ಕಾಯಕ ಯೋಗಿ, ತ್ರಿವಿಧ ದಾಸೋಹಿ ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ.
ಕನ್ನಡಪ್ರಭ ವಾರ್ತೆ, ತುಮಕೂರುಕಾಯಕ ಯೋಗಿ, ತ್ರಿವಿಧ ದಾಸೋಹಿ ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ.ಭಕ್ತವೃಂದ ಶ್ರೀಗಳ 119ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕಳೆದ 4-5 ದಿನಗಳಿಂದ ಶ್ರೀಕ್ಷೇತ್ರದಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳು ಸಂಪೂರ್ಣಗೊಂಡಿವೆ. ಶ್ರೀಮಠದಲ್ಲಿ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಗೂ ಅತ್ಯಂತ ವೈಭವೋಪೇತವಾಗಿ ಆಚರಿಸಲು ಭಕ್ತವೃಂದ ಸರ್ವ ಸನ್ನದ್ಧವಾಗಿದೆ. ಶ್ರೀಗಳು ಲಿಂಗೈಕ್ಯರಾಗಿರುವ ಗದ್ದುಗೆ ಮಂದಿರದಲ್ಲಿ ಗದ್ದುಗೆ ದರ್ಶನ ಮಾಡಲು ಬರುವ ಭಕ್ತಾದಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಶ್ರೀಗಳ ಗದ್ದುಗೆ ಹಾಗೂ ಮಂದಿರವನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗುತ್ತಿದೆ.
ತಪಾಸಣೆ...ರಾಷ್ಟ್ರಪತಿಗಳು ಶ್ರೀಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ದೃಷ್ಠಿಯಿಂದ ಇಂದು ಕೇಂದ್ರ ಪಡೆಯಿಂದ ತೀವ್ರ ತಪಾಸಣೆ ನಡೆಸಲಾಯಿತು.
-----------------ಬಾಕ್ಸ್...
6 ಕಡೆ ದಾಸೋಹ ವ್ಯವಸ್ಥೆಏ. 1 ರಂದು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರಿಗಾಗಿ ಬೆಳಿಗ್ಗೆ, ಮಧ್ಯಾಹ್ನದ ಹಾಗೂ ರಾತ್ರಿ ವರೆಗೂ ಮಹಾ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಶ್ರೀಕ್ಷೇತ್ರದ ಆವರಣದಲ್ಲಿ 6 ಕಡೆಗಳಲ್ಲಿ ನಿರ್ಮಿಸಲ್ಪಡುವ ಪ್ರಸಾದ ನಿಲಯಗಳಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆಗೂ ಭರದ ಸಿದ್ಧತೆ ನಡೆದಿದೆ. ಭಕ್ತಾದಿಗಳು ಪ್ರಸಾದ ಸೇವಿಸಲು ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ದಾಸೋಹ ನಡೆಯಲಿದೆ. ಶ್ರೀಮಠದ ಪ್ರಾರ್ಥನಾ ಮಂದಿರ, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಮಂಟಪ, ಲಿಂಗಾಯತರ ಕೊಪ್ಪಲು, ಸಾದರ ಕೊಪ್ಪಲು, ಮಠದ ಸಮುದಾಯದ ಭವನ, ಅತಿಥಿ ಗೃಹಗಳು ಸೇರಿದಂತೆ ಸುಮಾರು 6 ಕಡೆ ದಾಸೋಹಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಕಳೆದ 4-5 ದಿನಗಳ ನೂರಾರು ಬಾಣಸಿಗರು ಸಿಹಿ ಬೂಂದಿ ಸೇರಿದಂತೆ ಸಿಹಿ ಖಾದ್ಯ ಹಾಗೂ ಬಗೆ ಬಗೆಯ ಖಾದ್ಯಗಳ ತಯಾರಿಯಲ್ಲಿ ತೊಡಗಿದ್ದಾರೆ. ಏ. 1 ರಂದು ಉಪ್ಪಿನಕಾಯಿ, ಕೋಸಂಬರಿ, ಪಾಯಸ, ಬೂಂದಿ, ಚಿತ್ರಾನ್ನ, ಮಜ್ಜಿಗೆ ಅನ್ನ, ಅನ್ನ ಸಾಂಬರ್, ಕೇಸರಿ ಬಾತ್, ಖಾರಾಬಾತ್, ಖಾರಾಬೂಂದಿ ಸೇರಿದಂತೆ ವಿಶೇಷ ದಾಸೋಹ ವ್ಯವಸ್ಥೆ ಸಹ ಇರಲಿದೆ ಎಂದು ಶ್ರೀಮಠದ ಮೂಲಗಳು ಹೇಳಿವೆ.