ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ

| Published : Nov 24 2025, 02:45 AM IST

ಸಾರಾಂಶ

ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಸಹ ಪೂರಕವಾಗಿವೆ

ಕೊಪ್ಪಳ: ಭಗವಂತ ಸೃಷ್ಟಿಸಿದ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ, ಆದರಿಂದ ಎಲ್ಲರಲ್ಲೂ ಪರಮಾತ್ಮನನ್ನು ಕಾಣಬಹುದು ಎಂದು ಕಲಬುರಗಿ ಪಿಎಸ್ಐ ಶರಣೆ ಯಶೋಧಾ ಕಟಕೆ ಹೇಳಿದರು.

ತಾಲೂಕಿನ ಕಾತರಕಿ ಗ್ರಾಮದ ಶ್ರೀದ್ಯಾಮಮ್ಮದೇವಿ (ಗ್ರಾಮದೇವತೆ) ಜಾತ್ರಾ ಮಹೋತ್ಸವದ ಮಹಿಳಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಭಗವಂತ ಎಲ್ಲ ಆಯಾಮಗಳಲ್ಲಿ ಉತ್ತಮರ ಜತೆಗೆ ನಿಲ್ಲುತ್ತಾನೆ, ಮನುಷ್ಯ ಸದಾ ಒಳ್ಳೆಯದನ್ನು ಮಾಡಬೇಕು, ತಂದೆ ತಾಯಿಯರನ್ನು ಭಗವಂತನ ರೂಪದಲ್ಲಿ ನೋಡಬೇಕು. ಹೆಣ್ಣು ಜಗದ ಕಣ್ಣು ಆಕೆಯ ಶಕ್ತಿ ಅಗಾಧವಾದದು, ಆದರೆ ಸಂಸ್ಕಾರಯುತವಾಗಿ ಬದುಕುವದನ್ನು ಕಲಿಸುವುದು ಸಹ ಮುಖ್ಯ. ಖುಷಿಯಿಂದ ಜೀವನ ನಡೆಸಲು ಸರಳತೆ ಬಹಳ ಮುಖ್ಯ, ಆಧ್ಯಾತ್ಮಿಕ ಮತ್ತು ಭಕ್ತಿ ಮಾರ್ಗ ಅನುಸರಿಸಿದರೆ ಜೀವನ ಸುಗಮವಾಗಿ ನಡೆಯುತ್ತದೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಮಹಿಳಾ ಗೋಷ್ಠಿ ಮೂಲಕ ಮಹಿಳೆಯರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದು ಸಂತೋಷದ ಸಂಗತಿ. ಒಬ್ಬ ಪುರುಷ ಪತ್ನಿ ಕಳೆದುಕೊಂಡು ವಿದುರನಾದಾಗ ಆತನಿಗೆ ತೋರಿಸುವ ಅನುಕಂಪ ಮಹಿಳೆ ವಿಧವೆಯಾದಾಗ ತೋರಿಸಿದರೆ ಮಹಿಳಾ ಸ್ವಾತಂತ್ರ್ಯ ಸಿಕ್ಕ ಹಾಗೆ ಆಗುತ್ತದೆ. ಮಹಿಳೆ ಇಂದು ಸ್ವಾವಲಂಬಿಯಾಗಿ ಬದುಕುತ್ತಿದ್ದಾಳೆ, ಅದಕ್ಕೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ಸಹ ಪೂರಕವಾಗಿವೆ. ಮಹಿಳೆ ಮುಂದೆ ಬರಬೇಕಾದರೆ ಮನೆಯ ಎಲ್ಲ ಸದಸ್ಯರು ಸಹಕಾರ ಕೊಟ್ಟಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.

ಗೋಷ್ಠಿಯ ನೇತೃತ್ವ ವಹಿಸಿದ್ದ ಕೊಪ್ಪಳದ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಯೋಗಿನ ಅಕ್ಕನವರು ಮಾತನಾಡಿ, ಆತ್ಮಕ್ಕೆ ಸಂಸ್ಕಾರ ಧಾರಣೆ ಮಾಡಿಕೊಳ್ಳಬೇಕು, ಮನುಷ್ಯ ಎಲ್ಲಿಯ ತನಕ ತನ್ನನ್ನು ತಾನು ಅರಿತುಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಪರಮಾತ್ಮನನ್ನು ಕಾಣಲು ಸಾಧ್ಯವಿಲ್ಲ. ಜಗತ್ತಿಗೆ ಭಗವಂತ ಒಬ್ಬನೇ ಎಂಬ ಅರಿವು ಇದೆ, ಆ ಅರಿವು ಜಾಗೃತಗೊಂಡಾಗ ಜಾತಿಗಳ ನಡುವೆ ಕಲಹ ಆಗದಂತೆ ಮಾಡುತ್ತದೆ ಎಂದರು.

ಗದಗ ಮಾಜಿ ಜಿಪಂ ಉಪಾಧ್ಯಕ್ಷೆ ಶೋಭಾ ಬಸವರಾಜ ಮೇಟಿ ಮಾತನಾಡಿ, ನಮ್ಮ‌ ಮಕ್ಕಳು ನಮ್ಮನ್ನು ಅವರ ಶಿಕ್ಷಕರನ್ನು, ನೆರೆಹೊರೆಯವರನ್ನು ನೋಡಿ ಕಲಿಯುತ್ತಾರೆ. ಹೊರತು ಯಾವುದೋ ಕಥೆ, ಚಿತ್ರ ನೋಡಿ ಅಲ್ಲ. ನಮ್ಮ ಪೀಳಿಗೆ ಚೆನ್ನಾಗಿ ಸುಸಂಸ್ಕೃತ, ಸಂಸ್ಕಾರವಂತರಾಗಿ ಇರಬೇಕು ಅಂದರೆ ನಾವು ಹಾಗೇ ಇರಬೇಕು ಆದ್ದರಿಂದ ಎಲ್ಲ ತಾಯಂದಿರು ಹಾಗೆ ಇರಲು ಪ್ರಯತ್ನಿಸಬೇಕು ಎಂದರು.

ಮಾತ್ರೋಶ್ರೀ ವನಜ ಗಂಗಾಧರ ಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಿವಮ್ಮ ಈಶಪ್ಪ ಬೈರಣ್ಣವರ್, ಸುನಂದಾ ಈಶಪ್ಪ ಗದ್ದಿಕೇರಿ, ಶಿವಗಂಗಾ ಭೂಮ್ಮಕ್ಕನವರ್, ಕೋಮಲ ಕುದುರಿಮೋತಿ, ಅನ್ನಪೂರ್ಣ ಮನ್ನಾಪುರ ಇತರರು ಭಾಗವಹಿಸಿದ್ದರು.

ಉಡಿ ತುಂಬುವ ಕಾರ್ಯಕ್ರಮದ ನಂತರ ಭಕ್ತಿ ಸಂಗೀತ ಜಗದಯ್ಯ ಸಾಲಿಮಠ ಮತ್ತು ಮಹೇಶ ತಳವಾರ ತಂಡದಿಂದ ಜರುಗಿತು.

ಪ್ರಾಸ್ತಾವಿಕವಾಗಿ ಮಾಜಿ ತಾಪಂ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ ಮಾತನಾಡಿದರು. ಶಿವರಂಜನಿ ಹಿರೇಗೌಡ್ರ ಮತ್ತು ಮಹಾದೇವಿ ಭೈರಣ್ಣವರ ನಿರ್ವಹಿಸಿದರು. ಸಾಹಿತಿ ವೀರಣ್ಣ ಹುರಕಡ್ಲಿ ಸಂಪಾದಕತ್ವದ ಕಾತರಕಿ ಗತ ವೈಭವ ಗ್ರಂಥ ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ ಪೂರ್ಣ ಕುಂಭದೊಂದಿಗೆ ಗಂಗಾಸ್ಥಳಕ್ಕೆ ಹೋಗಿ ಪೂಜೆ ನೆರವೇರಿಸಿ ವಿವಿಧ ಕಲಾ ತಂಡಗಳು ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದೇವತೆಯ ಮೆರವಣಿಗೆ ಜರುಗಿತು.