ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್‌.ವಿ.ಶಿವಪ್ಪ ಮರು ಆಯ್ಕೆ

| Published : Jul 10 2024, 12:32 AM IST

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್‌.ವಿ.ಶಿವಪ್ಪ ಮರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಎಚ್.ವಿ. ಶಿವಪ್ಪ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಿಗೆ 21ರಂದು ಚುನಾವಣೆ ನಿಗದಿಪಡಿಸಲಾಗಿತ್ತು. ಪೈಪೋಟಿ ಇಲ್ಲದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸೇರಿದಂತೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕು ಘಟಕಗಳ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಎಚ್.ವಿ. ಶಿವಪ್ಪ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಿಗೆ 21ರಂದು ಚುನಾವಣೆ ನಿಗದಿಪಡಿಸಲಾಗಿತ್ತು. ಚುನಾವಣಾ ಪ್ರಕ್ರಿಯೆ ಹಿನ್ನಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಘಟಕಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಜು.8 ಅಂತಿಮ ದಿನವಾಗಿತ್ತು. ಪೈಪೋಟಿ ಇಲ್ಲದ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸೇರಿದಂತೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲೂಕು ಘಟಕಗಳ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಸಮ್ಮುಖದಲ್ಲಿ ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ಶ್ರೀ ಸದಾಶಿವ ಸ್ವಾಮೀಜಿ, 2024-29 ನೇ ಅವಧಿಗೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಎಚ್.ವಿ.ಶಿವಪ್ಪ, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಆದರ್ಶ ಕೂಗೇಕೋಡಿ ಮತ್ತು ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ರಾಜೇಶ್ ನಾಲ್ಕೇರಿ, ಕುಶಾಲನಗರ ತಾಲೂಕು ಅಡಹಾಕ್ ಸಮಿತಿ ಅಧ್ಯಕ್ಷರಾಗಿ ಎಚ್.ಎಂ.ಮಧುಸೂದನ್ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಶ್ರೀ ಸದಾಶಿವ ಸ್ವಾಮೀಜಿ, ಚುನಾವಣೆಯಲ್ಲಿ ಮನಸ್ತಾಪಕ್ಕೆ ಎಡೆ ಮಾಡಿಕೊಡಬಾರದು ಎಂಬ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದ ಪರಿಣಾಮ ನೂತನ ಘಟಕಗಳು ಅವಿರೋಧವಾಗಿ ಅಯ್ಕೆಯಾಗಿರುವುದು ಅಭಿನಂದನಾರ್ಹ‌. ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ಆಡಳಿತ ಮಂಡಳಿಗಳ ರಚನೆ ಕಾರ್ಯ ನಡೆಯಲಿದೆ. ನೂತನ ಪದಾಧಿಕಾರಿಗಳು ಸಮಾಜವನ್ನು ಒಗ್ಗೂಡಿಸಿ ಕಟ್ಟಿ ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು.

ನೂತನ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ರಾಜ್ಯಮಟ್ಟದ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ಒದಗಿಸಿದರು.

ಕೊಡಗು ಜಿಲ್ಲಾ ಘಟಕದ ಉಪಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿತೇಂದ್ರ, ಸೋಮವಾರಪೇಟೆ ತಾಲೂಕು ಘಟಕದ ಉಪಚುನಾವಣಾ ಅಧಿಕಾರಿ ವಿರೂಪಾಕ್ಷ ಆಡಿನಾಡೂರು, ವಿರಾಜಪೇಟೆ ತಾಲೂಕು ಘಟಕದ ಉಪಚುನಾವಣೆ ಅಧಿಕಾರಿ ಎಸ್.ಎಸ್ ಸುರೇಶ್ ಸಭೆಯಲ್ಲಿ ಇದ್ದರು. ಸಮಾಜದ ಪ್ರಮುಖರಾದ ಶಾಂಭ ಶಿವಮೂರ್ತಿ, ಉದಯಕುಮಾರ್, ಮಹಾದೇವಪ್ಪ ಪ್ರವೀಣ್ ಕುಮಾರ್, ಯತೀಶ್, ಚಂದ್ರಶೇಖರ್, ಎಚ್.ಬಿ. ಚಂದ್ರಪ್ಪ ಹಾಗೂ ಎ.ಆರ್ ಮಮತಾ ಮತ್ತಿತರರು ಇದ್ದರು.