ಸಾರಾಂಶ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 18,66,397 ಮತದಾರರು
2045 ಮತಗಟ್ಟೆಗಳು, 4990 ಬಿಯು, 2657 ಸಿಯು, 2755 ವಿವಿಪ್ಯಾಟ್ ವ್ಯವಸ್ಥೆಜಿಲ್ಲಾ ಚುನಾವಣಾಧಿಕಾರಿ ಮಾಹಿತಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ 3ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಜರುಗಲಿದ್ದು, ಮೇ 6ರಂದು ಮಸ್ಟರಿಂಗ್ ಕಾರ್ಯ ಮತ್ತು ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 64-ಕೊಪ್ಪಳ, 58-ಸಿಂಧನೂರು, 59-ಮಸ್ಕಿ ಹಾಗೂ 92-ಸಿರಗುಪ್ಪ, ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 2045 ಮತಗಟ್ಟೆಗಳಿದ್ದು, ಅಂತಿಮ ಮತದಾರರ ಪಟ್ಟಿಯಂತೆ 9,19,499 ಪುರುಷ ಮತದಾರರು, 9,46,763 ಮಹಿಳಾ ಮತದಾರರು ಹಾಗೂ 135 ಇತರೆ ಮತದಾರರು ಸೇರಿದಂತೆ ಒಟ್ಟು 18,66,397 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದು, ಇದೇ ಮೊದಲ ಬಾರಿಗೆ ಮತಗಟ್ಟೆಯ ಸುತ್ತ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಆಯಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
8-ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2045 ಮತಗಟ್ಟೆಗಳಿದ್ದು, ಚುನಾವಣಾ ಕರ್ತವ್ಯಕ್ಕಾಗಿ 2435 ಪಿಆರ್‌ಒ, 2435 ಎಪಿಆರ್‌ಒ, 4869 ಪಿಒ ಹಾಗೂ 248 ಎಮ್‌ಒಗಳನ್ನು ನೇಮಕ ಮಾಡಲಾಗಿದೆ. ಮೇ 6ರಂದು ಮತದಾನ ಸಿಬ್ಬಂದಿ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳಿಗೆ ತೆರಳಲಿದ್ದಾರೆ.ಚುನಾವಣೆ ಸಂಬಂಧ 4990 ಬ್ಯಾಲೆಟ್ ಯುನಿಟ್‌ಗಳು, 2657 ಕಂಟ್ರೋಲ್ ಯುನಿಟ್‌ಗಳು ಹಾಗೂ 2755 ವಿವಿಪ್ಯಾಟ್‌ಗಳು ಸೇರಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ. ಮತದಾನ ಕರ್ತವ್ಯಕ್ಕಾಗಿ 271 ಕೆ.ಎಸ್.ಆರ್.ಟಿ.ಸಿ ಬಸ್‌ಗಳು, 115 ಕ್ರೂಸರ್‌ಗಳು ಹಾಗೂ 86 ಮಿನಿ ಬಸ್ ಹಾಗೂ ಇತರೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು 2045 ಮತಗಟ್ಟೆಗಳಿದ್ದು, ಅದರ ಪೈಕಿ 76 ಮತಗಟ್ಟೆ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ. 248 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. 1024 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನದ ಉದ್ದೇಶದಿಂದ ಮೇ 5ರ ಸಂಜೆ 6 ಗಂಟೆಯಿಂದ ಮೇ 7 ರ ರಾತ್ರಿ 12 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಶುಷ್ಕ ದಿನಗಳೆಂದು ಘೋಷಣೆ ಮಾಡಲಾಗಿದೆ. ಅದರೊಂದಿಗೆ ಮೇ 5 ರ ಸಾಯಂಕಾಲ 6 ಗಂಟೆಯಿಂದ ಮೇ 8ರ ಬೆಳಗ್ಗೆ 6 ಗಂಟೆಯವರೆಗೆ ಭಾರತ ದಂಡ ಪ್ರಕ್ರಿಯೆ ಸಂಹಿತೆ ಕಲಂ 144ರ ಅಡಿಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಚುನಾವಣಾ ಶಾಖೆಯ ನಾಗರಾಜ, ಶಿವು, ಪ್ರಸನ್ನ ಸೇರಿದಂತೆ ಇತರರಿದ್ದರು.ಇಂದು ಬಹಿರಂಗ ಪ್ರಚಾರ ಅಂತ್ಯ:
ಮತದಾನದ 48 ಗಂಟೆ ಪೂರ್ವದಲ್ಲಿ ಮೇ 5 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ಅಭ್ಯರ್ಥಿಗಳು ಗರಿಷ್ಠ 5 ಜನ ಮೀರದಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದೆ.1 ಕೋಟಿ ಜಪ್ತಿ, 69 ಲಕ್ಷ ವಾಪಸ್ಸು:
ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ₹1,02,42,500 ವನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಂತರ ₹69,00,000 ವಾಪಸ್ ಮಾಡಲಾಗಿದೆ. ಅಬಕಾರಿ ಇಲಾಖೆಯಿಂದ ₹2,44,91,000 ಮೌಲ್ಯದ 60742.42 ಲೀ. ಗಳ ಮದ್ಯ ಜಪ್ತಿ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ ₹1,68,000 ಮೌಲ್ಯದ 370.98 ಲೀ. ಗಳ ಮದ್ಯ ಜಪ್ತಿ ಮಾಡಲಾಗಿದೆ. ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ತಂಡಗಳಿಂದ 6 ಪ್ರಕರಣಗಳು ಮತ್ತು ಪೊಲೀಸ್ ಇಲಾಖೆಯಿಂದ 44 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.ಸ್ವೀಕೃತವಾದ ದೂರುಗಳ ವಿವರ:
ಲೋಕಸಭಾ ಚುನಾವಣೆ ಸಂಬಂಧವಾಗಿ 1950 ಟೋಲ್‌ಫ್ರೀ ಜಿಲ್ಲಾ ಸಂಪರ್ಕ ಕೇಂದ್ರದ ಮೂಲಕ 431 ಕರೆಗಳು ಸ್ವೀಕೃತವಾಗಿವೆ. ಸಿ-ವಿಜಿಲ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತ 124 ದೂರು ಸ್ವೀಕೃತವಾಗಿವೆ. 1950 ಮೂಲಕ ಮತದಾರರು ಯಾವುದೇ ರೀತಿಯ ದೂರು ಅಥವಾ ಮಾಹಿತಿ ಇದ್ದಲ್ಲಿ ಕರೆ ಮಾಡಿ ಮಾಹಿತಿ ನೀಡಬಹುದು. ಸಿ-ವಿಜಿಲ್ ಆ್ಯಪ್ ಮೂಲಕ ಮತದಾರರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಮತದಾನ ಜಾಗೃತಿಗೆ ಹಲವು ಕಾರ್ಯಕ್ರಮ:
ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳ ಮಾಡಲು ಹತ್ತು ಹಲವು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಜಾಗೃತಿ ಮೂಡಿಸಲಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ರಾಹುಲ್ ರತ್ನಂ ಪಾಡೆಯ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಶೇ.81ಕ್ಕೂ ಹೆಚ್ಚು ಮತದಾನ ಗುರಿ ಹೊಂದಿದ್ದು, ಇದರ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಡಿಮೆ ಮತದಾನ ದಾಖಲಾದ 610 ಮತಗಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ, ಮಹಿಳಾ ಮತದಾರರ ಮತದಾನ ಪ್ರತಿಶತ ಹೆಚ್ಚಿಸಲು ಅಂಗನವಾಡಿ, ಆಶಾ ಕಾರ್ಯಕರ್ತರು ಮತ್ತು ಮಹಿಳಾ ಬಿಇಡಿ ಕಾಲೇಜು ವಿದ್ಯಾರ್ಥಿನಿಯರಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವಾಕ್‌ಥಾನ್ ಜಾಗೃತಿ ಕಾರ್ಯಕ್ರಮ, ವಿಶೇಷಚೇತನರಿಂದ ನೈತಿಕ ಹಾಗೂ ಕಡ್ಡಾಯ ಮತದಾನದ ಕುರಿತು ಬೈಕ್ ರ್‍ಯಾಲಿ ಮೂಲಕ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ ಇಲ್ಲಿಯವರೆಗೆ 7 ರಿಂದ 8 ಲಕ್ಷ ಮಹಿಳಾ ಮತದಾರರಿಗೆ, ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಯುವ ಮತದಾರರಿಗೆ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರಿಗೆ ನೈತಿಕ ಹಾಗೂ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಆಕರ್ಷಿಸಲು 25 ಸಖಿ ಮತಗಟ್ಟೆ, 05-ವಿಶೇಷ ಚೇತನ ಮತಗಟ್ಟೆ, 05-ಯುವ ಮತದಾರರ ಮತಗಟ್ಟೆ, 05-ಮಾದರಿ ಮತಗಟ್ಟೆ ಹೀಗೆ 40 ಚಿತ್ತಾಕರ್ಷಕ ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಆತಂಕ ಬಿಟ್ಟಾಕಿ, ಮತದಾನ ಮಾಡಿ: ಎಸ್ಪಿ; ಚುನಾವಣೆ ಹಿನ್ನೆಲೆ ಈಗಾಗಲೇ ಅಗತ್ಯ ಭದ್ರತಾ ಕ್ರಮ ವಹಿಸಲಾಗಿದ್ದು, ಮತದಾರರು ಯಾವುದೇ ಅಳುಕಿಲ್ಲದೆ ಆತಂಕ ಬಿಟ್ಟಾಗಿ, ಮತದಾನ ಮಾಡಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಮನವಿ ಮಾಡಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7ರಂದು ಮತದಾನ ನಡೆಯಲಿದ್ದು, ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ 1317 ಮತಗಟ್ಟೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಬ್ಬ ಡಿಎಸ್‌ಪಿಯಂತೆ ಜಿಲ್ಲೆಗೆ 17 ಸಿಪಿಐ, 55 ಪಿಎಸ್‌ಐ, 67 ಎಎಸ್‌ಐ, 1387 ಪೇದೆ, ಮುಖ್ಯ ಪೇದೆ, 7 ಫಾರೆಸ್ಟ್ ಗಾರ್ಡ್ ಹಾಗೂ 750 ಹೋಮ್ ಗಾರ್ಡ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸೆಕ್ಟರ್ ಮೊಬೈಲ್ ಡ್ಯೂಟಿ ಅಧಿಕಾರಿಗಳನ್ನಾಗಿ 91 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ನಾಗಾಲ್ಯಾಂಡ್‌ನ ವಿಶೇಷ ಭದ್ರತಾ ಸಿಬ್ಬಂದಿ ಹಾಗೂ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಾದ್ಯಂತ ಅಬಕಾರಿ ಇಲಾಖೆಯಿಂದ 44 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ₹ 1,67,585.92 ಮೌಲ್ಯದ 370.98 ಲೀ. ಮದ್ಯ ವಶ ಪಡಿಸಿಕೊಳ್ಳಲಾಗಿದೆ. ₹1,06,92,500 ಜಪ್ತಿ ಮಾಡಲಾಗಿದೆ. ₹1,08,60,085.92 ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.