ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ 17 ರಾಜ್ಯಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿರುವ ಅಕ್ಷಯ ಪಾತ್ರ ಪ್ರತಿಷ್ಠಾನ, ದೇಶದ 6,667 ಮಕ್ಕಳಿಗೆ ಒಂದು ವರ್ಷದ ಮಧ್ಯಾಹ್ನದ ಬಿಸಿಯೂಟ ಒದಗಿಸಲು ಮಾ.1ರಂದು ‘ಮ್ಯೂಜಿಕ್ ಫಾರ್ ಮಿಲ್ಸ್’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ್, ಯಶವಂತಪುರದ ತಾಜ್ ವಿವಾಂತಾ ಹೋಟೆಲ್‌ನಲ್ಲಿ ಮಾ.1ರ ಶುಕ್ರವಾರ ಸಂಜೆ 5ಕ್ಕೆ ಸಂಗೀತ ದಿಗ್ಗಜರಾದ ಪ್ರವೀಣ್ ಗೋಡ್ಕಿಂಡಿ ಮತ್ತು ವಿಜಯಪ್ರಕಾಶ್ ಅವರ ಜುಗಲ್ ಬಂದಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 230ಕ್ಕೂ ಅಧಿಕ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 500 ಮಂದಿ ಕಾರ್ಯಕ್ರಮಕ್ಕೆ ಭಾಗವಹಿಸುವುದಕ್ಕೆ ಅವಕಾಶ ನೀಡಲಾಗುವುದು ಎಂದರು.
ಪ್ರತಿ ವಿದ್ಯಾರ್ಥಿಗೆ ಒಂದು ವರ್ಷದ ಬಿಸಿಯೂಟಕ್ಕೆ ₹1,500 ವೆಚ್ಚವಾಗಲಿದೆ. ಅಕ್ಷಯ ಪಾತ್ರ ಪ್ರತಿಷ್ಠಾನ ನಿಗದಿತ ಧನ ನೆರವು ನೀಡುವ ದಾನಿಗಳಿಗೆ ಕಾರ್ಯಕ್ರಮಕ್ಕೆ ಪಾಸ್ ನೀಡಲಿದೆ. ಈ ಕಾರ್ಯಕ್ರಮದಿಂದ ರಾಜ್ಯದ ವಿದ್ಯಾರ್ಥಿಗಳು ಫಲಾನುಭವಿಗಳಾಗಿರಲಿದ್ದಾರೆ ಎಂದು ತಿಳಿಸಿದರು.ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಬಿಸಿಯೂಟಕ್ಕೆ ಶೇ.50ರಷ್ಟು ಹಣವನ್ನು ಸರ್ಕಾರ ನೀಡಲಿದೆ. ಉಳಿದ ಶೇ.50ರಷ್ಟು ಹಣವನ್ನು ದಾನಿಗಳಿಂದ ಸಂಗ್ರಹಿಸಲಾಗುವುದು. ಪ್ರತಿ ವರ್ಷ ಬಿಸಿಯೂಟಕ್ಕಾಗಿ ₹800 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಪೈಕಿ ₹50 ಕೋಟಿಯನ್ನು ಪ್ರತಿಷ್ಠಾನ ಭರಿಸಲಿದೆ. ಸುಮಾರು 300ಕ್ಕೂ ಅಧಿಕ ಕಂಪನಿಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಒದಗಿಸಲಿವೆ ಎಂದು ವಿವರಿಸಿದರು.
ದೇಶದ 17 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 72 ಅಕ್ಷಯ ಪಾತ್ರದ ಅಡುಗೆ ಮನೆಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲಿ ಜಮ್ಮು ಮತ್ತು ಕತ್ರಾದಲ್ಲಿ ಅಡುಗೆ ಮನೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ವೆಂಕಟ್, ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಇದ್ದರು.