ಸಾರಾಂಶ
ಉಡುಪಿಯಲ್ಲಿ ನಡೆಯುತ್ತಿರುವ 4 ದಿನಗಳ ಅಖಿಲ ಭಾರತ ಅಂತರ್ ವಿವಿ ಪುರುಷರ ಖೋಖೋ ಪಂದ್ಯಾವಳಿಯಲ್ಲಿ ಮೊದಲ ದಿನ ಮಂಗಳೂರು ವಿವಿ ತಂಡವು 2ನೇ ಸುತ್ತಿಗೇರಿದೆ. ಆದರೆ ರಾಜ್ಯದ ಇನ್ನೊಂದು ತಂಡ ದಾವಣಗೆರೆ ವಿವಿ ಮೊದಲ ಪಂದ್ಯದಲ್ಲಿ ಸೋಲುಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನಡೆಯುತ್ತಿರುವ 4 ದಿನಗಳ ಅಖಿಲ ಭಾರತ ಅಂತರ್ ವಿವಿ ಪುರುಷರ ಖೋಖೋ ಪಂದ್ಯಾವಳಿಯಲ್ಲಿ ಮೊದಲ ದಿನ ಮಂಗಳೂರು ವಿವಿ ತಂಡವು 2ನೇ ಸುತ್ತಿಗೇರಿದೆ. ಆದರೆ ರಾಜ್ಯದ ಇನ್ನೊಂದು ತಂಡ ದಾವಣಗೆರೆ ವಿವಿ ಮೊದಲ ಪಂದ್ಯದಲ್ಲಿ ಸೋಲುಂಡಿತು.ದಿನದ 3ನೇ ಪಂದ್ಯದಲ್ಲಿ ಆಡಿದ ಮಂಗಳೂರು ವಿವಿ ತಂಡದ ಆಟಗಾರರು ಆರಂಭದಿಂದಲೇ ಮೇಲುಗೈ ಸಾಧಿಸಿ, ದೆಹಲಿ ವಿವಿ ತಂಡದ ಆಟಗಾರರನ್ನು 21 - 15 ಅಂಕಗಳಿಂದ ಸೋಲಿಸಿದರು.
ದಿನದ 6ನೇ ಪಂದ್ಯದಲ್ಲಿ ಮುಂಬೈ ವಿವಿ ತಂಡವು ದಾವಣಗೆರೆ ವಿವಿ ತಂಡವನ್ನು ನಿಗದಿತ ಸಮಯದೊಳಗೆ 16 - 14 ಅಂಕಗಳಿಂದ ಸೋಲಿಸಿತು.ರೋಚಕವಾಗಿ ನಡೆದ ದಿನ ಮೊದಲ ಪಂದ್ಯದಲ್ಲಿ ಕಾನ್ಪುರದ ಸಿಎಸ್‌ಜೆಎಂ ತಂಡವು ಕೇರಳ ವಿವಿಯನ್ನು 14 - 13ರಲ್ಲಿ ಸೋಲಿಸಲು ಸಾಕಷ್ಟು ಕಷ್ಟಪಡಬೇಕಾಯಿತು.
2ನೇ ಪಂದ್ಯದಲ್ಲಿ ಛತ್ತೀಸ್‌ಘಡ್ ರಾಯ್ಪುರದ ಪಂಡಿತ್ ರವಿಶಂಕರ್ ಶುಕ್ಲ ವಿವಿಯು ಮಹಾರಾಷ್ಟ್ರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿವಿಯ ಎದುರು 13 - 19ರಿಂದ ಸೋಲುಣ್ಣಬೇಕಾಯಿತು.ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯು ಗುಜರಾತ್‌ನ ಹೇಮಚಂದ್ರ ಯಾದವ್ ವಿವಿಯನ್ನು 24 - 14ರಿಂದ, ಓಡಿಸ್ಸಾದ ಕಳಿಂಗ ವಿವಿಯು ಅಮೃತ್‌ಸರ್‌ನ ಗುರುನಾನಕ್ ವಿವಿಯನ್ನು 21 - 20ರಿಂದ, ಮಹಾರಾಷ್ಟ್ರದ ಎಸ್‌ಆರ್‌ಟಿಎಂ ವಿವಿಯು ಓಡಿಸ್ಸಾದ ಗಂಗಾಧರ್ ಮೆಹರ್ ವಿವಿಯನ್ನು 18 - 16ರಿಂದ, ಜಲಂದರ್‌ನ ಎಲ್‌ಪಿ ವಿವಿಯು ತಮಿಳುನಾಡಿನ ಭಾರತಿಯಾರ್ ವಿವಿಯನ್ನು 16 - 14ರಿಂದ ಸೋಲಿಸಿ ಮುಂದಿನ ಸುತ್ತಿಗೆ ತೇರ್ಗಡೆಗೊಂಡವು.