ನಾಟಕ ಪರಂಪರೆ ಉಳಿವಿಗೆ ಎಲ್ಲರೂ ಮುಂದಾಗಿ: ಅಲ್ಲಮಪ್ರಭು ಬೆಟದೂರ

| Published : Nov 05 2024, 12:38 AM IST

ಸಾರಾಂಶ

ನಾಟಕ ಪರಂಪರೆಯನ್ನು ಉಳಿಸಿ, ಬೆಳೆಸುವ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ನಾಟಕ ಪರಂಪರೆಯನ್ನು ಉಳಿಸಿ, ಬೆಳೆಸುವ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ ಹೇಳಿದರು.

ತಾಲೂಕಿನ ಚಿಕ್ಕ ಮ್ಯಾಗೇರಿ ಗ್ರಾಮದಲ್ಲಿ ಸಹಜ ಟ್ರಸ್ಟ್‌ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಎರಡು ದಿನಗಳ ಸಹಜ ನಾಟಕೋತ್ಸವ ಹಾಗೂ ೨೦೨೪ನೇ ರಂಗ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ನಾಟಕ ನೋಡುವುದರಿಂದ ಮನಸ್ಸು ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ನೆರೆಹೊರೆಯವರ ಜತೆ ಯಾವ ರೀತಿ ಬದುಕು ಕಟ್ಟಿಕೊಳ್ಳಬೇಕೆಂಬುದನ್ನು ಕಲಿಯಲು ಸಾಧ್ಯ. ಜನರಲ್ಲಿ ನಾಟಕ ನೋಡುವ ಹವ್ಯಾಸ ತೀರಾ ಕಡಿಮೆಯಾಗುತ್ತಿದೆ. ನಾಟಕ ಪರಂಪರೆ ಉಳಿಸಿ, ಬೆಳೆಸುವ ಪ್ರಯತ್ನಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದರು.

ನೀನಾಸಂದಿಂದ ಬಂದ ಕಲಾವಿದರ ನಾಟಕವನ್ನು ವೀಕ್ಷಿಸಿ ಕಲೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ರಂಗಭೂಮಿ ಕಲಾವಿದ ಹಾಗೂ ಅಪಾರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ ಮಾತನಾಡಿ, ಗಾಂಧೀಜಿಯವರಿಗೂ ನಾಟಕಗಳು ಪ್ರಭಾವ ಬೀರಿದ್ದವು. ನಾಟಕ ಮನುಷ್ಯನ ಭಾವನೆಗಳನ್ನು ಕೆರಳಿಸುವುದಲ್ಲದೆ ಅತ್ಯಂತ ಸಂತಸದ ಸಂದರ್ಭಗಳಿಗೆ ಕರೆದೊಯ್ಯುತ್ತದೆ. ಇದರಿಂದ ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಈ ಸಂದರ್ಭದಲ್ಲಿ ವಿ.ಎನ್. ಅಶ್ವಥ್ ರಚಿಸಿದ ಶ್ರೀಕೃಷ್ಣ ಸಂಧಾನ ನಾಟಕ ಮತ್ತು ಸಾಣೇಹಳ್ಳಿಯ ಶ್ರೀ ಪಂಡಿತ ಆರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಮೋಳಿಗೆ ಮಾರಯ್ಯ ನಾಟಕಗಳು ಪ್ರದರ್ಶನಗೊಂಡವು.

ಸಹಜಾ ಟ್ರಸ್ಟ್‌ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ ಮಾತನಾಡಿದರು.

ಕಲಾವಿದರಾದ ಕಾಳೇಶ ಕಮ್ಮಾರ, ರಾಮಪ್ಪ ನಡುವಲಕೇರಿ, ಸುಲೋಚನಾ ವಾಲ್ಮೀಕಿ, ಸಾವಿತ್ರಿ ದಳವಾಯಿ ಮಠ, ಶರಣಪ್ಪ ಮೇಟಿ ಓಜನಹಳ್ಳಿ, ಸರಸ್ವತಿ ಸಸಿ, ದೇವೇಂದ್ರಗೌಡ ಪೂಜಾರಗೆ ಸಹಜ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಕೃಷ್ಣ ಸಂಧಾನ ನಾಟಕ ಕಲಾವಿದರು ಹಾಗೂ ಸ್ಥಳೀಯ ಕಲಾವಿದರು ಮತ್ತಿತರರು ಇದ್ದರು.