ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಶಾವ್ರಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಪೂಜೆಗೆ ಜಿಲ್ಲಾದ್ಯಂತ ಸಡಗರದ ಸಿದ್ಧತೆ ನಡೆದಿದೆ.ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಪೇಟೆಬೀದಿ, ವಿವಿ ರಸ್ತೆ, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನಜಂಗುಳಿ ತುಂಬಿತ್ತು. ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿತ್ತು. ಬಾಳೆದಿಂಡು, ಮಾವಿನಸೊಪ್ಪು, ತಾವರೆ ಹೂವುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರದಲ್ಲಿ ತೊಡಗಿದ್ದರು.
ಹಬ್ಬಕ್ಕಾಗಿ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಖರೀದಿಯಲ್ಲಿ ಮುಳುಗಿದ್ದರು. ಹೊಸದಾಗಿ ಮನೆಯಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪನೆ ಮಾಡುವವರು ಬೆಳ್ಳಿಯ ಮುಖವಾಡ ಖರೀದಿಸಿ ಅದಕ್ಕೆ ಅಲಂಕಾರ ಮಾಡಿಸಿಕೊಳ್ಳುತ್ತಿದ್ದರು.ಬಹುತೇಕ ಮನೆಗಳಲ್ಲಿ ಲಕ್ಷ್ಮೀ ಪ್ರತಿಷ್ಠಾಪನೆ ಮಾಡುವ ಜಾಗವನ್ನು ಸ್ವಚ್ಛವಾಗಿರಿಸಿ, ಲಕ್ಷ್ಮೀ ಕಲಶಕ್ಕೆ ಸೀರೆಯುಡಿಸಿ ಮುಖವಾಡವಿಟ್ಟು ಅಲಂಕರಿಸುವುದಕ್ಕೆ ಪೂರ್ವತಯಾರಿ ನಡೆಸಿದ್ದರು. ಲಕ್ಷ್ಮೀ ಪೂಜೆಗೆ ನೈವೇದ್ಯವಾಗಿ ಗೋಧಿ ಪಾಯಸ, ರವೆಉಂಡೆ, ಸಕ್ಕರೆ ಮಿಠಾಯಿ, ಹೋಳಿಗೆ ಇನ್ನಿತರ ತಿಂಡಿ-ತಿನಿಸುಗಳ ತಯಾರಿಕೆ ನಡೆದಿತ್ತು.
ಹಣ್ಣು ದುಬಾರಿ:ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹಣ್ಣಿನ ಬೆಲೆ ಏರಿಕೆಯಾಗಿತ್ತು. ಮಿಕ್ಸ್ ಹಣ್ಣು ಪ್ರತಿ ಕೆಜಿಗೆ-150 ರು., ಬಾಳೆಹಣ್ಣು-120 ರು., ಅನಾನಸ್-60 ರು., ಸೇಬು-260 ರು., ಮೂಸಂಬಿ-80 ರು., ಕಿತ್ತಳೆ-140 ರು., ದಾಳಿಂಬೆ-260 ರು., ಮರಸೇಬು-160 ರು., ಸೀಬೆ-60 ರು., ಕಪ್ಪು ದ್ರಾಕ್ಷಿ-180 ರು., ಬೆಲೆಯಲ್ಲಿ ಮಾರಾಟವಾಗುತ್ತಿತ್ತು.
ಗಗನಮುಖಿಯಾದ ಹೂ:ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಕನಕಾಂಬರ, ಮಲ್ಲಿಗೆ, ಕಾಕಡ, ಮರಳೆ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಹೊರೆಯಾಗಿದೆ. ಕಳೆದ ವಾರ ಮತ್ತು ಪ್ರಸ್ತುತ ಮಾರುಗಳಲ್ಲಿ ತೆಗೆದುಕೊಂಡರೆ ತುಳಸಿ 30 ರು.ನಿಂದ 50 ರು., ಹಳದಿ ಮತ್ತು ಕೆಂಪು ಚೆಂಡು ಹೂವು 50 ರು.ನಿಂದ 60 ರು., ಗಣಗಲೆ 80 ರು., ಕನಕಾಂಬರ 80ರು.ನಿಂದ 300 ರು., ಮರಳೆ 60 ರು.ನಿಂದ 300 ರು., ಮಲ್ಲಿಗೆ 80 ರು.ನಿಂದ 400 ರು., ಕಾಕಡ 40 ರು.ನಿಂದ 50 ರು., ಬಟನ್ಸ್ 50 ರು.ನಿಂದ 120 ರು., ಬಿಳಿ ಸೇವಂತಿಗೆ 60 ರು.ನಿಂದ 150 ರು., ಸೇವಂತಿಗೆ 60 ರು.120 ರು.ಗೆ ಮಾರಾಟವಾಗುತ್ತಿತ್ತು.
ಮಾವಿನಸೊಪ್ಪು ಜೊತೆ 40 ರು., ಬಾಳೆ ದಿಂಡು ಜೊತೆ 60 ರು. ಹಾಗೂ ತಾವರೆ ಹೂವು ಒಂದಕ್ಕೆ 50 ರು.ನಂತೆ ನಿಗದಿಪಡಿಸಲಾಗಿತ್ತು. ಬೆಲೆ ಹೆಚ್ಚಾದರೂ ವಿಧಿ ಇಲ್ಲದೆ ಗ್ರಾಹಕರು ಖರೀದಿಸುವಂತಾಗಿತ್ತು.