ಶಿರಸಿ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ಧತೆ

| Published : Mar 19 2024, 12:50 AM IST

ಸಾರಾಂಶ

ರಥೋತ್ಸವಕ್ಕಾಗಿ ದೇವಸ್ಥಾನದ ಎದುರು ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಶಿರಸಿ: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಮಾ. 19ರಿಂದ ಮಾ. 27ರಿಂದ 9 ದಿನಗಳ ಕಾಲ ಉತ್ಸವ ನಡೆಯಲಿದೆ.

ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ಜಾತ್ರಾ ಗದ್ದುಗೆಯಲ್ಲಿ ದರ್ಶನಕ್ಕೆ, ಹರಕೆ ಪೂಜೆ ಸಲ್ಲಿಕೆಗೆ ಕಾತರರಾಗಿದ್ದರೆ, ಶ್ರೀದೇವಿಯ ಭಕ್ತರಿಗೆ ಸೇವೆ ಸಲ್ಲಿಸಲು, ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ, ಬಾಬದಾರರ ಕುಟುಂಬಗಳು ಹಾಗೂ ತಾಲೂಕು ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ.

ಬಣ್ಣ ಹಾಗೂ ಕಾವಿಯ ಕಲೆಯ ಸಾಂಪ್ರದಾಯಿಕ ಚಿತ್ರಗಳಿಂದ ಕಂಗೊಳಿಸುತ್ತಿರುವ ದೇವಸ್ಥಾನದ ಸಭಾ ಮಂಟಪದಲ್ಲಿ ಮಾರಿಕಾಂಬಾ ದೇವಿಯನ್ನು ಅಚ್ಚುಕಟ್ಟಾಗಿ ಮೂರುವರೆ ಶತಮಾನಗಳಿಂದ ನಡೆದುಬಂದ ಸಂಪ್ರದಾಯದಂತೆ ಗ್ರಾಮದೇವಿಯರಾದ ಮಾರಿಕಾಂಬೆಯ ಸಹೋದರಿಯರೆಂದು ಕರೆಯಲಾಗುವ ಶ್ರೀ ಮರ್ಕಿ-ಶ್ರೀದುರ್ಗಿಯರ ಜತೆ ಜಾತ್ರಾ ಕಲ್ಯಾಣ ಪ್ರತಿಷ್ಠೆಗಾಗಿ ಸಿದ್ಧಗೊಳಿಸುತ್ತಿದ್ದರೆ, ಮಂಗಳವಾರ ಮಧ್ಯರಾತ್ರಿಯ ಹೊತ್ತಿಗಿನ ನಿಗದಿತ ಮುಹೂರ್ತದಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳ ಪಾಲ್ಗೊಳ್ಳುವಿಕೆಗೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಜಾತ್ರಾ ಕಲ್ಯಾಣ ಪ್ರತಿಷ್ಠೆಯ ನಂತರ ಜಾತ್ರಾ ಗದ್ದುಗೆಗೆ ಶ್ರೀದೇವಿ ತೆರಳುವ ರಥೋತ್ಸವಕ್ಕಾಗಿ ದೇವಸ್ಥಾನದ ಎದುರು ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಥದ ಕಲಶ ಕಂಬದ ಸ್ಥಾಪನೆ, ಅಟ್ಟಣಿಗೆ ನಿರ್ಮಾಣ ಪೂರ್ಣಗೊಂಡಿದ್ದು, ಮಂಗಳವಾರ ಮಧ್ಯಾಹ್ನ ೧೨.೨೭ರಿಂದ ೧೨.೩೬ ಒಳಗಿನ ಶುಭ ಮುಹೂರ್ತದಲ್ಲಿ ರಥದ ಕಲಶ ಪ್ರತಿಷ್ಠೆ ನಡೆಯಲಿದೆ. ನಂತರ ಪತಾಕೆ ಜೋಡಣೆ ನಡೆಸಿ, ರಥವನ್ನು ಶ್ರೀದೇವಿಯ ರಥಾರೋಹಣ ಹಾಗೂ ರಥೋತ್ಸವದ ಶೋಭಾಯಾತ್ರೆಗೆ ಸಜ್ಜುಗೊಳಿಸಲಾಗುತ್ತದೆ.

ಅನ್ನಪ್ರಸಾದದ ವ್ಯವಸ್ಥೆಯನ್ನು, ಜಾತ್ರಾ ಮಂಟಪದಲ್ಲಿ ಶ್ರೀದೇವಿಯ ಸಿಹಿ ಪ್ರಸಾದ, ಕುಂಕುಮ ಪ್ರಸಾದದ ತಯಾರಿಯೂ ಭರದಿಂದ ಸಾಗಿದೆ.

ನಗರದ ಹೃದಯ ಭಾಗದಲ್ಲಿರುವ ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ದರ್ಶನಕ್ಕೆ ಸಾಗಲು ಭಕ್ತರಿಗೆ ಸರತಿ ಸಾಲಿಗಾಗಿ ಕಬ್ಬಿಣದ ಗ್ರಿಲ್‌ಗಳು, ಹಣ್ಣು ಕಾಯಿ ಸೇವೆಗಾಗಿ ವಿಶಾಲ ಜಾಗದಲ್ಲಿ ಹಣ್ಣು ಕಾಯಿ ಒಡೆಯುವ ಸೌಲಭ್ಯ, ಉಡಿ, ಸೀರೆ ಸೇವೆ ಹಾಗೂ ಇತರ ಸೇವೆಗಳ ಪಾವತಿ ಮತ್ತು ವಸ್ತುಗಳ ಪೂರೈಕೆಗಾಗಿ ಸೇವಾ ಕೌಂಟರ್‌ಗಳು, ಜಾತ್ರಾ ಮಂಟಪದಲ್ಲಿ ಆಡಳಿತ ಮಂಡಳಿಯ ಕಾರ್ಯಾಲಯ, ಭಕ್ತರ, ಜಾತ್ರೆಯ ಸುರಕ್ಷತೆಗಾಗಿ ಪೊಲೀಸ್ ಚೌಕಿಗಳ ನಿರ್ಮಿಸಿದ್ದು, ಜಾತ್ರಾ ಚಪ್ಪರದಲ್ಲಿ ಶ್ರೀದೇವಿಯ ಪ್ರತಿಷ್ಠೆಯ ಪೂರ್ವದ ಅಂತಿಮ ಹಂತದ ನಿರ್ಮಾಣಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.