ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಯ ಕಣವಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆಗೆ ಭಾನುವಾರ ಇಲ್ಲಿಯ ಹಳಿಯಾಳ ರಸ್ತೆಯ ಸಿ.ಬಿ. ನಗರದಲ್ಲಿರುವ ಲಿಂಗಾಯತ ಭವನದಲ್ಲಿ ತುರುಸಿನಿಂದ ಮತದಾನ ನಡೆಯಿತು.ಒಂದು ಅಧ್ಯಕ್ಷ ಸ್ಥಾನ, ಹತ್ತು ಜನ ಮಹಿಳಾ ಕಾರ್ಯಕಾರಿ, 20 ಜನ ಪುರುಷ ಕಾರ್ಯಕಾರಿ ಸೇರಿದಂತೆ ಒಟ್ಟು 31 ಆಡಳಿತ ಮಂಡಳಿಗೆ ಭಾನುವಾರ ಬೆಳಗ್ಗೆ 10ರಿಂದ ಶುರುವಾದ ಮತದಾನ ಸಂಜೆ 5ರ ನಂತರವೂ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಗುರುರಾಜ ಹುಣಸಿಮರದ, ಶಾಸಕ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಅವರ ಒಮ್ಮತದ ಅಭ್ಯರ್ಥಿ ಹಾಗೂ ಈ ಮೊದಲಿನ ಆಡಳಿತ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದ ಶಿದ್ದಪ್ಪ ಕಂಬಾರ ಸ್ಪರ್ಧಿಸಿದ್ದರು. ಮೂವರು ತಮ್ಮ ತಮ್ಮ ಬಣಗಳೊಂದಿಗೆ ಮತದಾರರ ಓಲೈಸುವಲ್ಲಿ ನಿರತರಾಗಿದ್ದರು.
ಜಿಲ್ಲಾ ಘಟಕದಲ್ಲಿ 2856 ಮತದಾರರಿದ್ದು, ಜಿಟಿ ಜಿಟಿ ಮಳೆಯಲ್ಲೂ ಕೊಡೆ ಹಿಡಿದುಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಮತಕೇಂದ್ರದ ಎದುರು ಮೂರು ಬಣಗಳ ಸದಸ್ಯರು ಮತದಾರರಿಗೆ ಕೈ ಮುಗಿದು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಮ್ಮನ್ನು ಆಯ್ಕೆ ಮಾಡಿ ಎಂದು ದುಂಬಾಲು ಬೀಳುತ್ತಿದ್ದರು. ಸಮಾಜವನ್ನು ರಾಜಕೀಯದ ಕೈಗೆ ಕೊಡಬೇಡಿ ಎಂದು ಹುಣಸಿಮರದ, ಮಹಾಸಭಾಕ್ಕೆ ಹೊಸ ನೀರು ಬರಲೆಂದು ಪ್ರದೀಪಗೌಡ ಹಾಗೂ ನಮಗೊಂದು ಅವಕಾಶ ಕೊಡಿ ಎಂದು ಕಂಬಾರ ಮತದಾರರಿಗೆ ಮನವಿ ಮಾಡುತ್ತಿದ್ದರು. ಒಂದು ವಿಶೇಷ ಏನೆಂದರೆ, ಮತ ಕೇಂದ್ರದ ಎದುರು ಮತದಾರಕ್ಕಿಂತ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಬೆಂಬಲಿಗರೇ ಹೆಚ್ಚಿದ್ದರು. ಹೀಗಾಗಿ ಹಿಂದೆಂದೂ ಆಗಿರದಷ್ಟು ಗದ್ದಲ-ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಳಗ್ಗೆ 8ರಿಂದಲೇ ಶುರುವಾದ ಟ್ರಾಫಿಕ್‌ನ್ನು ಸಂಜೆ ವರೆಗೂ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ಮಹಾಸಭಾ ಸದಸ್ಯರಿರುವ ಹಿನ್ನೆಲೆಯಲ್ಲಿ ಹಾಗೂ ಇಡೀ ದಿನ ಜಿಟಿ ಜಿಟಿ ಮಳೆಯ ಕಾರಣದಿಂದ ಕೆಲವು ಸದಸ್ಯರು ಸಂಜೆ ಹೊತ್ತು ಮತದಾನಕ್ಕೆ ಆಗಮಿಸಿದರು. ಸಂಜೆ 5ರ ಹೊತ್ತಿಗೆ 1600 ವರೆಗೆ ಮತದನವಾಗಿದ್ದು, ಸಂಜೆ 5ರೊಳಗೆ ಮಹಾಸಭಾದ ಮತದಾನ ಕೇಂದ್ರಕ್ಕೆ ಆಗಮಿಸಿದವರಿಗೂ ಮತದಾನಕ್ಕೆ ಅವಕಾಶ ನೀಡಿತು. ಒಟ್ಟಾರೆ ಮಹಾಸಭಾದ 2856 ಸದಸ್ಯರ ಪೈಕಿ 1975 (ಶೇ.69.15) ಸದಸ್ಯರು ಮತದಾನ ಮಾಡಿದರು.
ಮಹಾಸಭಾ ನಿಯಮಾವಳಿಯಲ್ಲಿ ಚುನಾವಣೆಗೆ ಅವಕಾಶ ಇದ್ದರೂ ಸಮಾಜದ ಹಿತದೃಷ್ಟಿಯಿಂದ ಈ ವರೆಗೆ ಐದು ವರ್ಷಗಳ ಆಡಳಿತಾವಧಿಗೆ ಒಮ್ಮತದ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಈ ಬಾರಿ ರಾಜಕೀಯ ನುಸುಳಿದ ಹಿನ್ನೆಲೆಯಲ್ಲಿ ಒಮ್ಮತಕ್ಕೆ ಬರದೇ ಅನಿವಾರ್ಯವಾಗಿ ಚುನಾವಣೆ ಮಾಡಲಾಯಿತು. ಸಂಜೆ 6ರ ನಂತರ ಮತ ಏಣಿಕೆ ಶುರುವಾಗಿದ್ದು ಮೊದಲು ಹತ್ತು ಜನ ಮಹಿಳಾ ಕಾರ್ಯಕಾರಿ ನಂತರ 20 ಜನ ಪುರುಷ ಕಾರ್ಯಕಾರಿ ಹಾಗೂ ಕೊನೆಗೆ ಅಧ್ಯಕ್ಷ ಸ್ಥಾನದ ಮತ ಏಣಿಕೆ ನಡೆಯಲಿದೆ ಎಂಬ ಮಾಹಿತಿ ಇದ್ದು ಫಲಿತಾಂಶವನ್ನು ಕಾದು ನೋಡಬೇಕಿದೆ. ಚುನಾವಣಾಧಿಕಾರಿಗಳಾಗಿ ಎಂ.ಎಸ್. ಬಡಿಗೇರ, ಸಹಾಯಕ ಚುನಾವಣಾಧಿಕಾರಿ ಕಲ್ಮೇಶ ನಿಂಗಣ್ಣವರ ಕಾರ್ಯ ನಿರ್ವಹಿಸಿದರು.ಮತ ಹಾಕಿದ ಪ್ರಮುಖರು
ಮಹಾಸಭಾದ ಸದಸ್ಯರಾಗಿ ಜಿಲ್ಲೆಯ ಗಣ್ಯರಿದ್ದು ಈ ಪೈಕಿ ಕೆಎಎಲ್ ಸಂಸ್ಥೆಯ ನಿರ್ದೇಶಕ ಶಂಕರ ಮುನವಳ್ಳಿ, ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಶರಣಪ್ಪ ಮತ್ತಿಗಟ್ಟಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ. ಗುಡಸಿ ಮತ್ತಿತರರು ದಂಪತಿ ಹಾಗೂ ಕುಟುಂಬದ ಸಮೇತ ಮತದಾನ ಮಾಡಿದರು.ಇಬ್ಬರೂ ಶಾಸಕರು ಗೈರು
ಶಾಸಕರಾದ ಅರವಿಂದ ಬೆಲ್ಲದ ಹಾಗೂ ವಿನಯ ಕುಲಕರ್ಣಿ ತಮ್ಮ ಒಮ್ಮತದ ಅಭ್ಯರ್ಥಿಯನ್ನಾಗಿ ಪ್ರದೀಪಗೌಡ ಪಾಟೀಲ ಅವರನ್ನು ಕಣಕ್ಕೆ ಇಳಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಇಬ್ಬರೂ ಮತದಾನ ಮಾಡಲಿಲ್ಲ. ಬೆಲ್ಲದ ಅವರು ಬೆಂಗಳೂರಿನಲ್ಲಿದ್ದು ಅನಾರೋಗ್ಯದ ಕಾರಣದಿಂದ ಗೈರಾದರೆ, ವಿನಯ ಕುಲಕರ್ಣಿ ಅವರಿಗೆ ಜಿಲ್ಲೆಗೆ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ಗೈರಾದರು.