ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಏ.26ರಂದು ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ವಿಶ್ವನಾಥ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಲೋಪದೋಷಗಳು ಇಲ್ಲದಂತೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಸಾರ್ವಜಿನಿಕರು ಏ.26ರಂದು ನಿರ್ಭೀತಿಯಿಂದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತಚಲಾಯಿಸಬೇಕು ಎಂದು ಮನವಿ ಮಾಡಿದರು.
ಮಹಿಳಾ ಮತದಾರರು ಅಧಿಕ:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,28,768 ಮತದಾರರಿದ್ದು, ಇದರಲ್ಲಿ 1,10,422 ಪುರುಷ ಮತದಾರರು, 1,18,338 ಮಹಿಳಾ ಮತದಾರರು ಹಾಗೂ ಇತರ ಮತದಾರರ ಸಂಖ್ಯೆ 8 ಇದೆ. ತಾಲೂಕಿನಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ.
271 ಮತಗಟ್ಟೆ, 4 ಚೆಕ್ ಪೋಸ್ಟ್:ಚನ್ನಪಟ್ಟಣ ವಿಧಾನಸಭಾ ವ್ಯಾಪ್ತಿಯಲ್ಲಿ ಒಟ್ಟು 271 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 212 ಮತಗಟ್ಟೆ ಹಾಗೂ ನಗರ ಪ್ರದೇಶದಲ್ಲಿ 59 ಮತಗಟ್ಟೆ ಇರಲಿದೆ. ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಒಟ್ಟು ನಾಲ್ಕು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ತಾಲೂಕಿನ ಮಳೂರು ಹೋಬಳಿಯ ಕೋಲೂರು, ಮಾಕಳಿ, ಕುಂಬಾರಕಟ್ಟೆ ಹಾಗೂ ವಿರುಪಾಕ್ಷಿಪುರ ಹೋಬಳಿಯ ಜಗದಾಪುರ ಬಳಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ತಂಡಗಳ ರಚನೆ:ಇನ್ನು ಚುನಾವಣಾ ಅಕ್ರಮ ತಡೆಯಲು ಹಾಗೂ ಮಾದರಿ ನೀತಿ ಸಂಹಿತೆ ಪರಿಶೀಲಿಸಲು 22 ಸೆಕ್ಟರ್ ಅಧಿಕಾರಿಗಳು, 9 ಎಫ್‌ಎಸ್‌ಟಿ ತಂಡ, 4 ಚೆಕ್ ಪೋಸ್ಟ್‌ಗಳಲ್ಲಿ 12 ತಂಡಗಳು, 3 ವಿಎಸ್‌ಟಿ ತಂಡ, 2 ವಿವಿಟಿ ತಂಡಗಳನ್ನು ರಚಿಸಿ ನಿಯೋಜಿಸಲಾಗಿದೆ ಎಂದರು.
ನೋಡೆಲ್ ಅಧಿಕಾರಿಗಳ ನೇಮಕ:ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮಾಂತರ ವಿಭಾಗಕ್ಕೆ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಇಒ ಮನು, ನಗರ ವಿಭಾಗಕ್ಕೆ ಪೌರಾಯುಕ್ತ ಪುಟ್ಟಸ್ವಾಮಿ, ಪೊಲೀಸ್ ನೋಡೆಲ್ ಅಧಿಕಾರಿಯಾಗಿ ಆರಕ್ಷಕ ನಿರೀಕ್ಷಕ ಮುತ್ತುರಾಜ್, ಅಬಕಾರಿ ನೋಡೆಲ್ ಅಧಿಕಾರಿಯಾಗಿ ಉಮೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಕಂಟ್ರೋಲ್ ರೂಂ ಸ್ಥಾಪನೆ:ಸಾರ್ವಜನಿಕರಿಗೆ ಅನೂಕಲ ಕಲ್ಪಿಸಲು ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದೆ. ಮದುವೆ, ಹಬ್ಬ ಮತ್ತಿತರ ಸಮಾರಂಭಗಳಿಗೆ ಅನುಮತಿ ಪಡೆಯಲು ಅನಕೂಲ ಕಲ್ಪಿಸಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಟ್ರೋಲ್ ರೂಂಗೆ ಕರೆ ಮಾಡಿ ಅಥವಾ ಚುನಾವಣಾ ಆಯೋಗದ ಸಿವಿಜಿಲ್ ಆಪ್ ಮೂಲಕ ಸಾರ್ವಜನಿಕರು ಚುನಾವಣೆ ಅಕ್ರಮಗಳ ಕುರಿತು ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಈ ಬಾರಿ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಸಂಖ್ಯೆ 1650 ಇದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಅವರ ಮನೆಗೆ ತೆರಳಿ ಮತ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ಪೌರಾಯುಕ್ತ ಪುಟ್ಟಸ್ವಾಮಿ, ಆರಕ್ಷಕ ನಿರೀಕ್ಷಕ ಮುತ್ತುರಾಜ್, ಅಬಕಾರಿ ಇಲಾಖೆಯ ಉಮೇಶ್, ಹರೀಶ್ ಸೇರಿದಂತೆ ಹಲವರು ಇದ್ದರು.