ಸಾರಾಂಶ
ಭಟ್ಕಳ: ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2023- 24ನೇ ಸಾಲಿನ ವಾರ್ಷಿಕೋತ್ಸವವನ್ನು ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ಪಾಟೀಲ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಯಲ್ಲೂ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಅತಿ ಮುಖ್ಯ ಎಂದರು. ಕುಮಟಾದ ಹನುಮಂತ ಬೆಣ್ಣೆ ಪಿಯು ಕಾಲೇಜಿನ ಪ್ರಾಂಶುಪಾಲ ಆರ್.ಎಚ್. ನಾಯ್ಕ ಮಾತನಾಡಿ, ಸಾಧಕರ ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅದರ ಹಿಂದಿನ ಶ್ರಮವನ್ನು ಪರಿಪಾಲಿಸಿದಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ, ವಿದ್ಯಾರ್ಥಿಗಳು ಪದವಿಯ ಮೂರು ವರ್ಷವನ್ನು ಸೂಕ್ತವಾಗಿ ಉಪಯೋಗಿಸಿ, ಕೌಶಲ್ಯವನ್ನು ವೃದ್ಧಿಸಿ ಉದ್ಯೋಗವಂತರಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು, ವಿದ್ಯಾರ್ಥಿಗಳು ಶಿಸ್ತು ಹಾಗೂ ಸಂಯಮವನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರು.2023- 24ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಬಿಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿಬಿಎ, ಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ನಾಯ್ಕ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರೀಯಾ ಹಾಗೂ ಅಂಜಲಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತದಲ್ಲಿ ವಿದ್ಯಾರ್ಥಿಗಳಿಂದ ನಡೆ ವಿವಿಧ ಮನರಂಜನಾ ಕಾರ್ಯಕ್ರಮ ಮನರಂಜಿಸಿತು.