ರಂಗ ಪ್ರಕ್ರಿಯೆಯಿಂದ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ: ಸತ್ಯಪ್ಪ

| Published : Mar 28 2024, 12:47 AM IST

ರಂಗ ಪ್ರಕ್ರಿಯೆಯಿಂದ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ: ಸತ್ಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ರಂಗ ಭೂಮಿ ಮೇಲಿರುವ ನಾವೆಲ್ಲರೂ ನಮ್ಮ ನಮ್ಮ ಪಾತ್ರಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದಾಗ ಒಂದು ಉತ್ತಮ ಸಮಾಜವನ್ನು ಕಾಣಬಹುದು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಈ ರಂಗ ಭೂಮಿ ಮೇಲಿರುವ ನಾವೆಲ್ಲರೂ ನಮ್ಮ ನಮ್ಮ ಪಾತ್ರಗಳನ್ನು ಪರಿಪೂರ್ಣವಾಗಿ ನಿರ್ವಹಿಸಿದಾಗ ಒಂದು ಉತ್ತಮ ಸಮಾಜವನ್ನು ಕಾಣಬಹುದು ಎಂದು ರಂಗ ಶಿಕ್ಷಕ ಗುರುರಾಜ್ ಹೇಳಿದರು.

ಸಮೀಪದ ಜಹಗೀರ ಗುಡುದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಶಾಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಕ್ಕಳ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಶಾಲೆಯಲ್ಲಿ ವಿದ್ಯಾರ್ಥಿಯ ಪಾತ್ರ ನಿರ್ವಹಿಸಿದರೆ, ನಾವು ಶಿಕ್ಷಕ ಪಾತ್ರ ನಿರ್ವಹಿಸುತ್ತೇವೆ. ಹಾಗೆ ಮನೆಯಲ್ಲಿ ನೋಡುವುದಾದರೆ ತಂದೆ-ತಾಯಿಯ ಪಾತ್ರ, ಮಕ್ಕಳ ಪಾತ್ರ, ಅಜ್ಜ-ಅಜ್ಜಿಯ ಪಾತ್ರ ಹೀಗೆ ಎಲ್ಲವನ್ನು ನಿಭಾಯಿಸಬೇಕಾಗುತ್ತದೆ ಎಂದರು.

ರಂಗಭೂಮಿ ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಪ್ರದರ್ಶನ ಪೂರ್ವದಲ್ಲಿ ನಡೆಸುವ ರಂಗ ಪ್ರಕ್ರಿಯೆ ಅತ್ಯಂತ ಮುಖ್ಯವಾದ ಘಟ್ಟ. ನಾಟಕದಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದರಿಂದ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕವಾಗಿ ಕ್ರಿಯಾಶೀಲರಾಗಿ ಮಕ್ಕಳ ಆಸಕ್ತಿ, ಆಲೋಚನೆ ಎಲ್ಲವೂ ಅತ್ಯಂತ ಸೂಕ್ಷ್ಮ ಗ್ರಹಿಕೆಯುಳ್ಳವರಾಗಿ ಬದಲಾಗಲು ಸಾಧ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸತ್ಯಪ್ಪ ಯಲಬುರ್ಗಿ ಮಾತನಾಡಿ, ಈ ರಂಗ ಪ್ರಕ್ರಿಯೆಯಲ್ಲಿ ಯಾವ ಮಕ್ಕಳು ಪರಿಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೋ ಅವರು ಸರ್ವಾಂಗಿಣ ಅಭಿವೃದ್ಧಿ ಹೊಂದುತ್ತಾರೆ ಎಂದರು.

ನೊಬೆಲ್ ಪ್ರಶಸ್ತಿ ಪಡೆದ ನಾರ್ವೆಯ ನಾಟಕಕಾರ ಜಾನ್ ಪೋಸ್ಸೇ ಕಲೆ ಕಲಾವಿದರು ಮತ್ತು ಶಾಂತಿಯ ಕುರಿತಾಗಿ ನೀಡಿರುವ ರಂಗ ಸಂದೇಶವನ್ನು ಆಂಗ್ಲ ಭಾಷೆಯಲ್ಲಿ ಶಿವಪ್ಪ ಇಲಾಳ ವಾಚಿಸಿದರು. ಕನ್ನಡದಲ್ಲಿ ಶಿಕ್ಷಕಿ ತನುಜಾ ಪೊಲೀಸ ವಾಚಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ಕಾವ್ಯ ವಾಚನ ಪ್ರದರ್ಶನಗೊಂಡಿತು. ಶಾಲಾ ಬೇಸಿಗೆ ಶಿಬಿರದಲ್ಲಿ ಮಕ್ಕಳಿಂದ ರಚಿತವಾದ ಹಲವಾರು ಚಿತ್ರಗಳ ಪ್ರದರ್ಶನವೂ ಜರುಗಿತು.

ಪ್ರಮುಖರಾದ ಶಾಲೆಯ ಭೂದಾನಿ ಭೀಮರಾವ್ ಸಾಳಂಕಿ, ಬಸಪ್ಪ ಹಿರೇಮನಿ, ಶರಣಪ್ಪ ರಾಮಾಪುರ, ರಮೇಶ್ ಚವ್ಹಾಣ, ಕಾಳಪ್ಪ, ಉದಯಕುಮಾರ್, ಮುಸ್ತಫಾ, ರವಿಕುಮಾರ ವಿದ್ಯಾರ್ಥಿಗಳು ಇತರರಿದ್ದರು.