ಸರ್ಕಾರ ಆದಾಯದ ಉದ್ದೇಶದಿಂದ ಮದ್ಯದ ಅಂಗಡಿಗಳು ಮತ್ತು ಬಾರ್‌ಗಳಿಗೆ ಸರಾಗವಾಗಿ ಪರವಾನಗಿ ನೀಡುತ್ತಿದ್ದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಶ್ಲಾಘನೀಯ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ಸರ್ಕಾರ ಆದಾಯದ ಉದ್ದೇಶದಿಂದ ಮದ್ಯದ ಅಂಗಡಿಗಳು ಮತ್ತು ಬಾರ್‌ಗಳಿಗೆ ಸರಾಗವಾಗಿ ಪರವಾನಗಿ ನೀಡುತ್ತಿದ್ದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಎಂದು ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಅಭಿಪ್ರಾಯಪಟ್ಟರು.ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮುಂಡರಗಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಶ್ರೀ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠ ಮುಂಡರಗಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜರುಗುತ್ತಿರುವ 2134ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಸಾನಿಧ್ಯ ವಹಿಸಿ ಮಾತನಾಡಿದರು.
ಮದ್ಯಪಾನವು ವ್ಯಕ್ತಿಯ ವಿವೇಕ ನಾಶಮಾಡಿ, ಮನೆಯಲ್ಲಿ ಜಗಳ, ಹೆಂಡತಿ-ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ದುಶ್ಚಟಗಳು ಮನುಷ್ಯನ ಜೀವನವನ್ನೇ ಬಲಿ ಪಡೆಯುತ್ತವೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವ ಜನರನ್ನು ಗುರುತಿಸಿ, ಶಿಬಿರಗಳ ಮೂಲಕ ನವಜೀವನ ಕಲ್ಪಿಸಿಕೊಡುತ್ತಿರುವ ಧರ್ಮಸ್ಥಳ ಯೋಜನೆಯ ಸೇವೆ ಅತ್ಯಂತ ಅನುಕರಣೀಯ ಎಂದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ನಾಗೇಶ್ ಎ. ಮಾತನಾಡಿ, ಕುಡಿತದ ಚಟದಿಂದ ಕುಟುಂಬಗಳು ಬೀದಿಗೆ ಬರುವುದನ್ನು ತಪ್ಪಿಸಿ, ನೊಂದ ಕುಟುಂಬಗಳಿಗೆ ಹೊಸ ಜೀವನ ಹಾಗೂ ಬದುಕಿನ ಭರವಸೆ ಕಲ್ಪಿಸುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳ ಮುಖ್ಯ ಉದ್ದೇಶವಾಗಿದೆ. ಕುಡಿತ ವ್ಯಕ್ತಿಯ ಗೌರವ, ಕುಟುಂಬದ ಸುಖ-ಶಾಂತಿಯನ್ನಷ್ಟೇ ಅಲ್ಲದೆ ಸಮಾಜದಲ್ಲಿನ ಘನತೆಯನ್ನೂ ಕಸಿದುಕೊಳ್ಳುತ್ತದೆ. ಇಲ್ಲಿಗೆ ಬಂದಿರುವ ಶಿಬಿರಾರ್ಥಿಗಳು ಮುಂದಿನ 8 ದಿನಗಳ ಕಾಲ ಶಿಬಿರದ ವ್ಯವಸ್ಥೆಯನ್ನು ಗೌರವಿಸಿ, ಅಚಲ ನಿರ್ಧಾರ ಕೈಗೊಂಡರೆ, ಉಳಿದ ಜೀವನವನ್ನು ಗೌರವಯುತವಾಗಿ ಬದುಕಬಹುದು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಎಚ್.ಬಿ. ಅಸೂಟಿ, ಎ.ಕೆ. ಮುಲ್ಲಾನವ, ರಾಜು ಕಲಾಲ ಮಾತನಾಡಿ, ಮದ್ಯಮುಕ್ತ ವ್ಯಕ್ತಿಯಿಂದ ಇಡೀ ಕುಟುಂಬ, ಕುಟುಂಬದಿಂದ ಸಮಾಜ ಹಾಗೂ ಸಮಾಜದಿಂದ ದೇಶವೇ ಪ್ರಗತಿಯತ್ತ ಸಾಗಲು ಸಾಧ್ಯ ಎಂದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿ.ಜೆ. ಹಿರೇಮಠ, ನಾಗೇಶ ಹುಬ್ಬಳ್ಳಿ, ಎಸ್.ಬಿ. ಕರಿಭರಮಗೌಡ್ರ, ಪ್ರೊ. ಶಂಬುಲಿಂಗ ಚಿಗರಿ, ಎಂ.ಎಂ. ಹೆಬ್ಬಾಳ, ನಬಿಸಾಬ್ ಕೆಲೂರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ರಾಜೇಶ್ವರಿ, ಅನಸೂಯಾ, ಜಯಲಕ್ಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೇಲ್ವಿಚಾರಕ ರಾಜಪ್ಪ ಟಿ.ಸಿ. ಸ್ವಾಗತಿಸಿ, ಅಣ್ಣಪ್ಪ ಬಾರ್ಕಿ ನಿರೂಪಿಸಿ, ಶಿಬಿರಾಧಿಕಾರಿ ನಾಗೇಶ ವಂದಿಸಿದರು.