ಕೊಪ್ಪಳ: ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ 2026ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಸಂಸದ ಕೆ. ರಾಜಶೇಖರ ಬಸಬರಾಜ ಹಿಟ್ನಾಳ ಹೇಳಿದರು.
2026ರ ಶ್ರೀಹುಲಿಗೆಮ್ಮದೇವಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಕುರಿತು ಶ್ರೀಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯ ಸರ್ಕಾರವು ಹುಲಿಗೆಮ್ಮದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಇದರಿಂದ ಶ್ರೀಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಾಗುತ್ತಿವೆ.ಕಳೆದ ವರ್ಷದಂತೆ ಈ ಬಾರಿಯೂ ಭಕ್ತಾದಿಗಳಿಗೆ ಸಕಲ ಸೌಲಭ್ಯ ಕಲ್ಪಿಸಿ ಅದ್ಧೂರಿ ಜಾತ್ರಾ ಮಹೋತ್ಸವ ಕೈಗೊಳ್ಳಲು ಉದ್ದೇಶಿಸಲಾಗಿದೆ. 2026ನೇ ಸಾಲಿನ ಜಾತ್ರಾ ಮಹೋತ್ಸವವು ಮೇ.2 ರಿಂದ ಮೇ.14ರವರೆಗೆ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಮತ್ತು ಜಾತ್ರಾ ಮಹೋತ್ಸವವು ಸುಮಾರು ತಿಂಗಳ ಕಾಲ ಜರುಗಲಿದ್ದು, ಈ ಸಮಯದಲ್ಲಿ ಕರ್ನಾಟಕ ಸೇರಿದಂತೆ ಆಂಧ್ರ,ಮಹಾರಾಷ್ಟ್ರ ಹಾಗೂ ಇನ್ನಿತರೆ ಪ್ರದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ ಎಂದರು.
ಕಳೆದ ವರ್ಷ ಜಾತ್ರೆಗೆ ಬರುವವರ ಸಂಖ್ಯೆ ಲೆಕ್ಕಿಸಲು ಮಾಬ್ ಕೌಂಟಿಂಗ್ ಮಷಿನ್ ಅಳವಡಿಸಲಾಗಿತ್ತು.ಜಾತ್ರಾ ಅವಧಿಯಲ್ಲಿ ಸುಮಾರು 28 ಲಕ್ಷ ಜನರು ಅಮ್ಮನ ದರ್ಶನ ಪಡೆದಿದ್ದಾರೆ. ಈ ಬಾರಿ 30 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭಕ್ತಾದಿ ಆಗಮಿಸುವ ನಿರೀಕ್ಷೆಯಿದೆ. ಹುಲಗಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆ, ಅರವಟ್ಟಿಗೆ ವ್ಯವಸ್ಥೆ, 100 ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ವಿಶೇಷ ದರ್ಶನ, ಸರ್ವರಿಗೂ ದರ್ಶನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ , ತುಂಗಭದ್ರ ಶಾಲೆಯಿಂದ ಮತ್ತು ಕೋರಮಂಡಲ್ ಫ್ಯಾಕ್ಟರಿಯಿಂದ ದೇವಸ್ಥಾನದ ಹಿಂಭಾಗದವರೆಗೆ ಭಕ್ತರು ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ಮೇ 2 ರಿಂದ ಒಂದು ತಿಂಗಳುಗಳ ಕಾಲ ಮಹಾ ದಾಸೋಹ ಹಮ್ಮಿಕೊಂಡಿದ್ದು, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಅಚ್ಚುಕಟ್ಟಾಗಿ ಮಾಡಲಾಗುವುದು ಎಂದರು.ತಾತ್ಕಾಲಿಕ ವೈದ್ಯಕೀಯ ಶಿಬಿರ ತೆರೆದು ಭಕ್ತಾಧಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸಹ ಮಾಡಲಾಗಿದ್ದು, 2 ಆ್ಯಂಬುಲೆನ್ಸ್ ವ್ಯವಸ್ಥೆ ಹಾಗೂ ತುರ್ತು ಅವಘಡ ನಿಯಂತ್ರಣಕ್ಕೆ ಅಗ್ನಿ ಶಾಮಕ ವಾಹನ ಕಾಯ್ದಿರಿಸಿಕೊಳ್ಳಲಾಗುವುದು. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು, ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಅನುಸರಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. 7 ಎಂಎಲ್ಡಿ ನೀರನ್ನು ಪಡೆಯಲು ನೀರಾವರಿ ಇಲಾಖೆಗೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿ: ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಕೊಳ್ಳಲಾಗಿದ್ದು, ₹985 ಲಕ್ಷಗಳ ಅಂದಾಜು ಮೊತ್ತದ ಅಮ್ಮಾ ನಿಲಯ ವಸತಿ ಸಂಕೀರ್ಣ2 & 3ನೇ ಮಹಡಿ ನಿರ್ಮಾಣ ಕಾಮಗಾರಿಗೆ ₹ 492.50 ಲಕ್ಷ ಪ್ರಾಧಿಕಾರದಿಂದ ಒದಗಿಸಲಾಗಿದೆ. ₹999.50 ಲಕ್ಷಗಳ ಅಂದಾಜು ಮೊತ್ತದಲ್ಲಿ ಹುಲಿಗೆಮ್ಮ ದೇವಿ ದೇವಸ್ಥಾನದ ಹಾಲಿ ಕಟ್ಟಡ ತೆರವುಗೊಳಿಸಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ₹ 250 ಲಕ್ಷಗಳನ್ನು ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆ ಮಾಡಲಾಗಿದೆ.
ಮಹಾನಕ್ಷೆಯಲ್ಲಿ ಸೂಚಿಸಿರುವಂತೆ ವಿವಿಧ 4 ಕಡೆ ದೇವಸ್ಥಾನದ ಭಕ್ತಾಧಿಗಳ ಅನುಕೂಲಕ್ಕಾಗಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಸ್ನಾನ ಗೃಹ ನಿರ್ಮಾಣ ಕಾಮಗಾರಿ ₹340 ಲಕ್ಷ ಅಂದಾಜು ಮೊತ್ತದಲ್ಲಿ ಕೈಗೊಳ್ಳಲಾಗಿದ್ದು, ₹170 ಲಕ್ಷ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆ ಮಾಡಿದೆ.
ಅಲ್ಲದೇ ಮಹಾನಕ್ಷೆಯ ಪ್ರಕಾರ ₹1,780 ಲಕ್ಷ ಅಂದಾಜು ಮೊತ್ತದ ಕುಡಿಯುವ ನೀರು ಸರಬರಾಜು ಒಳಚರಂಡಿ ನಿರ್ಮಾಣ ಕಾಮಗಾರಿ ಮತ್ತು ₹ 2,950 ಲಕ್ಷ ಅಂದಾಜು ಮೊತ್ತದ ನೀರು ಸರಬರಾಜು ಒಳಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಡಿಪಿಆರ್ ಯೋಜನೆ ಪ್ರಾಧಿಕಾರದ ಪರಿಶೀಲನೆಯಲ್ಲಿರುತ್ತದೆ. ಕ್ಷೇತ್ರದ ಎರಡು ಕಡೆ ಸುಲಭ ಶೌಚಾಲಯ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶ್‌ರಾವ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಈಳಿಗೇರ ಸೇರಿದಂತೆ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.