ಸ್ವಾತಂತ್ರ್ಯ ನಂತರದಲ್ಲಿ ಇಂಡಿ ನಗರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು ಇರಲಿಲ್ಲ. ನಾನು ಶಾಸಕನಾದ ಮೇಲೆ ನಗರಕ್ಕೆ ಸರ್ಕಾರಿ ಪಿಯು ಕಾಲೇಜು, ಜಿಟಿಟಿಸಿ ಕಾಲೇಜು, ಕಾರ್ಮಿಕ ಮಕ್ಕಳ ವಸತಿ ಶಾಲೆ ಸೇರಿದಂತೆ ಪಿಯು ಕಾಲೇಜು, ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸುವುದರ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಸ್ವಾತಂತ್ರ್ಯ ನಂತರದಲ್ಲಿ ಇಂಡಿ ನಗರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು ಇರಲಿಲ್ಲ. ನಾನು ಶಾಸಕನಾದ ಮೇಲೆ ನಗರಕ್ಕೆ ಸರ್ಕಾರಿ ಪಿಯು ಕಾಲೇಜು, ಜಿಟಿಟಿಸಿ ಕಾಲೇಜು, ಕಾರ್ಮಿಕ ಮಕ್ಕಳ ವಸತಿ ಶಾಲೆ ಸೇರಿದಂತೆ ಪಿಯು ಕಾಲೇಜು, ಪ್ರೌಢ ಶಾಲೆಗಳನ್ನು ಮಂಜೂರು ಮಾಡಿಸುವುದರ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ನೂತನ ಪಿಯು ಕಾಲೇಜು ಉದ್ಘಾಟನೆ ಸಮಾರಂಭ ಹಾಗೂ ₹ 2.64 ಕೋಟಿ ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಿಕ್ಷಣದಿಂದ ಉತ್ತಮ ಸಂಸ್ಕಾರ ಬೆಳೆಯುತ್ತದೆ ಎಂಬ ಚಿಂತನೆಯಿಂದ ಬಂಥನಾಳ, ತುಮಕೂರು, ಸುತ್ತೂರು ಸೇರಿದಂತೆ ನಾಡಿನ ಮಠ ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿ ಮಾಡಿದ್ದಾರೆ. ಶಿಕ್ಷಣದಿಂದ ಸರ್ವತೋಮುಖ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿಗೆ ಮೊದಲ ಆದ್ಯತೆ ನೀಡಲಾಗಿದೆ. ಪಾಲಕರು ಹೆಣ್ಣುಮಕ್ಕಳು ಎಲ್ಲಿಯವರೆಗೆ ಶಿಕ್ಷಣ ಕಲಿಯುತ್ತಾರೆಯೊ ಅಲ್ಲಿಯವರೆಗೆ ಅವರಿಗೆ ಶಿಕ್ಷಣ ನೀಡಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳು ಜಾರಿಗೆ ತಂದಿದೆ. ಅಪರಾಧ ಪ್ರಕರಣ ತಡೆಯಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ಹೇಳಿದರು.ಆಲಮಟ್ಟಿ ಅಣೆಕಟ್ಟಿನಲ್ಲಿ ಕೇವಲ 34 ಟಿಎಂಸಿ ನೀರು ಮಾತ್ರ ಇದೆ. ಇಂದಿನಿಂದ ಬೇಸಿಗೆ ಜೂನ್ ವರೆಗೆ 6 ಜಿಲ್ಲೆಗಳಿಗೆ ನೀರು ಒದಗಿಸಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರು ನೀರು ಮಿತವಾಗಿ ಬಳಕೆ ಮಾಡಬೇಕು, ಕಾಲುವೆಗಳಿಗೆ ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಇಂಡಿ ಶಾಖಾ ಕಾಲುವೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ 18, 19 ಮತ್ತು 20 ನೇ ಡಿಸ್ಟ್ರುಬ್ಯುಟರ್ಗಳಿಗೆ ನೀರು ಹೋಗುತ್ತಿಲ್ಲ. ಹಿಂದಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿದ ತಪ್ಪಿನಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾಲುವೆ ಮೂಲಕ ಬಳಗಾನೂರ ಕೆರೆಗೆ ನೀರು ತುಂಬಿಸಿ ಅಲ್ಲಿಂದ ಇಂಡಿ, ಚಡಚಣ ಭಾಗದ ಗ್ರಾಮಗಳ ಕಾಲುವೆಯ ಕೊನೆಯ ಹಂತಕ್ಕೆ ನೀರು ಹೇಗೆ ಹರಿಯಲು ಸಾಧ್ಯ. ನಾರಾಯಣಪೂರದಿಂದ ನೇರವಾಗಿ ಕಾಲುವೆ ಮೂಲಕ ನೀರು ಹರಿಸಿದರೆ ಮಾತ್ರ ಕಾಲುವೆಯ ಕೊನೆ ಹಂತದವರೆಗೆ ನೀರು ಹರಿಯಲು ಸಾಧ್ಯ. ಹಿಂದೆ ಮಾಡಿದ ತಪ್ಪಿನಿಂದ ಇಂದು ರೈತರು ತೊಂದರೆ ಅನುಭವಿಸುವಂತಾಗಿದೆ. ಭೀಮಾ ನದಿಯಲ್ಲಿ ಲೂಟಿ ಮಾಡಿ ಅನೈತಿಕ ರಾಜಕಾರಣ ಮಾಡಲು ಬಿಡುವುದಿಲ್ಲ. ಈ ಭಾಗದಲ್ಲಿ ನಡೆಯುವುದು ನೀತಿ, ಸಿದ್ದಾಂತದ ರಾಜಕಾರಣ ಎಂದು ಎಚ್ಚರಿಕೆ ನೀಡಿದರು.ಪ್ರಾಚಾರ್ಯ ಸತೀಶ ಈಶ್ವರಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿನವ ಮುರುಘೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ಬಿಇಒ ಸುರೇಂದ್ರ ಕಾಂಬಳೆ, ಉಪ ತಹಸೀಲ್ದಾರ್ ಬಸವರಾಜ ರಾವೂರ, ಬಿ.ಸಿ.ಸಾಹುಕಾರ, ಶಿವಾಜಿ ಬನಸೋಡೆ, ಸದಾಶಿವ ಪ್ಯಾಟಿ, ರವಿ ಬಗಲಿ, ಧರ್ಮು ವಾಲಿಕಾರ, ಸತೀಶ ಕುಂಬಾರ, ರಾಜು ತೋಳನೂರ, ಸತೀಶ ಅಡವಿ, ಚಂದ್ರಶೇಖರ ಪಾಸೋಡಿ, ನೀಲಕಂಠ ರೂಗಿ, ಸೈಬಣ್ಣ ಬೂದಿಹಾಳ, ನಾನಾಗೌಡ ಪಾಟೀಲ, ಟೋಪಣ್ಣ ಬಿರಾದಾರ, ಎನ್.ಎಸ್.ತೆಗ್ಗೆಳ್ಳಿ, ರಮೇಶ ಕಲ್ಯಾಣಿ, ಅರವಿಂದ ಬಿರಾದಾರ, ಎಸ್.ಎಸ್.ಮಜ್ಜಗಿ, ಸಂಜಯಕುಮಾರ ಬಿರಾದಾರ, ಮಲ್ಲುಗೌಡ ಪಾಟೀಲ, ಎಸ್.ಆರ್.ಮೆಂಡೆಗಾರ, ಮಂಜುನಾಥ ಧೂಳೆ, ದಯಾನಂದ ಮಠ ಸೇರಿದಂತೆ ಅಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶಾಂತಪ್ಪ ದಶವಂತ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಖಾಜು ಸಿಂಗೆಗೋಳ, ಆರ್.ವಿ.ಪಾಟೀಲ ಅವರನ್ನು ತಾಲೂಕು ಆಡಳಿತದಿಂದ ಶಾಸಕ ಯಶವಂತರಾಯಗೌಡ ಪಾಟೀಲ ಸನ್ಮಾನಿಸಿದರು.