ಸಾರಾಂಶ
ವಿಶ್ವ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಷ್ಟಗಿಎಲ್ಲ ಮಕ್ಕಳು ಕಡ್ಡಾಯವಾಗಿ ಶಿಕ್ಷಣವಂತರಾಗಬೇಕು. ಎಲ್ಲಿಯಾದರೂ ಬಾಲ ಕಾರ್ಮಿಕರು ಕಂಡರೆ ಅದನ್ನು ಖಂಡಿಸುವ ಕೆಲಸ ಮಾಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾ ಆಡಳಿತ ಕುಷ್ಟಗಿ, ಶಿಕ್ಷಣ ಇಲಾಖೆ, ತಾಪಂ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅನೂಕೂಲ ಎನ್ನುವ ದೃಷ್ಟಿಕೋನದಿಂದ ಇಲ್ಲಿ ಆಯೋಜನೆ ಮಾಡಿದ್ದು, ಈ ಕುರಿತು ತಮ್ಮ ಮನೆಯ ಪಾಲಕರಿಗೆ ಹಾಗೂ ನೆರೆಹೊರೆಯ ಜನರಿಗೆ ತಿಳಿಸುವಂತಹ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ರವಿ ಅಂಗಡಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಪಾತ್ರ ಬಹು ಮುಖ್ಯವಾಗಿದೆ. ಸಾರ್ವಜನಿಕರ ಗಮನಕ್ಕೆ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಮಾಹಿತಿ ನೀಡಬೇಕು, ಕುಟುಂಬದ ಆರ್ಥಿಕ ಹೊರೆ ನೀಗಿಸಲು ಕುಟುಂಬದವರು ಮಕ್ಕಳನ್ನು ನಾನಾ ಕೆಲಸಕ್ಕೆ ಸೇರಿಸುತ್ತಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧ. ಮಕ್ಕಳು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪತ್ತೆಹಚ್ಚಿ ಅಂತಹ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯ್ಯಾಧೀಶರ ಮಹಾಂತೇಶ ಚೌಗಳಿ, ವಕೀಲರ ಸಂಘದ ತಾಲೂಕಾ ಅಧ್ಯಕ್ಷ ವಿಜಯ ಮಹಾಂತೇಶ ಕುಷ್ಟಗಿ, ಗ್ರೇಡ್ -02 ತಹಸೀಲ್ದಾರ ಮುರಳೀಧರ ಮುಕ್ತೇದಾರ, ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಬಿಇಒ ಸುರೇಂದ್ರ ಕಾಂಬ್ಳೆ, ರವಿ ಹಾದಿಮನಿ, ಬಸವರಾಜ ಲಿಂಗಸೂರು, ತಾಪಂ ಯೋಜನಾಧಿಕಾರಿ ಸುವರ್ಣಮ್ಮ, ಉಪನ್ಯಾಸಕ ಎ.ಬಿ. ಕೆಂಚರಡ್ಡಿ, ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಸೇರಿದಂತೆ ಇತರರಿದ್ದರು. ಮಾರುತಿ ವಕೀಲರು ಬಾಲ ಕಾರ್ಮಿಕ ವಿರೋಧಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿ ರೇಖಾ ಹಿರೇಮಠ ಪ್ರಾರ್ಥಿಸಿದರು. ಉಪನ್ಯಾಸಕ ಮಹಾಂತೇಶ ಗಾಣಧಾಳ ಸ್ವಾಗತಿಸಿ, ವಂದಿಸಿದರು.