ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಲಿಖಿತವಾಗಿ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಿಗೆ ಫೆ.12ರೊಳಗೆ ಸಲ್ಲಿಸಬಹುದು. ಅದರಂತೆ ಅಂದಿನ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಶಾಸಕರನ್ನು ಆಹ್ವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆ ಆವರಣದಲ್ಲಿ ಫೆ.18ರಂದು ಸರ್ವ ಸದಸ್ಯರ ಸಾಮಾನ್ಯ ಸಭೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಸಿ.ಡಿ.ಗಂಗಾಧರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ 2015-16ನೇ ಸಾಲಿನ ಹಾಗೂ ಮಧ್ಯಾಹ್ನ 12 ಗಂಟೆಗೆ 2016-17ನೇ ಸಾಲಿನ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಾಲಿಗೆ ಸಂಬಂಧಿಸಿದ ಆಡಿಟ್ ವರದಿ ಕಿರು ಪುಸ್ತಕವನ್ನು ಕಾರ್ಖಾನೆಯಲ್ಲಿ ವಿತರಣೆ ಮಾಡಲಾಗುತ್ತಿದೆ. ಸದಸ್ಯರು ಪಡೆದುಕೊಳ್ಳಬಹುದು ಎಂದರು.

ಸಾಮಾನ್ಯ ಸಭೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿದ್ದರೆ ಲಿಖಿತವಾಗಿ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಿಗೆ ಫೆ.12ರೊಳಗೆ ಸಲ್ಲಿಸಬಹುದು. ಅದರಂತೆ ಅಂದಿನ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಶಾಸಕರನ್ನು ಆಹ್ವಾನಿಸಲಾಗಿದೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ಖಾನೆಗೆ ಕೋಟ್ಯಂತರ ರು. ಅನುದಾನವ ನೀಡಿದೆ. 2023-24ನೇ ಸಾಲಿನಲ್ಲಿ 50 ಕೋಟಿ ರು. ಅನುದಾನ, ಬಳಿಕ 50 ಕೋಟಿ ರು. ವಿದ್ಯುತ್ ಬಿಲ್ ಮನ್ನಾ, 2025-26ನೇ ಸಾಲಿನಲ್ಲಿ 10 ಕೋಟಿ ರು. ಅನುದಾನ ನೀಡಲಾಗಿದೆ ಎಂದರು.

ಈಗಾಗಲೇ ಕಾರ್ಖಾನೆಗೆ ಸೇರಿದ 27 ಎಕರೆ ಜಮೀನನ್ನು ತಮ್ಮ ವಶಕ್ಕೆ ಪಡೆಯಲಾಗಿದೆ. ಈವರೆಗೆ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಮುಂದೆಯೂ ಕಾರ್ಖಾನೆಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುವುದು. ಮುಂದಿನ ಹಂಗಾಮಿಗೆ ಸಂಬಂಧಿಸಿದಂತೆ ಕಬ್ಬು ಅರೆಯಲು ರೈತರಿಂದ 5.80 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಇದಲ್ಲದೇ, ಶೀಘ್ರವೇ ಹೊಸ ಬಾಯ್ಲರ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಬಾಕಿ ಉಳಿದ ಅವಧಿಯಲ್ಲಿನ ಸಾಮಾನ್ಯ ಸಭೆಗಳನ್ನು ಮಾರ್ಚ್ ಅಂತ್ಯದೊಳಗೆ ಮಾಡಲಾಗುವುದು ಎಂದರು. 2014-15ನೇ ಸಾಲಿನಲ್ಲಿ ಅಂದಿನ ಮೈಷುಗರ್ ಅಧ್ಯಕ್ಷರು ಸಾಮಾನ್ಯ ಸಭೆ ನಡೆಸಿದ್ದರು. ಈಗ ಬರೋಬ್ಬರಿ ಹತ್ತು ವರ್ಷದ ಬಳಿಕ ಸಭೆ ನಡೆಯುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಎಸ್ಟೇಟ್ ಆಫಿಸರ್ ಸ್ವಾಮಿಗೌಡ, ಕೇನ್ ಸೂಪರಿಂಟೆಂಡೆಂಟ್ ಜಯರಾಮು, ಸಹ ವ್ಯವಸ್ಥಾಪಕ ವೀರೇಶ್, ಪ್ಯಾನಲ್ ಅಡ್ವಕೇಟ್ ಸುಂಡಹಳ್ಳಿ ಮಂಜುನಾಥ್ ಹಾಜರಿದ್ದರು.