ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುವಿಪ್ರರು ಸರ್ವರಿಗೂ ಒಳಿತನ್ನು ಬಯಸುವ, ಸರ್ವೇ ಜನಾಃ ಸುಖಿನೋ ಭವಂತು ಎಂಬ ವಿಶಾಲ ಮನೋಭಾವದ ಸಮುದಾಯವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಅಧ್ಯಕ್ಷರೂ, ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹೈಕೋರ್ಟ್ ನ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು ಬಣ್ಣಿಸಿದರು. ಅವರು ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ತುಮಕೂರು ನಗರದ ಶೆಟ್ಟಿಹಳ್ಳಿ ರಿಂಗ್ ರಸ್ತೆಯ ಜಯನಗರ ದಕ್ಷಿಣ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಿಪ್ರ ವಿದ್ಯಾರ್ಥಿನಿಯರ ಹಾಗೂ ಉದ್ಯೋಗಸ್ಥ ಮಹಿಳಾ ವಸತಿ ನಿಲಯ ಕಟ್ಟಡ ದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ವಿಪ್ರ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ತಮ್ಮ ಸ್ವಯಂ ಪ್ರತಿಭೆಯಿಂದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜೊತೆಗೆ ಸ್ವಂತ ಉದ್ಯಮದಲ್ಲೂ ಯಶಸ್ವಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ತುಮಕೂರಿನಲ್ಲಿ ಹೊಯ್ಸಳ ಕರ್ನಾಟಕ ಸಂಘವು ಶಿಕ್ಷಣ ಹಾಗೂ ಉದ್ಯೋಗಕ್ಕೆ ಆಗಮಿಸುವ ವಿಪ್ರ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಸತಿ ನಿಲಯ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಕೆಲಸ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.ತುಮಕೂರು ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವಂತಹ ನಗರವಾಗಿದ್ದು, ಬೆಂಗಳೂರಿಗೆ ಹತ್ತಿರದಲ್ಲಿದೆ. ಇನ್ನೂ ಹೆಚ್ಚು ಪ್ರಗತಿಯಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಈ ವಿದ್ಯಾರ್ಥಿನಿಯರ ವಸತಿ ನಿಲಯದ ಉಪಯೋಗ ಇನ್ನೂ ಹೆಚ್ಚಿನ ರೀತಿಯಲ್ಲಿ ಸದ್ಬಳಕೆಯಾಗುತ್ತದೆ. ಅತ್ಯಂತ ಶೀಘ್ರವಾಗಿ ಇದನ್ನು ನಿರ್ಮಿಸಿದರೆ ಇದರಿಂದ ಅನೇಕರಿಗೆ ಅನುಕೂಲವಾಗುವ ಸಂಭವವಿದೆ ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಇಂದು ಎಲ್ಲ ಜಾತಿಗಳವರಿಗೆ ಸರ್ಕಾರದಿಂದ ವಿದ್ಯಾರ್ಥಿ ನಿಲಯ ಸ್ಥಾಪಿತವಾಗಿದೆ. ಆದರೆ ಸರ್ಕಾರಿಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಎಲ್ಲೂ ಹಾಸ್ಟೆಲ್ ಸೌಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಆರ್ಥಿಕವಾಗಿ ಸಬಲರಾಗಿರುವ ಬ್ರಾಹ್ಮಣರು ಸಮುದಾಯದ ಅಶಕ್ತರಿಗೆ ಸಹಾಯ ಮಾಡುವ ಅವಶ್ಯಕತೆಯಿದೆ. ಇಂದು ಬ್ರಾಹ್ಮಣ ಸಮುದಾಯದ ಬಗ್ಗೆ ಎಲ್ಲ ಪಕ್ಷಗಳಲ್ಲೂ ಅಸಡ್ಡೆಯ ಮನೋಭಾವ ಕಂಡುಬರುತ್ತಿದೆ. ಇದನ್ನು ಹೋಗಲಾಡಿಸಲು ವಿಪ್ರ ಸಮುದಾಯ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪ್ರಸ್ತುತ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಹಾಸ್ಟೆಲ್‌ನ ರೂಪುರೇಷೆಗಳನ್ನು ವಿವರಿಸಿದರು. ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಬೆಂಗಳೂರಿನ ಉದ್ಯಮಿ ಪುಷ್ಪಕ್ ಪ್ರಕಾಶ್, ಎಂ.ವಿ.ಸತ್ಯನಾರಾಯಣ, ತಿಪಟೂರಿನ ಸಂಘದ ಅಧ್ಯಕ್ಷ ರವಿಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿಪ್ರ ಮುಖಂಡರು ಉಪಸ್ಥಿತರಿದ್ದರು. ಭಾರತಿ ಶ್ರೀನಿವಾಸ್ ಪ್ರಾರ್ಥಿಸಿದರು. ಮಾಜಿ ಕಾರ್ಪೊರೇಟರ್ ಸಿ.ಎನ್.ರಮೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್.ರಾಮಮೂರ್ತಿ ಸಂಘದ ವರದಿ ವಾಚಿಸಿದರು. ಉಪಾಧ್ಯಕ್ಷ ಜಿ.ಪ್ರಾಣೇಶ್ ವಂದಿಸಿದರು. ಡಾ.ಹರೀಶ್ ಮತ್ತು ವಿಶ್ವಾಸ್ ಕಾರ್ಯಕ್ರಮ ನಿರೂಪಿಸಿದರು.