ಸಾರಾಂಶ
ಸರ್ಕಾರದ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪಿದೆಯೋ, ಇಲ್ಲವೋ ಎಂಬ ಸದುದ್ದೇಶದಿಂದ ಗ್ರಾಪಂ ಮಟ್ಟದಲ್ಲಿ ಸಭೆ ಮಾಡುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮ ಮಾಡಿದಾಗ ಎಲ್ಲ ಅಧಿಕಾರಿಗಳು ಬರುತ್ತಾರೆ. ಕಾಮಗಾರಿಯ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಹನುಮಸಾಗರ:
ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಂಸದ ಕೆ. ರಾಜಶೇಖರ ಹಿಟ್ನಾಳ ಹೇಳಿದರು.ಗ್ರಾಮದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಹನುಮಸಾಗರ ಹೋಬಳಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪಿದೆಯೋ, ಇಲ್ಲವೋ ಎಂಬ ಸದುದ್ದೇಶದಿಂದ ಗ್ರಾಪಂ ಮಟ್ಟದಲ್ಲಿ ಸಭೆ ಮಾಡುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮ ಮಾಡಿದಾಗ ಎಲ್ಲ ಅಧಿಕಾರಿಗಳು ಬರುತ್ತಾರೆ. ಕಾಮಗಾರಿಯ ಬಗ್ಗೆ ಸಮರ್ಪಕ ಮಾಹಿತಿ ಸಿಗುತ್ತದೆ ಎಂದರು.ಕುಷ್ಟಗಿ ತಾಲೂಕಿನ ಮುದೇನೂರು ಹಾಗೂ ಹೂಲಗೇರ ಗ್ರಾಮ ಸಂಸದರ ದತ್ತು ಗ್ರಾಮಕ್ಕೆ ಆಯ್ಕೆಯಾಗಿದೆ. ಈ ಕುರಿತು ಗ್ರಾಮದಲ್ಲಿ ಸರ್ವೇ ಕಾರ್ಯ ಮಾಡಲಾಗುವುದು, ನೆಡತೋಪು, ಗೋದಾಮು, ಅಂಗನವಾಡಿ, ಸಿಸಿ ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿ, ಶೌಚಾಲಯ ಹಾಗೂ ವೈಯಕ್ತಿಕ ಕಾಮಗಾರಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಕಾಮಗಾರಿ ಒಳಗೊಂಡು ₹ ೧೦ಕೋಟಿಗೂ ಹೆಚ್ಚು ಮೊತ್ತದ ಕ್ರಿಯಾಯೋಜನೆ ಅನುಮೋದನೆಗೆ ಜಿಪಂಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜೆಜೆಎಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡುವಾಗ ಗ್ರಾಪಂ ಸದಸ್ಯರು, ಜೆಜೆಎಂ ಎಂಜಿನಿಯರ್ ಅವರನ್ನು ಇವತ್ತೇ ನಾವು ನೋಡಿದ್ದು, ಊರಿನ ಸಿಸಿ ರಸ್ತೆ ಒಡೆದು ದೊಡ್ಡ ದೊಡ್ಡ ಗುಂಡಿ ತೆಗೆದು ಮುಚ್ಚದೆ ಹಾಗೇ ಬಿಟ್ಟಿದ್ದಾರೆ. 4270 ನಳ ಸಂಪರ್ಕ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ವರೆಗೆ ಹನಿ ನೀರು ಬಂದಿಲ್ಲ. ರಸ್ತೆಯಲ್ಲಿರುವ ಗುಂಡಿಯಿಂದ ವಯೋವೃದ್ಧರು, ಚಿಕ್ಕಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಎಂಜಿನಿಯರ್ ಹಾಗೂ ಗ್ರಾಪಂ ಸದಸ್ಯರ ನಡುವೆ ವಾಗ್ವಾದ ನಡೆಯಿತು.ಈ ವೇಳೆ ಸಂಸದ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿ ನೀರು ಸರಿಯಾಗಿ ಒದಗಿಸಬೇಕು ಎಂದರು.
ಈ ವೇಳೆ ತಾಪಂ ಇಒ ಪಂಪಾಪತಿ ಹಿರೇಮಠ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪಗೌಡರ, ದಿಶಾ ಸಮಿತಿ ಸದಸ್ಯ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ, ಗ್ಯಾರಂಟಿ ಯೋಜನೆ ಅಧ್ಯಕ್ಷ ಫಾರೂಕ್ ದಲಾಯತ, ಕೆಡಿಪಿ ಸದಸ್ಯ ಕರಡಿ, ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ವಿ.ಎಚ್., ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ, ಪಿಡಿಒ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕೆಡಿಪಿ ಹಾಗೂ ವಿವಿಧ ಸಮಿತಿಯ ಸದಸ್ಯರು ಇದ್ದರು.