಸಿದರು.ಹುಟ್ಟು ಮತ್ತು ಮುಟ್ಟು ವಿಷಯದಲ್ಲಿ ಮೈಲಿಗೆಯ ಸೂತಕವನ್ನು ಆಚರಿಸುತ್ತಾ ಬಂದ ಕೆಟ್ಟ ಪರಂಪರೆಯಿಂದಾಗಿ ಮಹಿಳೆ ಮೈಲಿಗೆಯ ಜೀವಿಯಾಗಬೇಕಾಯಿತು. ಅಂದು ಮಹಿಳೆ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕವಾದ ಯಾವ ಬಗೆಯ ಸ್ವಾತಂತ್ರ್ಯವೂ ಇಲ್ಲದೇ ಶೋಷಣೆಗೊಳಗಾದ ಹೆಣ್ಣಿನ ನೈಜ ಧ್ವನಿಯಾದ ಅಕ್ಕಾಮಹಾದೇವಿ, ಸ್ತ್ರೀ ಕುಲವನ್ನು ಬೆಳಗಿದ ಮಹಾದೀಪ ಎಂದು ಬಣ್ಣಿಸಿದರು.ವಿದ್ಯಾರ್ಥಿಗಳು ಇತಿಹಾಸವನ್ನು ಅರಿತು, ಅಧ್ಯಯನ ಮಾಡುವ ಮೂಲಕ ನಮ್ಮ ನಾಡಿನ ಭವ್ಯ ಪರಂಪರೆಯನ್ನು ಗೌರವಿಸಬೇಕು. ಹಾಗಾಗಿ ಮಾನವೀಯತೆಯ ಮೌಲ್ಯಗಳನ್ನು ಅರಿತು ನಡೆಯಬೇಕೆಂದು ಕಿವಿಮಾತು ಹೇಳಿದರು.
ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಮಡಿಕೇರಿಯ ಕೃಪಾ ದೇವರಾಜು ಮಾತನಾಡಿ, ಕೌಶಿಕ ರಾಜನ ಅಟ್ಟಹಾಸಕ್ಕೆ ಸಿಲುಕಿದ ಅಕ್ಕ ಮಹಾದೇವಿ ಕಣ್ಣಿಗೆ ಕಾಣುವ ಮೈಮೇಲೆ ಉಟ್ಟ ಬಟ್ಟೆಗಳನ್ನು ಸೆಳೆದುಕೊಳ್ಳಬಹುದೇ ಹೊರತು ಕಾಣದಂತಿರುವ ಅಂತರಂಗದ ಅಮೂಲ್ಯ ಸಿರಿ ಹಾಗೂ ವೈರಾಗ್ಯವನ್ನು ಕಸಿಯಲು ಸಾಧ್ಯವಿಲ್ಲ ಎಂದು ಸವಾಲು ಹಾಕುತ್ತಾಳೆ. ಚೆನ್ನಮಲ್ಲಿಕಾರ್ಜುನ ದೇವನ ಬೆಳಗನ್ನುಟ್ಟು ಉಳಿದೆಲ್ಲವನ್ನು ಬಿಟ್ಟು ಬಯಲಾದ ನನಗೆ ಬಾಹ್ಯದ ಉಡುಗೆ ತೊಡಿಗೆಯ ಹಂಗೇಕೆ? ಎಂದು ಕೌಶಿಕನಿಗೆ ನೇರವಾದ ಪ್ರಶ್ನೆಯನ್ನು ಹಾಕಿದ ದಿಟ್ಟ ಚೇತನ ಎಂದು ಅಕ್ಕನ ವಚನಗಳನ್ನು ಅರ್ಥೈಸಿ ವಿವರಣೆ ನೀಡಿದರು.ಸಾಹಿತಿ ಕಣಿವೆ ಭಾರಧ್ವಜ್ ಆನಂದ ತೀರ್ಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅರಿಯಲು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಖಜಾಂಚಿ ಕೆ.ಪಿ.ಪರಮೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ನಂದೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಖಜಾಂಚಿ ಎನ್.ಎನ್.ನಂಜಪ್ಪ, ಮಹಾತ್ಮಾ ಗಾಂಧಿ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲೆ ಟಿ.ಎ.ಲಿಖಿತಾ, ಕನ್ನಡ ಉಪನ್ಯಾಸಕ ಮಂಜೇಶ್ ಇದ್ದರು.ಅಕ್ಕನ ಬಳಗದ ಮಾಜಿ ಅಧ್ಯಕ್ಷೆ ವಿಜಯಾ ಪಾಲಾಕ್ಷ, ಕದಳಿ ವೇದಿಕೆ ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಕಾರ್ಯದರ್ಶಿ ಜಿ.ಎಸ್.ವೇದಾವತಿ, ಮನುಜಗದೀಶ್, ಪುಷ್ಪ, ಕೂಡಿಗೆ ಪ್ರೇಮ ಇದ್ದರು. ಇದೇ ಸಂದರ್ಭ ಸಾಹಿತಿಗಳಾದ ಡಾ.ಕಾವೇರಿ, ಕೃಪಾ ದೇವರಾಜು ಹಾಗೂ ಸಾಧಕಿ ಪ್ರೇಮಾ ಮಹದೇವಪ್ಪ ಅವರನ್ನು ಗೌರವಿಸಲಾಯಿತು.