ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸುವ ಈಗಿನ ವ್ಯವಸ್ಥೆಯನ್ನು ಮುಂದುವರಿಸಬೇಕು. ಅಡುಗೆ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಯೂಟ ನೌಕರರಿಗೆ ವಹಿಸಬೇಕು.
ಕಾರವಾರ: ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ಕ್ಲಸ್ಟರ್ ಮಟ್ಟದ ಕೇಂದ್ರೀಕೃತ ಅಡುಗೆ ವ್ಯವಸ್ಥೆಗೆ ವಹಿಸುವ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸಾವಿರಾರು ಬಿಸಿಯೂಟ ನೌಕರರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು.ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸುವ ಈಗಿನ ವ್ಯವಸ್ಥೆಯನ್ನು ಮುಂದುವರಿಸಬೇಕು. ಅಡುಗೆ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಯೂಟ ನೌಕರರಿಗೆ ವಹಿಸಬೇಕು. ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ, ಪಿಎಫ್ ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿದ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಯಮುನಾ ಗಾಂವ್ಕರ್ ಅವರು, ನೆಗಡಿಯಾದರೆ ಮೂಗು ಕತ್ತರಿಸುವ ರೀತಿಯಲ್ಲಿ ಸರ್ಕಾರದ ನೀತಿಯಿದೆ. ಬಿಸಿಯೂಟ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕ್ಲಸ್ಟರ್ ಮಟ್ಟದ ಕೇಂದ್ರೀಕೃತ ಅಡುಗೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವುದು ಖಂಡನೀಯ ಎಂದರು.ಕೇಂದ್ರ ಸರ್ಕಾರ ನಿರಂತರವಾಗಿ ಅನುದಾನ ಕಡಿತಗೊಳಿಸುತ್ತಿದ್ದರೂ ಬಿಸಿಯೂಟ ನೌಕರರು ಅತ್ಯಂತ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಆಹಾರ ತಯಾರಿಸಿ ಬಡಿಸುವುದರ ಜತೆಗೆ ಶಾಲೆಗಳ ಶೌಚಾಲಯ ಹಾಗೂ ಆವರಣ ಸ್ವಚ್ಛಗೊಳಿಸುವುದು, ಚುನಾವಣಾ ಕಾರ್ಯ, ಪ್ರತಿಭಾ ಕಾರಂಜಿ, ಸಮುದಾಯದತ್ತ ಶಾಲೆ ಸೇರಿದಂತೆ ವಿವಿಧ ಕೆಲಸಗಳನ್ನು ಯಾವುದೇ ಹೆಚ್ಚುವರಿ ಸಂಭಾವನೆ ಇಲ್ಲದೆ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ಕೆಲಸ ಮಾಡಿದರೂ ಸರ್ಕಾರ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಡುಗೆ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ನೌಕರರಿಗೆ ವಹಿಸಿ, ಲೆಕ್ಕಪತ್ರ ನಿರ್ವಹಣೆ ಕುರಿತು ತರಬೇತಿ ನೀಡಬೇಕು. ಲೆಕ್ಕ ಬರೆಯಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಹಂತದಲ್ಲಿಯೇ ಬಿಸಿಯೂಟ ತಯಾರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾ ನಾಯ್ಕ ಅವರು, ಅಕ್ಷರದಾಸೋಹ ಯೋಜನೆಯನ್ನು ಉಳಿಸಿಕೊಳ್ಳಲು ಹೋರಾಟ ಮುಂದುವರಿಸಲಾಗುವುದು. ಕೆಲವರ ಹಿತಾಸಕ್ತಿಗಾಗಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಬಲಿಕೊಡಬಾರದು. ಶಾಲೆಯಲ್ಲಿಯೇ ಬಿಸಿಯೂಟ ತಯಾರಿಸುವುದು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೂ ಪೂರಕವಾಗಿದೆ. ಕ್ಲಸ್ಟರ್ ಮಟ್ಟದಲ್ಲಿ ಖಾಸಗಿ ಸಂಸ್ಥೆಗಳಿಗೆ ಅಡುಗೆ ವ್ಯವಸ್ಥೆ ವಹಿಸುವುದರಿಂದ ಶಾಲೆಗಳ ಶೈಕ್ಷಣಿಕ ಸಮಸ್ಯೆಗಳು ಬಗೆಹರಿಯುತ್ತವೆಯೇ ಎಂದು ಪ್ರಶ್ನಿಸಿದರು.
ವಂದನಾ ದುಮೆ, ಕೋಮಲಾ ದೇವಾಡಿಗ, ತುಳಸಿ ನಾಯ್ಕ, ಶ್ರೀಮತಿ ನಾಯ್ಕ, ತಾರಾ, ರೇಣುಕಾ ಮಡಿವಾಳ, ವರದಾ ಅಂಕೋಲೆಕರ್, ಯಶೋದಾ ನಾಯ್ಕ, ಭಾರತಿ ಮರಾಠಿ, ಲಕ್ಷ್ಮಿ ನಾಯ್ಕ, ಜಯಶ್ರೀ ಗೌಡ, ಮಮತಾ, ಶೋಭಾ, ಗೀತಾ ಗೌಡ, ನಾಗರತ್ನ, ರೂಪಾ ಪಾಠಣಕರ್, ಶಾಂತಾ ರಾಯ್ಕರ್, ಶೋಭಾ ಕುರಟ್ಟಿ, ಹಸೀನಾ ಶೇಖ್ ಹಾಗೂ ಗಿರಿಜಾ ವಾಡ್ಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಎಸ್ಎಫ್ಐನ ಶೇಕಪ್ಪ ಪಿ. ನೇತೃತ್ವ ವಹಿಸಿದ್ದರು.