ಹನುಮಮಾಲಾ ವಿಸರ್ಜನೆಗೆ ಸಕಲ ಸಿದ್ಧತೆ

| Published : Dec 20 2023, 01:15 AM IST

ಸಾರಾಂಶ

ಅಂಜನಾದ್ರಿ ಅಭಿವೃದ್ಧಿಗೆ ₹21 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧ, ಹಿಂದಿನ ಬಿಜೆಪಿ ಸರ್ಕಾರ ₹100 ಕೋಟಿ ಘೋಷಣೆ ಮಾಡಿತ್ತು. ಆದರೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ನಮ್ಮ ಸರ್ಕಾರ ₹21 ಕೋಟಿ ನೀಡಿದೆ

ಕನ್ನಡಪ್ರಭವಾರ್ತೆ ಗಂಗಾವತಿ

ಅಂಜನಾದ್ರಿ ಹನುಮಮಾಲಾ ವಿಸರ್ಜನೆಗೆ ಬರುವ ಭಕ್ತರಿಗೆ ಮೂಲಭೂಲ ಸೌಕರ್ಯ ಕಲ್ಪಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ನಡೆಯುವ ಹನುಮಮಾಲಾ ವಿಸರ್ಜನೆಯ ರೂಪರೇಷಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು, ಇಲ್ಲಿ ಬರುವ ಭಕ್ತರಿಗೆ ಸೌಲಭ್ಯ ಒದಗಿಸಲು ₹40 ಲಕ್ಷ ದೇವಸ್ಥಾನ ಸಮಿತಿಯಿಂದ ನೀಡಲು ಅನುಮತಿ ನೀಡಲಾಗಿದೆ. ಹೆಚ್ಚಿನ ಹಣ ಬೇಕಾದರೂ ಮುಜರಾಯಿ ಇಲಾಖೆಯಿಂದ ನೀಡಲಾಗುತ್ತದೆ ಎಂದರು.

ಅಂಜನಾದ್ರಿ ಅಭಿವೃದ್ಧಿಗೆ ₹21 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧ, ಹಿಂದಿನ ಬಿಜೆಪಿ ಸರ್ಕಾರ ₹100 ಕೋಟಿ ಘೋಷಣೆ ಮಾಡಿತ್ತು. ಆದರೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ನಮ್ಮ ಸರ್ಕಾರ ₹21 ಕೋಟಿ ನೀಡಿದೆ ಎಂದರು.

ಬಿಜೆಪಿಯವರು ಹಿಂದು ರಾಷ್ಟ್ರ ಮಾಡಲು ಹೊರಟರೆ ಕಾಂಗ್ರೆಸ್‌ ಬಿಡುವದಿಲ್ಲ, ಭಾರತ ಜಾತ್ಯಾತೀತ ರಾಷ್ಟ್ರ ಎಂದ ಅವರು, ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಹೊರೆಯಾಗಿದ್ದರೂ ಸಮರ್ಥವಾಗಿ ಯೋಜನೆ ಜಾರಿಗೆ ತಂದಿದ್ದೇವೆ. ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ, ಕೂಡಲೆ 13888 ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮುಜರಾಯಿ ಇಲಾಖೆಯ ಆಯುಕ್ತ ರಾಜೇಂದ್ರ ಇದ್ದರು.