ಸಾರಾಂಶ
ಶೀಘ್ರದಲ್ಲೇ ಸಿಎಂ, ಉಸ್ತುವಾರಿ ಸಚಿವರೊಂದಿಗೆ ಮಾತುಕತೆ: ಜೋಶಿ । ಸಮ್ಮೇಳನ ಯಾವಾಗ ನಡೆಸಬೇಕೆಂಬ ಬಗ್ಗೆ ಅಭಿಪ್ರಾಯ ಸಂಗ್ರಹ
ಕನ್ನಡಪ್ರಭ ವಾರ್ತೆ ಮಂಡ್ಯಮುಂದಿನ ವರ್ಷದಲ್ಲೇ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ. ಆದರೆ, ಯಾವ ತಿಂಗಳಿನಲ್ಲಿ ನಡೆಸಿದರೆ ಸೂಕ್ತ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಭಾನುವಾರ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತಂತೆ ಜಿಲ್ಲೆಯ ಸಾಹಿತಿಗಳು, ಚಿಂತಕರು, ಲೇಖಕರು, ಕನ್ನಡಪರ ಸಂಘಟಕರು, ಸಾಹಿತ್ಯಾಸಕ್ತರು, ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ೨೦೨೪ರ ಜನವರಿಯಲ್ಲಿ ನಡೆಸುವುದಕ್ಕೆ ಮೊದಲು ನಿರ್ಧರಿಸಲಾಗಿತ್ತು. ಸಮ್ಮೇಳನ ನಡೆಯುವ ಸ್ಥಳದ ಪರಿಶೀಲನೆಯನ್ನೂ ನಡೆಸಲಾಗಿತ್ತು. ಆದರೆ, ಬರಪರಿಸ್ಥಿತಿ ಎದುರಾಗಿರುವುದರಿಂದ ಈ ಸಮಯದಲ್ಲಿ ಸಮ್ಮೇಳನ ನಡೆಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆಯೇ ವಿನಃ ಮಂಡ್ಯದಿಂದ ಸಮ್ಮೇಳನವನ್ನು ರದ್ದುಪಡಿಸಿಲ್ಲ ಎಂದು ಖಚಿತಪಡಿಸಿದರು.
ಮುಂದಿನ ದಿನಗಳಲ್ಲಿ ಕಾರ್ಪೋರೇಷನ್ ಚುನಾವಣೆಗಳು ಎದುರಾಗಲಿವೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಬರಲಿವೆ, ಆನಂತರ ಮಳೆಗಾಲ ಶುರುವಾಗಲಿದೆ. ಇದೆಲ್ಲದರ ನಡುವೆ ಸಮ್ಮೇಳನವನ್ನು ಯಾವ ತಿಂಗಳಿನಲ್ಲಿ ನಡೆಸಿದರೆ ಸೂಕ್ತ ಎಂಬ ಬಗ್ಗೆ ಎಲ್ಲರಿಂದ ಅಭಿಪ್ರಾಯವನ್ನು ಸಂಗ್ರಹಿಸಬೇಕಿದೆ. ನೀವೆಲ್ಲರೂ ಸಮ್ಮೇಳನಕ್ಕೆ ಸೂಕ್ತವಾದ ತಿಂಗಳನ್ನು ಸೂಚಿಸಿದರೆ ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕಕ್ಕೆ ಬಂದಂತೆ ಜನರನ್ನು ಸೇರಿಸಲಾಗುವುದಿಲ್ಲ. ಇಲ್ಲಿ ಅದಕ್ಕಿಂತಲೂ ಕಡಿಮೆ ಜನರು ಸೇರಲಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಕಡಿಮೆ ಜನರು ಬರುತ್ತಾರೆ ಎಂಬ ಮುನ್ಸೂಚನೆಯನ್ನೇ ಸವಾಲಾಗಿ ಸ್ವೀಕರಿಸಿಕೊಂಡು ಹೆಚ್ಚು ಜನರನ್ನು ಸೇರಿಸುವುದಕ್ಕೆ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ನುಡಿದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನರು ಸೇರುವುದಕ್ಕೆ ಸಾಹಿತ್ಯ ಸಮ್ಮೇಳನಕ್ಕೂ ಮುನ್ನ ನಡೆಸಿದ ಶ್ರೀ ಭುವನೇಶ್ವರಿ ಯಾತ್ರೆ ಕಾರಣವಾಯಿತು. ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಆರಂಭಿಸಿದ್ದರಿಂದ ರಥ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಕನ್ನಡಿಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದನ್ನೇ ಮುಂದಿಟ್ಟುಕೊಂಡು ಇಲ್ಲಿಯೂ ಹೆಚ್ಚು ಜನರನ್ನು ಸೇರಿಸುವುದರೊಂದಿಗೆ ಐತಿಹಾಸಿಕ ಸಮ್ಮೇಳನವಾಗಿ ಮಾಡೋಣ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಕೇಂದ್ರ ಕಸಾಪ ಕೋಶಾಧ್ಯಕ್ಷ ಪಾಂಡು, ಗೌರವ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜ್, ರಾಮಲಿಂಗಶೆಟ್ಟಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ. ಧರಣೇಂದ್ರಯ್ಯ, ಪ್ರೊ.ಜಿ.ಟಿ. ವೀರಪ್ಪ, ಮೀರಾ ಶಿವಲಿಂಗಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ, ಕೋಶಾಧ್ಯಕ್ಷ ಬಿ.ಎಂ. ಅಪ್ಪಾಜಪ್ಪ, ಎಂ.ಬಿ. ರಮೇಶ್, ದರಸಗುಪ್ಪೆ ಧನಂಜಯ ಇತರರಿದ್ದರು.
---ಮಂಡ್ಯದ ರೈತ ಸಭಾಂಗಣದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತಂತೆ ಜಿಲ್ಲೆಯ ಸಾಹಿತಿಗಳು, ಚಿಂತಕರು, ಲೇಖಕರು, ಕನ್ನಡಪರ ಸಂಘಟಕರು, ಸಾಹಿತ್ಯಾಸಕ್ತರು, ಅಭಿಮಾನಿಗಳ ಸಭೆಯಲ್ಲಿ ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಮಾತನಾಡಿದರು.