ಹಾನಗಲ್ಲ ಖಾಲಿ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಒಂದು ತಿಂಗಳು ಗಡುವು

| Published : Jul 09 2024, 12:52 AM IST

ಹಾನಗಲ್ಲ ಖಾಲಿ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಒಂದು ತಿಂಗಳು ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಕೆಲ ಫಲಾನುಭವಿಗಳು ಈವರೆಗೂ ಮನೆ ಕಟ್ಟಿಕೊಂಡಿಲ್ಲದ ಸಂಗತಿಗಳು ಬೆಳಕಿಗೆ ಬಂದಿದ್ದು, ಆ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡುವ ನಿರ್ಣಯವನ್ನು ಪುರಸಭೆಯ ಆಶ್ರಯ ಸಮಿತಿ ಸಭೆ ಪ್ರಕಟಿಸಿದೆ.

ಹಾನಗಲ್ಲ: ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಕೆಲ ಫಲಾನುಭವಿಗಳು ಈವರೆಗೂ ಮನೆ ಕಟ್ಟಿಕೊಂಡಿಲ್ಲದ ಸಂಗತಿಗಳು ಬೆಳಕಿಗೆ ಬಂದಿದ್ದು, ಆ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ನೀಡುವ ನಿರ್ಣಯವನ್ನು ಪುರಸಭೆಯ ಆಶ್ರಯ ಸಮಿತಿ ಸಭೆ ಪ್ರಕಟಿಸಿದೆ.ಪುರಸಭೆ ವ್ಯಾಪ್ತಿಯಲ್ಲಿ ಲಭ್ಯ 5 ಎಕರೆ ನಿವೇಶನದಲ್ಲಿ ನಿವೇಶನ ಹಾಗೂ ವಸತಿ ರಹಿತ ಬಡಜನರಿಗೆ ಜಿ+2 ಮನೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೋಮವಾರ ಇಲ್ಲಿನ ಪುರಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅಧ್ಯಕ್ಷತೆಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ, ಮನೆ ರಹಿತ ಬಡಜನರ ಸಂಖ್ಯೆ ಹೆಚ್ಚಿದೆ. 5 ಎಕರೆ ಪ್ರದೇಶದಲ್ಲಿ ಜಿ+2 ಮನೆಗಳನ್ನು ನಿರ್ಮಿಸಿದರೆ ಏಕಕಾಲಕ್ಕೆ ಪ್ರತಿಯೊಬ್ಬರಿಗೂ ಸಹ ಮನೆಗಳನ್ನು ಹಂಚಿಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ವರದಿ ಸಲ್ಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಮಾನೆ ಅವರು ಮುಖ್ಯಾಧಿಕಾರಿ ಜಗದೀಶ ವೈ.ಕೆ. ಅವರಿಗೆ ಸೂಚಿಸಿದರು. ವಾಜಪೇಯಿ ನಗರ ವಸತಿ ಯೋಜನೆಯಡಿ ಸ್ವೀಕರಿಸಲಾಗಿರುವ ಎಲ್ಲ 50 ಅರ್ಜಿಗಳನ್ನೂ ಸಭೆಯಲ್ಲಿ ಅಂಗೀಕರಿಸಲಾಯಿತು. ಇದುವರೆಗೂ ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ 500 ಮನೆಗಳಲ್ಲಿ 363 ಮನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇನ್ನುಳಿದ 137 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲೂ ಸಭೆ ನಿರ್ಣಯಿಸಿತು.ಕೆಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿದ್ದರೂ ಕೂಡ ಮನೆ ನಿರ್ಮಿಸಿಕೊಂಡಿಲ್ಲ. ಅಂಥವರಿಗೆ ನೋಟಿಸ್ ನೀಡಿ ಒಂದು ತಿಂಗಳ ಒಳಗಾಗಿ ಮನೆ ನಿರ್ಮಾಣ ಆರಂಭಿಸುವAತೆ ಸೂಚನೆ ನೀಡಲು ಸಭೆ ನಿರ್ಣಯ ಕೈಗೊಂಡಿತು. 2015-16, 16-17 ಮತ್ತು 17-18ರಲ್ಲಿ ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ 119 ಜನ ಫಲಾನುಭವಿಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ಸಹಾಯಧನ ಬಿಡುಗಡೆಯಾಗಿದ್ದು, ಕೇಂದ್ರ ಸರ್ಕಾರದ ಸಹಾಯಧನ ಬಾಕಿ ಉಳಿದಿದೆ. ಇದರಿಂದ ಫಲಾನುಭವಿಗಳು ಸಂಕಷ್ಟದಲ್ಲಿದ್ದಾರೆ. ಇನ್ನು 2021-22 ನೇ ಸಾಲಿನಲ್ಲಿ 388 ಮನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದುವರೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ಫಲಾನುಭವಿಗಳು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಆಶ್ರಯ ಸಮಿತಿ ಸದಸ್ಯ ಮಾಲತೇಶ ಕಾಳೇರ ಸಭೆಯ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಾಸಕ ಮಾನೆ, ಸಹಾಯಧನ ಬಿಡುಗಡೆಗೆ ಹಾಗೂ ಮನೆಗಳಿಗೆ ಮಂಜೂರಾತಿ ದೊರಕಿಸಿ ಅರ್ಹ ಫಲಾನುಭವಿಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು. ತಹಸೀಲ್ದಾರ್ ರೇಣುಕಾ ಎಸ್., ಸದಸ್ಯರಾದ ನಿಯಾಜ್‌ಅಹ್ಮದ್ ಸರ್ವಿಕೇರಿ, ಮೇಘಾ ಸುಲಾಖೆ ಇದ್ದರು. ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತ ಎಲ್ಲ ಬಡಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಸಂಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ 5 ಎಕರೆ ಪ್ರದೇಶದಲ್ಲಿ ಜಿ+2 ಮನೆಗಳನ್ನು ನಿರ್ಮಿಸಿ ಏಕಕಾಲಕ್ಕೆ ನಿವೇಶನ ಹಾಗೂ ವಸತಿ ರಹಿತ ಎಲ್ಲ ಬಡಜನರಿಗೆ ಮನೆ ಹಾಗೂ ನಿವೇಶನ್ ಹಂಚಿಕೆ ಮಾಡುವ ಉದ್ದೇಶವಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.