ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನ ೨೦ ಪ್ರೌಢಶಾಲೆಗಳಿಂದ ೫೮೦ ಗಂಡು ೬೮೨ ಹೆಣ್ಣು ಮಕ್ಕಳು ಸೇರಿದಂತೆ ೧೨೬೨ ಮಕ್ಕಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದು, ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು, ರೋಟರಿ ಪ್ರೌಢ ಶಾಲೆ, ಲೊಯೋಲಾ ಪ್ರೌಢ ಶಾಲೆ, ಕಾತೂರ ಸರಕಾರಿ ಪ್ರೌಢಶಾಲೆ ಹಾಗೂ ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸೇರಿ ೫ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿಯೊಂದು ಕೊಠಡಿಯಲ್ಲಿ ಕೂಡ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಪರೀಕ್ಷೆಗೆ ಸಕಲ ಸಿದ್ದತೆ ಮಾಡಲಾಗಿದೆ. ಮಂಗಳವಾರ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ೧೧೪೯ ರೆಗ್ಯುಲರ್ ಹಾಗೂ ೧೧೩ ಜನ ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೧೨೬೨ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಒಟ್ಟು ೧೦೯ ಜನರು ಕಾರ್ಯನಿರ್ವಹಿಸುತ್ತಿದ್ದಾರೆ, ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಆರೋಗ್ಯ ಸಿಬ್ಬಂದಿಗಳನ್ನು ಕೂಡ ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಸಿದ್ದಾಪುರದಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ

ಮಾ. ೧೮ರಿಂದ ಆರಂಭಗೊಳ್ಳುವ ಎಸ್ಎಸ್ಎಲ್‌ಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ತಿಳಿಸಿದರು.ಸಿದ್ದಾಪುರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಕಳೆದ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ತಾಲೂಕಿನಲ್ಲಿ ೭ ಪರೀಕ್ಷಾ ಕೇಂದ್ರಗಳಿದ್ದು, ೧೮ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ ೧೨ ಖಾಸಗಿ ಅಭ್ಯರ್ಥಿಗಳು ಸೇರಿದಂತೆ ೧೨೧೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಪಪೂ ಕಾಲೇಜ್ ಹಾಳದಕಟ್ಟಾ, ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾ, ಪ್ರಶಾಂತಿ ಪ್ರೌಢಶಾಲೆ ಪರೀಕ್ಷಾ ಕೇಂದ್ರಗಳಾಗಿವೆ. ಅಂತೆಯೆ ಕಾಳಿಕಾ ಭವಾನಿ ಪ್ರೌಢಶಾಲೆ ಕಾನಸೂರು, ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿ, ಸೀತಾರಾಮಚಂದ್ರ ಪ್ರೌಢಶಾಲೆ ಬಿಳಗಿ, ಕರ್ನಾಟಕ ಪಬ್ಲಿಕ್ ಶಾಲೆ ಹಲಗೇರಿ ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಾಗಿವೆ. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪರೀಕ್ಷಾ ಕೊಠಡಿಗಳು, ಪೀಠೋಪಕರಣಗಳು, ಪ್ರತ್ಯೇಕ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಮೂಲಭೂತ ಸೌಲಭ್ಯಗಳಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ೧೪೦ ಕೊಠಡಿ ಮೇಲ್ವಿಚಾರಕರು, ೦೭ ಮುಖ್ಯ ಅಧೀಕ್ಷಕರು, ೦೭ ಕಸ್ಟೋಡಿಯನ್. ೦೭ ಸ್ಥಾನಿಕ ಜಾಗೃತ ದಳ, ೦೭ ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ೦೭ ಕಚೇರಿ ಸಹಾಯಕರು ಸೇರಿದಂತೆ ಸುಮಾರು ೧೬೦ ಸಿಬ್ಬಂದಿ ಈ ಪರೀಕ್ಷಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಪರೀಕ್ಷೆಗಳು ಸುಗಮವಾಗಿ ನಡೆಯಲು ಹೆಸ್ಕಾಂ, ಸಾರಿಗೆ, ಆರಕ್ಷಕದಳ ಹೀಗೆ ವಿವಿಧ ಇಲಾಖೆಗಳ ಸಹಕಾರ ಕೋರಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಎಂ.ವಿ. ನಾಯ್ಕ ಮತ್ತು ಮಂಜುನಾಥ ಶಾಸ್ತ್ರಿ ಇದ್ದರು.