ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರತಡವಾಗಿ ಬಂದಿದ್ದಕ್ಕೆ ಇಟ್ಟಂಗಿ ಭಟ್ಟಿ ಕಾರ್ಮಿಕರ ಮೇಲೆ ಮಾಲೀಕ ಆತನ ಬೆಂಬಲಿಗರು ಸೇರಿ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ವಿಜಯಪುರ ಜಿಲ್ಲೆ ಇಂತಹದ್ದೆ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಕಬ್ಬು ಕಟಾವು ಮಾಡಲು(ಕಬ್ಬಿನ ತೋಡಿ) ಗ್ಯಾಂಗ್ ಕಳಿಸುತ್ತೇನೆ ಎಂದು ಹಣ ಪಡೆದಿದ್ದ ವಿಚಾರವಾಗಿ ತಂದೆ ಮಗನ ಮೇಲೆ ಆರು ಜನ ಸೇರಿ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ರಾತ್ರಿಯಿಡಿ ಕಬ್ಬಿನ ಹೊಲದಲ್ಲಿ ಕೂಡಿ ಹಾಕಿ ಬಡಿಗೆ, ಪೈಪ್‌ಗಳಿಂದ ಹಲ್ಲೆ ಮಾಡಿದ್ದು, ಇದೀಗ ಗಾಯಾಳುಗಳಿಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಬ್ಬು ಕಟಾವು ಮಾಡಲು ಗ್ಯಾಂಗ್(ತಂಡ) ಕಳುಹಿಸುತ್ತೇವೆ ಎಂದು ವ್ಯಕ್ತಿಯೊಬ್ಬರಿಂದ ₹6 ಲಕ್ಷ ಹಣ ಮುಂಗಡವಾಗಿ ಪಡೆದಿದ್ದ ವ್ಯಕ್ತಿಗೆ ಹಣ ಕೊಟ್ಟವರು ಮನಸೋಇಚ್ಛೆ ಥಳಿಸಿದ್ದಾರೆ. ತಾಲೂಕಿನ ಮಿಂಚನಾಳ ಆರ್‌ಸಿ ನಿವಾಸಿ ರಾಜಕುಮಾರ ಲಮಾಣಿ ಹಾಗೂ ಆತನ ಮಗ ಕಿರಣ ಲಮಾಣಿ ಥಳಿತಕ್ಕೊಳಗಾದವರು. ಹಣ ನೀಡಿದವರು ಕಬ್ಬಿನ ಗದ್ದೆಯಲ್ಲಿ ಜ.21ರಂದು ರಾತ್ರಿಯಿಡಿ ನಿರಂತರವಾಗಿ ಥಳಿಸಿದ್ದು, ಮೈಮೇಲೆಲ್ಲ ಬಾಸುಂಡೆಗಳು ಮೂಡಿವೆ.
ಕಾರ್ಮಿಕರ ಏಜೆಂಟರ ಮಧ್ಯೆ ಒಪ್ಪಂದ:ರಾಜಕುಮಾರ ಲಮಾಣಿ ಹಾಗೂ ಆತನ ಮಗ ಕಿರಣ ಲಮಾಣಿ ಟ್ರ್ಯಾಕ್ಟರ್ ಇಟ್ಟುಕೊಂಡಿದ್ದಾರೆ. ಇದೀಗ ಕಬ್ಬಿನ ಸೀಸನ್ ಇರುವುದರಿಂದ ಕಾರ್ಮಿಕ ಜೋಡಿಗಳನ್ನು ತೆಗೆದುಕೊಂಡು ಕಬ್ಬು ಕಟಾವು ಮಾಡಿ ಟ್ರ್ಯಾಕ್ಟರ್‌ನಲ್ಲಿ ಫ್ಯಾಕ್ಟರಿಗೆ ಕಳುಹಿಸುತ್ತಾರೆ. ತಾಲೂಕಿನ ಮಕಣಾಪುರ ತಾಂಡಾ 1ರ ನಿವಾಸಿ ಶಿವಲಾಲ ಪವಾರ 4 ತಿಂಗಳ ಹಿಂದೆ 5 ಜೋಡಿ ಕೆಲಸಗಾರರಿಗೆ ಕಬ್ಬು ಕಟಾವು ಮಾಡಲು ₹6 ಲಕ್ಷ ಹಣ ಕೊಟ್ಟಿದ್ದ. ಕಬ್ಬು ಕಟಾವಿಗೆ ಒಪ್ಪಿಕೊಂಡಿದ್ದ ನಗರದ ಕಾಲೇಬಾಗ ನಿವಾಸಿಗಳಾದ ಅರವಿಂದ ಲಮಾಣಿ, ನಾಮದೇವ ರಾಠೋಡ, ಬೆಬತಾ ಚವಾಣ ಸೇರಿದಂತೆ ಒಟ್ಟು 5 ಜೋಡಿ ಕೂಲಿ ಕೆಲಸಗಾರರ ನಡುವೆ ಹಾಗೂ ಶಿವಲಾಲ ಪವಾರನ ನಡುವೆ ಒಪ್ಪಿಗೆ ಪತ್ರ ಮಾಡಿಕೊಟ್ಟಿದ್ದರು. ದೀಪಾವಳಿ ಪಾಡ್ಯದ ನಂತರ ನಂದಿ ಶುಗರ್ ಫ್ಯಾಕ್ಟರಿ ಏರಿಯಾದಲ್ಲಿ ಕಬ್ಬು ಕಟಾವು ಮಾಡಲು ಸಿದ್ಧವಾಗಿರಿ ಎಂದು ಒಪ್ಪಂದ ನಡೆದಿತ್ತು. ಆದರೆ 4-5 ದಿನಗಳ ಬಳಿಕ ಅವರಿಗೆ ಕಬ್ಬು ಕಟಾವು ಮಾಡುವಂತೆ ಹೇಳಲು ಹೋದಾಗ ಈ ಮೇಲಿನ ಐದು ಜೋಡಿಗಳು ಇರಲಿಲ್ಲ. ಅಲ್ಲದೇ, ಅವರೆಲ್ಲರ ಮೊಬೈಲ್‌ಗಳು ಕೂಡ ಬಂದ ಆಗಿದ್ದವು. ಇದರಿಂದಾಗಿ ಮಧ್ಯಸ್ಥಿಕೆ ವಹಿಸಿ ಹಣ ಇಸಿದು ಕೊಟ್ಟಿದ್ದ ರಾಜಕುಮಾರ ಸಿಕ್ಕಿ ಹಾಕಿಕೊಂಡಿದ್ದಾನೆ.
ಪುಸಲಾಯಿಸಿ ಕರೆದು ಹಲ್ಲೆ:ಜ.21 ರಂದು ಶಿವಲಾಲ ಪವಾರ ರಾಜಕುಮಾರ ಮನೆಗೆ ಹೋಗಿ ಓಡಿ ಹೋದ ಕಬ್ಬು ಕಡಿಯುವ 5 ಜೋಡಿಗಳು ಬೆಳ್ಳುಬ್ಬಿಯಲ್ಲಿದ್ದಾರೆ. ಅಲ್ಲಿಗೆ ಹೋಗಿ ನಮ್ಮ ಹಣ ಪಡೆಯೋಣ ಬಾ ಎಂದು ಬೆಳ್ಳುಬ್ಬಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ 5 ಜೋಡಿ ಕೆಲಸಗಾರರು ಇರಲಿಲ್ಲ. ಆಗ ಆರೋಪಿಗಳಾದ ಶಿವಲಾಲ ಪವಾರ, ಆಕಾಶ ಪವಾರ, ವಾಚು ಪವಾರ ಹಾಗೂ 3 ಜನ ಅಪರಿಚಿತರು ಸೇರಿ ಬಡಿಗೆ ಹಾಗೂ ಪ್ಲಾಸ್ಟಿಕ್ ಪೈಪ್‌ಗಳಿಂದ ಇವರನ್ನು ಥಳಿಸಿದ್ದಾರೆ. ಅಲ್ಲದೇ, ಶಿವಲಾಲ ಹಾಗೂ ಆತನ ಬೆಂಬಲಿಗರೆಲ್ಲ ಸೇರಿ ತಂದೆ-ಮಗನನ್ನು ಕಬ್ಬಿನ ಗದ್ದೆಯಲ್ಲಿ ಕೂಡಿಹಾಕಿ ಬಡಿಗೆ, ಪ್ಲಾಸ್ಟಿಕ್ ಪೈಪ್‌ಗಳಿಂದ ಮೈಯೆಲ್ಲ ಬಾಸುಂಡೆ ಬರುವಂತೆ ಹಿಂಸೆ ನೀಡಿದ್ದಾರೆ.
ಅಲ್ಲದೇ, ಮುಂಗಡವಾಗಿ ಕೊಟ್ಟ ಹಣ ಕೊಡಬೇಕು ಇಲ್ಲವಾದಲ್ಲಿ ನಿಮ್ಮ ಮಹೀಂದ್ರಾ ಟ್ರ್ಯಾಕ್ಟರ್ ತಂದು ಕೊಡಬೇಕು. ಅಲ್ಲದೆ ನಮ್ಮ ವಿರುದ್ಧ ಕೇಸ್ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ ಎಂದು ಧಮಕಿ ಹಾಕಿ ನಂತರ ಜ.22ರಂದು ಬಿಟ್ಟು ಕಳಿಸಿದ್ದಾರೆ.ಆರೋಪಿಗಳ ಬಂಧನ:
ಅಮಾನವೀಯವಾಗಿ ಹಲ್ಲೆ ಮಾಡಿರುವ ಕುರಿತು ಗಾಯಾಳುಗಳು ಬಬಲೇಶ್ವರ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಮುಖ ಆರೋಪಿ ಶಿವಲಾಲ ಪವಾರ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.-------------
ಕೋಟ್ಶಿವಲಾಲ್ ನೀಡಿದ್ದ ಹಣವನ್ನು ನಾವು ಅವರ ಎದುರಿನಲ್ಲಿಯೇ ಕಬ್ಬು ಕಟಾವು ಮಾಡುವ ಜೋಡಿಗಳಿಗೆ ಕೊಟ್ಟಿದ್ದೇವೆ. ಗ್ಯಾಂಗ್‌ನವರು ಪರಾರಿಯಾಗಿದ್ದರಿಂದ ನಮ್ಮನ್ನು ಹಿಡಿದು ಕಿರುಕುಳ ಕೊಡುತ್ತಿದ್ದಾರೆ. ನನಗೆ ಹಾಗೂ ನನ್ನ ಮಗನಿಗೆ ರಾತ್ರಿಯಿಡಿ ಟಾರ್ಚರ್ ನೀಡಿ ಹಲ್ಲೆ ಮಾಡಿದ್ದಾರೆ. ಈಗಲೂ ನಮಗೆ ಜೀವಭಯವಿದೆ.
- ರಾಜಕುಮಾರ ಲಮಾಣಿ, ಗಾಯಾಳುಕೋಟ್ಕಬ್ಬು ಕಟಾವು ಗ್ಯಾಂಗ್ ಪೂರೈಕೆಯಲ್ಲಿ ಹಣಕಾಸಿನ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆಯಾಗಿದೆ. ಈ ಕುರಿತು ಬಬಲೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಮ್ಮ ತಂಡ ಕಾರ್ಯಾಚರಣೆ ನಡೆಸಿ ಈಗಾಗಲೇ ಎ1 ಹಾಗೂ ಎ3 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು.
- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.