ಗುಳೇದಗುಡ್ಡ ತಾಲೂಕಿನ ಹಂಸನೂರ ಗ್ರಾಮದ ಶಿವಾನಂದ ಮಠದಲ್ಲಿ ಶನಿವಾರ ಜರುಗಿದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಭಿನವ ಬಸವರಾಜೇಂದ್ರ ಶ್ರೀಗಳು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಾಮೂಹಿಕ ಶ್ರಮದಾನದಿಂದ ಮತ್ತು ಸಾಮಾಜಿಕವಾಗಿ ಹೊಂದಾಣಿಕೆಯಿಂದ ನಾಯಕತ್ವ ಗುಣಗಳು ಬರುತ್ತವೆ. ಶಿಬಿರದಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಶಿವಾನಂದ ಮಠದ ಅಭಿನವ ಬಸವರಾಜೇಂದ್ರ ಶ್ರೀಗಳು ಹೇಳಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದ ಆಶ್ರಯದಲ್ಲಿ ತಾಲೂಕಿನ ಹಂಸನೂರ ಗ್ರಾಮದ ಶಿವಾನಂದ ಮಠದಲ್ಲಿ ಶನಿವಾರ ಜರುಗಿದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ರಸ್ತೆ, ಗುಡಿ ಗುಂಡಾರಗಳ ಆವರಣ ಸ್ವಚ್ಛಗೊಳಿಸುವುದು, ಜಾಗೃತಿ ಮೂಢಿಸುವುದು ಸೇರಿ ಜನರಲ್ಲಿ ಸೇವಾ ಮನೋಭಾವ, ಸಹಕಾರ, ಒಗ್ಗಟ್ಟು ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸುವ ಕಾರ್ಯ ಮಾಡಿದ್ದು ಪ್ರಶಂಸನೀಯವಾಗಿದೆ ಎಂದರು.
ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದ ಮೂಲಕ ಪರಿಸರ ಪ್ರಜ್ಞೆ, ನಾಯಕತ್ವ ಗುಣ, ಮಾನವೀಯ ಮೌಲ್ಯ, ನಾಗರಿಕ ಪ್ರಜ್ಞೆ, ರಾಷ್ಟ್ರೀಯ ಭಾವೈಕ್ಯತೆಯ ಅರಿವು ಮೂಢಿಸಿ ಗ್ರಾಮದಲ್ಲಿ ಅಕ್ಷರ ಪ್ರಜ್ಷೆಯ ಅರಿವು ಮೂಢಿಸುವ ಮೂಲಕ ಶಿಬಿರ ಮಹತ್ವದ್ದಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಎಸ್. ಘಂಟಿ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ಮೂರು ದಿನಗಳ ಕಾಲ ನಾಗರಿಕರ ಕರ್ತವ್ಯಗಳನ್ನು ತಿಳಿದುಕೊಂಡು ಶಿಕ್ಷಕರಾಗುವ ನೀವು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉದಾತ್ತ ಚಿಂತನೆಯ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಸುರೇಶ ಚಿಮ್ಮಲ, ಲಕ್ಷ್ಮೀ ನವೀನ ಕಮಲ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶಿಬಿರ ಕಾರ್ಯದರ್ಶಿ ಜಯಶ್ರೀ ಲಮಾಣಿ ವರದಿ ವಾಚನ ಮಾಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವಿತರಿಸಲಾಯಿತು. ಶಿವಾನಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಸೇರಿ ಮಕ್ಕಳ ದಿನ ಆಚರಿಸಲಾಯಿತು. ಮಕ್ಕಳಿಗೆ ಪುಸ್ತಕ, ಪೆನ್ನು ವಿತರಿಸಿ ಸಿಹಿ ಹಂಚಲಾಯಿತು.ಶಿಬಿರದ ಸಂಯೋಜಕಿ ಇಂದುಮತಿ ಬೋರಣ್ಣವರ, ಕಾರ್ಯದರ್ಶಿ ಜಯಶ್ರೀ ಲಮಾಣಿ ಹಾಗೂ ಶಿಬಿರಾರ್ಥಿಗಳಿದ್ದರು.