ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ ಭಾಷಾ ವಾಹನ ತಪಾಸಣೆ ವೇಳೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ದರ್ಪ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕುಮಟಾ

ಕುಮಟಾ ಪೊಲೀಸ್ ಠಾಣೆಯ ಪಿಎಸ್‌ಐ ಖಾದರ ಭಾಷಾ ವಾಹನ ತಪಾಸಣೆ ವೇಳೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ದರ್ಪ ಮೆರೆದಿದ್ದಾರೆ. ಹೀಗಾಗಿ ಪಿಎಸ್‌ಐ ವಿರುದ್ಧ ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದ್ದಕ್ಕೆ ಇನ್ನೂ ತನಕ ಸಮರ್ಪಕ ಉತ್ತರವಾಗಲಿ, ಕ್ರಮವಾಗಲಿ ಆಗಿಲ್ಲ ಎಂದು ಹೆಗಡೆ ಗ್ರಾಮದ ನಿವಾಸಿ ಅಕ್ಷಯ ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಸ್ನೇಹಿತ ವಿನೋದ ಎಂಬಾತನೊಂದಿಗೆ ಕೆಲದಿನಗಳ ಹಿಂದೆ ಹೆಗಡೆಯಿಂದ ಧಾರೇಶ್ವರಕ್ಕೆ ನಾನು ತೆರಳುತ್ತಿದ್ದಾಗ ಕುಮಟಾ ಮುಖ್ಯ ಬಸ್ ನಿಲ್ದಾಣದ ಎದುರಿನ ರೈಲ್ವೆ ಸೇತುವೆ ಬಳಿ ನಡುರಸ್ತೆಯಲ್ಲಿ ನಮ್ಮನ್ನು ಪಿಎಸ್‌ಐ ಹಾಗೂ ಸಿಬ್ಬಂದಿ ತಡೆದಿದ್ದಾರೆ. ಬೈಕ್‌ನ ಕೀ ಹಾಗೂ ನನ್ನ ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರೆದುರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಒಟ್ಟೂ ₹೩೦೦೦ ದಂಡ ಹಾಕಿದ್ದಾರೆ. ದಂಡ ಹಾಕಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅವರ ದರ್ಪದ ವರ್ತನೆ ಮತ್ತು ಪಾಲಿಸಬೇಕಾದ ಪಾರದರ್ಶಕತೆಯ ಲೋಪಕ್ಕೆ ಆಕ್ಷೇಪವಿದೆ ಎಂದರು.

ಈ ಬಗ್ಗೆ ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠರಿಗೆ ವಾಟ್ಸ್‌ಆ್ಯಪ್ ಮೂಲಕ ದೂರು ಸಲ್ಲಿಸಿದ್ದೆ. ಬಳಿಕ ಸಿಪಿಐ ಅವರ ಕರೆಯ ಮೇರೆಗೆ ಠಾಣೆಗೆ ಹೋಗಿ ನಡೆದ ಸಂಗತಿಯನ್ನು ವಿವರಿಸಿದ್ದೇನೆ. ಬಳಿಕ ನನಗೆ ಯಾವುದೇ ಉತ್ತರ ಬಂದಿಲ್ಲ ಎಂದು ವಿವರಿಸಿದರು.

ಸಾಮಾಜಿಕ ಕಾರ್ಯಕರ್ತ ಮಂಜುನಾಥ ಎಲ್.ನಾಯ್ಕ ಮಾತನಾಡಿ, ತಪ್ಪು ಮಾಡಿದವರಿಗೆ ಕಾನೂನಿನ ಭಯ ಹುಟ್ಟಿಸಬೇಕಾದ್ದು ಪೊಲೀಸರ ಕರ್ತವ್ಯ. ಆದರೆ ಪೊಲೀಸರು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕೆಂಬುದಕ್ಕೂ ನಿಯಮಗಳಿವೆ. ಜನರೊಂದಿಗೆ ವ್ಯವಹರಿಸುವಾಗ ಪಾರದರ್ಶಕತೆ ಇರಬೇಕೆಂಬ ಉದ್ದೇಶದಿಂದ ಪಿಎಸ್‌ಐಗಳಿಗೆ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿ ಕ್ಯಾಮೆರಾ ಅಳವಡಿಕೆಗೆ ನಿರ್ದೇಶಿಸಲಾಗಿದೆ. ಎಲ್ಲೆಡೆ ಬಾಡಿ ಕ್ಯಾಮೆರಾ ವಿತರಿಸಿದ ಬಗ್ಗೆ ಡಿವೈಎಸ್‌ಪಿ ತಿಳಿಸಿದ್ದಾರೆ. ಹಲವಾರು ಆಧುನಿಕ ತಂತ್ರಜ್ಞಾನಗಳು ಬಳಕೆಯಲ್ಲಿರುವಾಗ ಬಾಡಿ ಕ್ಯಾಮೆರಾವನ್ನೂ ಬಳಸದೇ ಸಾರ್ವಜನಿಕರ ಮೇಲೆ ದರ್ಪ ತೋರುವುದು, ನಿಂದಿಸುವುದು ಸರಿಯಲ್ಲ. ರಸ್ತೆ, ವೃತ್ತ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಅಳವಡಿಕೆ ಇರುವಾಗಲೂ, ಅತಿಯಾದ ವಾಹನ ದಟ್ಟಣೆ, ಇಕ್ಕಟ್ಟು ಇರುವಲ್ಲಿ ಪೊಲೀಸರು ನಿಂತು ವಾಹನಗಳನ್ನು ಅಡ್ಡಗಟ್ಟಿ ದಂಡ ವಸೂಲಿ ಅನಿವಾರ್ಯವೇ ಎಂದು ಪ್ರಶ್ನಿಸಿದರು. ಅಕ್ಷಯ ನಾಯ್ಕ ಅವರ ಪರವಾಗಿ ಹೋರಾಟಕ್ಕೆ ಸಿದ್ಧರಾಗಿದ್ದು ಪೊಲೀಸ್ ಮೇಲಧಿಕಾರಿಗಳೊಂದಿಗೂ ಪರಾಮರ್ಶಿಸಿದ್ದೇನೆ. ಇಲಾಖೆಯಿಂದ ಸಮರ್ಪಕ ಉತ್ತರ ಹಾಗೂ ಸೂಕ್ತ ಕ್ರಮವಾಗದಿದ್ದರೆ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.

ಪುರಸಭೆ ಮಾಜಿ ಸದಸ್ಯ ಹರೀಶ ಶೇಟ ಮಾತನಾಡಿ, ಪಿಎಸ್‌ಐ ಖಾದರ ಭಾಷಾ ಅವರು ಹಿಂದೆ ಗೋಕರ್ಣ ಮಹಾಬಲೇಶ್ವರ ಮಂದಿರದಲ್ಲಿ ಬಂದೋಬಸ್ತ್‌ನಲ್ಲಿದ್ದಾಗ ಅವರದೇ ಇಲಾಖೆಯ ಸಿಬ್ಬಂದಿಯೊಟ್ಟಿಗೆ ನಡೆದುಕೊಂಡ ರೀತಿಯನ್ನು ಎಲ್ಲರೂ ನೋಡಿದ್ದಾರೆ. ಅಂಥ ವರ್ತನೆ ಇಲ್ಲಿ ನಡೆಯದು. ಅಧಿಕಾರಿಗಳಿಂದ ಸಮಾಜದ ಸಾಮರಸ್ಯ ಹಾಳಾಗಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂದೇಶ ಶೆಟ್ಟಿ, ಗಜಾನನ ನಾಯ್ಕ ಅಳ್ವೆಕೋಡಿ, ಸುರೇಶ ಹರಿಕಾಂತ, ಈಶ್ವರ ಮುಕ್ರಿ, ಗೋಪಾಲ ನಾಯ್ಕ ಇತರರಿದ್ದರು.