ಅಕ್ಕಮಹಾದೇವಿ ಬದುಕು, ಸಾಧನೆ ಇರುವ ವಚನಶಿಲ್ಪ ಕೃತಿ ರಚನೆ ಅರ್ಥಪೂರ್ಣ: ಡಾ.ಸಿ.ಸೋಮಶೇಖರ್

| Published : Jul 09 2024, 12:52 AM IST

ಅಕ್ಕಮಹಾದೇವಿ ಬದುಕು, ಸಾಧನೆ ಇರುವ ವಚನಶಿಲ್ಪ ಕೃತಿ ರಚನೆ ಅರ್ಥಪೂರ್ಣ: ಡಾ.ಸಿ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಚಿಂತಕಿ, ಸ್ತ್ರೀವಾದಿ ವಚನಕಾರ್ತಿ ಅಕ್ಕಮಹಾದೇವಿ ಕುರಿತಾದ ಚಿತ್ರಣವನ್ನು ವಚನ ಶಿಲ್ಪ ಕೃತಿ ಒಳಗೊಂಡಿದೆ. ಅಕ್ಕಮಹಾದೇವಿ ಜೀವನ ವ್ಯಕ್ತಿತ್ವ ಸಾಧನೆಯನ್ನು ವಚನಗಳ ಮೂಲಕವೇ ಕಟ್ಟಿಕೊಟ್ಟ ಭವ್ಯ ಕೃತಿಯಾಗಿದೆ. ವಿಶ್ವದ ಮಹಿಳಾ ಸಾಹಿತ್ಯ ಲೋಕದಲ್ಲಿ ಅತ್ಯಂತ ಗಟ್ಟಿ ಹೆಜ್ಜೆ ಇಟ್ಟ ಪ್ರಥಮ ವಚನಕಾರ್ತಿ ಅಕ್ಕಮಹಾದೇವಿ ಅವರ ಬದುಕು, ಸಾಧನೆ, ಅನುಭವ ಚಿಂತನೆಯನ್ನು ಒಳಗೊಂಡ ವಚನಶಿಲ್ಪ ಕೃತಿ ರಚನೆ ಅರ್ಥಪೂರ್ಣವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವದ ಮಹಿಳಾ ಸಾಹಿತ್ಯ ಲೋಕದಲ್ಲಿ ಅತ್ಯಂತ ಗಟ್ಟಿ ಹೆಜ್ಜೆ ಇಟ್ಟ ಪ್ರಥಮ ವಚನಕಾರ್ತಿ ಅಕ್ಕಮಹಾದೇವಿ ಅವರ ಬದುಕು, ಸಾಧನೆ, ಅನುಭವ ಚಿಂತನೆಯನ್ನು ಒಳಗೊಂಡ ವಚನಶಿಲ್ಪ ಕೃತಿ ರಚನೆ ಅರ್ಥಪೂರ್ಣವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.

ನಗರದ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ವಚನಶಿಲ್ಪ ಕಾದಂಬರಿ ಲೋಕಾರ್ಪಣೆ ಮತ್ತು ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಅಮೂರ್ತವಾದಂತಹ ವಚನಗಳ ಅನುಭಾವದ ಸಾಹಿತ್ಯಕ್ಕೆ ಮೂರ್ತ ರೂಪವನ್ನು ಕೊಡುವ ರೀತಿ ಅಕ್ಕಮಹಾದೇವಿಯ ವಚನ ಆಧಾರಿತ ವಚನ ಶಿಲ್ಪ ಕಾದಂಬರಿಯನ್ನು ಸಾಹಿತಿ ಹೆಬ್ರಿ ರಚನೆ ಮಾಡಿದ್ದಾರೆ ಎಂದು ಹೇಳಿದರು.

ಕೃತಿ ಕುರಿತು ಸರ್ ಎಂವಿ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ಎನ್.ಎಸ್.ದೇವಿಕಾ ಮಾತನಾಡಿ, ಮಹಿಳಾ ಚಿಂತಕಿ, ಸ್ತ್ರೀವಾದಿ ವಚನಕಾರ್ತಿ ಅಕ್ಕಮಹಾದೇವಿ ಕುರಿತಾದ ಚಿತ್ರಣವನ್ನು ವಚನ ಶಿಲ್ಪ ಕೃತಿ ಒಳಗೊಂಡಿದೆ. ಅಕ್ಕಮಹಾದೇವಿ ಜೀವನ ವ್ಯಕ್ತಿತ್ವ ಸಾಧನೆಯನ್ನು ವಚನಗಳ ಮೂಲಕವೇ ಕಟ್ಟಿಕೊಟ್ಟ ಭವ್ಯ ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

8 ಅಧ್ಯಾಯಗಳನ್ನು ಒಳಗೊಂಡಿರುವ ಕೃತಿ ಮೊದಲ ಅಧ್ಯಾಯದಲ್ಲಿ ಉಡುತಡಿಯಲ್ಲಿ ಆರಂಭವಾಗಿ ಅಂತ್ಯದಲ್ಲಿ ಕದಳಿವನದಲ್ಲಿ ಮುಕ್ತಾಯವಾಗುತ್ತದೆ. ಸಾಮಾಜಿಕ ನೆಲೆಯ ಓದಿನ ವಿಸ್ತಾರದಲ್ಲಿ ನುಡಿ ಮಾಣಿಕ್ಯದ ಹಿರಿಮೆ ಗರಿಮೆಯಾಗಿದೆ. ಹೆಬ್ರಿಯವರು ಮಾನವ ಜೀವನದ ನಾಡಿ ಮಿಡಿತವನ್ನು ಅರಿತಿರುವಂತಹವರು. ಕೃತಿ ಓದಿದ ನಂತರ ರಸಗಂಗೆಯಲ್ಲಿ ಮಿಂದೆದ್ದ ದಿವ್ಯ ಅನುಭವ ಉಂಟಾಗುತ್ತದೆ. ಅಕ್ಕ ಹೃದಯದಲ್ಲಿ ಪ್ರತಿಷ್ಟಾಪನೆಗೊಳ್ಳುತ್ತಾಳೆ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತತ್ವಪದಕಾರ ಹಾಗೂ ಪತ್ರಕರ್ತ ಶಂಕರ್ ಹಲ್ಲೆಗೆರೆ ಅವರಿಗೆ ಕಾಯಕಶ್ರೀ ಪ್ರಶಸ್ತಿಯನ್ನು ವಿಎಲ್‌ಎನ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ವಿ.ಸುಜಾತ ಕೃಷ್ಣ ಪ್ರದಾನ ಮಾಡಿದರು. ಶಾಲಾ ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತ ಪಡಿಸಿದರು. ಹಲ್ಲೆಗೆರೆ ಶಂಕರ್ ಶರಣ ಸಾಹಿತ್ಯ ಪರಿಷತ್ತಿಗೆ 25 ಸಾವಿರ ರುಗಳ ದತ್ತಿ ನಿಧಿ ನೀಡಿದರು. ಕೃತಿ ಕರ್ತೃ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ, ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ಶಾಲೆ ಮುಖ್ಯ ಶಿಕ್ಷಕಿ ನಯನಾ, ಶಿಕ್ಷಕಿ ಜಿ.ಅಶ್ವಿನಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.