ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಮದ್ಯವ್ಯಸನಿಗಳು ತಮ್ಮ ಹೆಂಡತಿ ಮಕ್ಕಳಿರುವ ಫೋಟೋವನ್ನು ತಮ್ಮ ಮುಂದಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.ಪಟ್ಟಣ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ೧೯೬೪ನೇ ಮದ್ಯವರ್ಜನ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಧ್ಯಪ್ರದೇಶದಲ್ಲಿ ವಾಹನಗಳು ಅತಿಯಾಗಿ ಅಪಘಾತಕ್ಕೀಡಾಗುತ್ತಿದ್ದ ಸಂದರ್ಭದಲ್ಲಿ ಪರಿಶೀಲನೆ ನಡೆಸಿದಾಗ, ಚಾಲಕ ಮದ್ಯಪಾನ ಮಾಡಿ ವಾಹನಗಳನ್ನು ಓಡಿಸುತ್ತಿದ್ದುದು ಪತ್ತೆಯಾಯಿತು. ಆಗ ಪ್ರತಿಯೊಬ್ಬ ಚಾಲಕನು ತನ್ನ ಹೆಂಡತಿ ಮಕ್ಕಳಿರುವ ಫೋಟೋವನ್ನು ವಾಹನದಲ್ಲಿ ತನ್ನ ಮುಂದಿಟ್ಟುಕೊಂಡು ಓಡಿಸಲು ನಿಯಮ ರೂಪಿಸಲಾಯಿತು. ನಿಯಮ ಪಾಲನೆಯಾದ ನಂತರ ವಾಹನ ಅಪಘಾತಗಳು ಕಡಿಮೆಯಾದವು.
ಈ ಹಿನ್ನೆಲೆಯಲ್ಲಿ ಮದ್ಯವ್ಯಸನಿಗಳು ಮದ್ಯಪಾನ ಮಾಡುವಾಗ ತಮ್ಮ ಕುಟುಂಬದ ಫೋಟೋವನ್ನು ಒಮ್ಮೆ ನೋಡಿದಾಗ ತಮಗೆ ಅರ್ಥವಾಗುತ್ತದೆ. ನಾನು ಕುಡಿದು ಜೀವನ ನಾಶ ಮಾಡಿಕೊಂಡರೆ, ನನ್ನನ್ನು ಅವಲಂಬಿಸಿರುವ ನನ್ನ ಕುಟುಂಬ ಅನಾಥವಾಗುತ್ತದೆ ಎಂಬ ಮನೋಭಾವನೆ ಉಂಟಾಗುತ್ತದೆ. ಇದನ್ನು ಜೀವನದಲ್ಲಿ ಪಾಲಿಸಿದರೆ ಕುಡಿತ ಚಟದಿಂದ ದೂರವಿರಬಹುದು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮರವರು, ಅತಿಯಾಗಿ ಮದ್ಯಪಾನ ಮಾಡುವುದರಿಂದ ಮಾನಸಿಕ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಲಿವರ್, ಕಿಡ್ನಿ ತೊಂದರೆ ಸೇರಿದಂತೆ ರಕ್ತಹೀನತೆಯಿಂದ ದೇಹದ ಎಲ್ಲ ಭಾಗಗಳು ನಾಶವಾಗಿ ಖಿನ್ನತೆ ಉಂಟಾಗಿ ದಿನ ಕಳೆದಂತೆ ಮರಣ ಸಂಭವಿಸುತ್ತದೆ. ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಲು ವೈದ್ಯರ ತಂಡವನ್ನು ರಚಿಸಲಾಗಿದ್ದು ಉಚಿತವಾಗಿ ಚಿಕಿತ್ಸೆ ನೆರವು ನೀಡಲಾಗುವುದು ಎಂದರು.
ಜನಜಾಗೃತಿ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮುಖೇಶ್ ಪ್ರಾಸ್ತಾವಿಕ ಮಾತನಾಡುವ ಸಂದರ್ಭದಲ್ಲಿ, ಶಿಬಿರದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಮದ್ಯ ಅಂಗಡಿಗಳನ್ನು ಮುಚ್ಚಿದರೆ ನಾವು ಕುಡಿಯುವುದಿಲ್ಲ, ಮದ್ಯದಂಗಡಿಗಳನ್ನು ಕೂಡಲೆ ಮುಚ್ಚಿ ಎಂದು ಆಗ್ರಹಿಸಿದರು.ಸಮಾರಂಭದಲ್ಲಿ ಬಿ. ರೇಣುಕಪ್ರಸಾದ್, ಡಿ. ಎಸ್. ಜಯಣ್ಣ, ಎಎಸೈ ದೇವರಾಜ್, ಸುಬ್ರಹ್ಮಣ್ಯ ಶರ್ಮ, ಧರ್ಮರಾಜ್, ಮಲ್ಲಿಕಾರ್ಜುನ, ಮೋಹನಕುಮಾರ್, ಎಂ. ಬಾಲಕೃಷ್ಣ, ಎಂ. ಕೆ. ರಾಜಶೇಖರ್, ಟಿ. ಆನಂದ್, ಮೋಹನ್, ಶಿಬಿರಾಧಿಕಾರಿಗಳಾದ ದೇವಿಪ್ರಸಾದ್ ಸುವರ್ಣ, ಜಯಾನಂದ, ಜಯಲಕ್ಷ್ಮಿ, ವಸಂತ, ರತ್ನಾಕರಕೊಠಾರಿ, ವಿಘ್ನೇಶ್, ಯಶೋಧ ಉಪಸ್ಥಿತರಿದ್ದರು.