ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಂಕಿತ ಡೆಂಘೀ ಪ್ರಕರಣ ಉಲ್ಭಣಗೊಳ್ಳುವುದನ್ನು ತಡೆಗಟ್ಟಲು ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದರ ಜೊತೆಗೆ ಪರಿಣಾಮಕಾರಿಯಾಗಿ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ವಿಶೇಷ ಸಭೆಯಲ್ಲಿ ಸೂಚನೆ ನೀಡಲಾಗಿದೆ.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಮಂಗಳವಾರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆದ ಡೆಂಘೀ ಕುರಿತ ತುರ್ತು ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
ಡೆಂಘೀ ಪತ್ತೆ ಹಾಗೂ ನಿಯಂತ್ರಣ ಸಲುವಾಗಿ ಮೇಲೇರಿಯಾ ಆ್ಯಪ್‌ನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಒಳವಡಿಸುವುದು, ತಜ್ಞ ವೈದ್ಯರ ಸಮಿತಿ ರಚನೆ, ಪ್ರತ್ಯೇಕ ಕಂಟ್ರೋಲ್ ರೂಂ ವ್ಯವಸ್ಥೆ, ಡೆಂಘೀ ಶಂಕಿತ ಹಾಗೂ ಪತ್ತೆಯಾದ ಸ್ಥಳಗಳಲ್ಲಿ ಸ್ವಚ್ಛತೆ, ಸಿಂಪರಣೆ, ಗಪ್ಪಿ ಮೀನು ಸಾಕಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ನೇತೃತ್ವದಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಕಾಲೇಜುಗಳು, ಸಂಘ ಸಂಸ್ಥೆಗಳು, ಆಶಾ ಕಾರ್ಯಕರ್ತೆಯರು, ಎಂಪಿಡಬ್ಲ್ಯು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡು ಸಮಿತಿ ರಚಿಸಿ, ಪತ್ತೆಯಾಗುವ ಡೆಂಘೀ ಪ್ರಕರಣಗಳನ್ನು ಸದಸ್ಯರ ಗಮನಕ್ಕೆ ತಂದು ತುರ್ತು ಕ್ರಮ ವಹಿಸುವುದು. ಜೊತೆಗೆ ಪ್ರತಿ ವಾರ್ಡ್‌ಗೊಂದು ಸಮಿತಿ ರಚಿಸಿ ಲಾರ್ವಾ ಪತ್ತೆ, ಫಾಗಿಂಗ್ ಮತ್ತು ಡೆಂಘೀ ಲಕ್ಷಣ ಕಂಡು ಬರುವ ರೋಗಿಗಳ ತಪಾಸಣೆಗೆ ಕ್ರಮ ಕೈಗೊಳ್ಳುವುದು, ಪಾಲಿಕೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಕಮಾಂಡ್ ಕಂಟ್ರೋಲ್‌ಗೆ ಪೂರಕವಾಗಿ ಹಿಂದೆ ಚಾಲ್ತಿಯಲ್ಲಿದ್ದ ಆ್ಯಪ್ ಅಭಿವೃದ್ಧಿ ಪಡಿಸಿಕೊಂಡು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದರು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ಸದಸ್ಯರಾದ ಎ.ಸಿ.ವಿನಯರಾಜ್, ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಅನಿಲ್ ಕುಮಾರ್ ಮಾತನಾಡಿದರು.ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಪಾಲಿಕೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ ಆ್ಯಪ್ ಅಭಿವೃದ್ಧಿಪಡಿಸುವ ಜತೆಗೆ ಎಲ್ಲ ಸಾರ್ವಜನಿಕರಿಗೆ ಲಭ್ಯವಾಗುವ ರೀತಿಯಲ್ಲಿ ಕಂಟ್ರೋಲ್ ರೂಂ ಕಾರ್ಯಾಚರಿಸುವಂತಾಗಬೇಕು ಎಂದರು.
ಸಭೆಯಲ್ಲಿ ಉಪ ಮೇಯರ್ ಸುನೀತಾ, ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಆಯುಕ್ತ ಆನಂದ್ ಇದ್ದರು.ಸೊಳ್ಳೆ ಉತ್ಪತ್ತಿ ತಡೆಯೇ ಪ್ರಮುಖ ಅಂಶ: ಡಾ.ನವೀನ್‌ಚಂದ್ರ ಕುಲಾಲ್ಕಳೆದ ಐದು ವರ್ಷಗಳಲ್ಲಿ ಮಲೇರಿಯಾ ನಿಯಂತ್ರಣವಾಗಿದ್ದು, 2,700ಕ್ಕೂ ಅಧಿಕ ಪ್ರಕರಣಗಳಿಂದ ಕಳೆದ ವರ್ಷ 82 ಹಾಗೂ ಈ ವರ್ಷ ಈವರೆಗೆ 43 ಪ್ರಕರಣಗಳಿಗೆ ಇಳಿಕೆಯಾಗಿದೆ. ಮಲೇರಿಯಾ ಹಾಗೂ ಡೆಂಘೀ ನಿಯಂತ್ರಣ ವಿಭಿನ್ನ ಪ್ರಕ್ರಿಯೆಯಾಗಿದೆ. ಮಲೇರಿಯಾದಲ್ಲಿ ಜ್ವರದ ನಿಯಂತ್ರಣ ಅಗತ್ಯವಾದರೆ, ಡೆಂಘೀಯಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯುವುದೇ ಪ್ರಮುಖ ಅಂಶ ಎಂದು ಡಾ. ನವೀನ್ ಚಂದ್ರ ಕುಲಾಲ್ ಅಭಿಪ್ರಾಯಿಸಿದರು.
ಮಂಗಳೂರಲ್ಲಿ 113 ಡಂಘೀ ಕೇಸ್:ಈಗಾಗಲೇ ನಗರದಲ್ಲಿ 113 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ವಾಸ್ತವದಲ್ಲಿ ಇದಕ್ಕಿಂತ ಸುಮಾರು 20ರಿಂದ ಶೇ. 30ರಷ್ಟುಹೆಚ್ಚು ಪ್ರಮಾಣದಲ್ಲಿ ಡೆಂಘೀ ಇರಬಹುದು. ಕೇಂದ್ರದ ಆರೋಗ್ಯ ಇಲಾಖೆ ಹಾಗೂ ಡಬ್ಲುಎಚ್‌ಒ ನಿರ್ದೇಶನದ ಪ್ರಕಾರ ವಾರ್ಡೊಂದರಲ್ಲಿ ಐದು ಜನರಿಗೆ ಡೆಂಗಿ ಬಂದರೆ ಇಡೀ ವಾಡನ್ನು ಡೆಂಗಿ ಪೀಡಿತ ಎಂದು ನಿರ್ಧರಿಸಲಾಗುತ್ತದೆ. ರಾಜ್ಯ ಸರ್ಕಾರ ಈಗಾಗಲೇ ಡೆಂಘೀ ನಿಯಂತ್ರಣಕ್ಕೆ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆಯ ವಿಧಾನ) ರೂಪಿಸಿದ್ದು, ಅದರಂತೆ ರ್‍ಯಾಪಿಡ್, ಶಂಕಿತ ಹಾಗೂ ದೃಢ ಪ್ರಕರಣಗಳನ್ನು ಪಟ್ಟಿಮಾಡಲಾಗುತ್ತದೆ. ಪ್ರತಿನಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ ಜಿಲ್ಲಾ ಮಟ್ಟದ ಮೂಲಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಜಿಲ್ಲೆಯಲ್ಲಿ 2019ರಲ್ಲಿ ದೊಡ್ಡ ಮಟ್ಟದಲ್ಲಿ ಡೆಂಘೀ ಕಾಡಿದ್ದು, ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದೇ ಪ್ರಮುಖ ನಿಯಂತ್ರಣ ಕ್ರಮ. ಸದ್ಯ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತದೆ ಎಂದು ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯಾಗಿ ಡಾ. ನವೀನ್ ಚಂದ್ರ ಕುಲಾಲ್ ಹೇಳಿದರು.ಪಾಲಿಕೆ ಡೆಂಘೀ ಕಾರ್ಯಾಚರಣೆಗೆ ಸಂಸದ ಅಸಮಾಧಾನ
ಸಭೆಯಲ್ಲಿ ಭಾಗವಹಿಸಿದ್ದ ನೂತನ ಸಂಸದ ಕ್ಯಾ. ಬ್ರಜೇಶ್ ಚೌಟ ಪ್ರತಿಕ್ರಿಯಿಸಿ, ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿ ಪಾಲಿಕೆ ಗೊಂದಲದಲ್ಲಿ ಇರುವಂತೆ ಭಾಸವಾಗುತ್ತಿದೆ. ಡೆಂಘೀಯ ಮಾಹಿತಿಗೆ ಸೂಕ್ತ ಕೇಂದ್ರವೇ ಇದ್ದ ಹಾಗೆ ಕಾಣಿಸುತ್ತಿಲ್ಲ. ಹಾಗಾಗಿ ಸೂಕ್ತ ಮಾಹಿತಿಗಳು ಲಭ್ಯವಾಗುತ್ತಿರುವ ಬಗ್ಗೆಯೂ ಸಂಶಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿ ಸಂಘಟಿತ ನಿರ್ದಿಷ್ಟ ಯೋಜನೆಯ ಅಗತ್ಯವಿದೆ ಎಂದು ಹೇಳಿದರು.