ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ವ್ಯವಸಾಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.ತಾಲೂಕಿನ ಮಂಗಲ ಗ್ರಾಮದ ಬಳಿ ಬರುವ ರಾಮನಗುಡ್ಡೆ ಕೆರೆ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ರೈತರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ 50 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಆದರೆ ಪ್ರಸ್ತುತವಾಗಿ 15 ರಿಂದ 17 ಸಾವಿರ ಎಕರೆಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ 30 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಯೋಜನೆ ಕಲ್ಪಿಸಲು ₹950 ಕೋಟಿ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ತಾಲೂಕಿನ ರಾಮನಗುಡ್ಡ ಕೆರೆಯ 950 ಎಕರೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ 1980ರಲ್ಲಿ ನಿರ್ಮಾಣ ಮಾಡಿರುವ ಕೆರೆಗೆ ಅಭಿವೃದ್ಧಿಪಡಿಸಲು ಅಧಿಕಾರಿಗಳು ಅವೈಜ್ಞಾನಿಕವಾಗಿ ಕ್ರಿಯಾಯೋಜನೆ ತಯಾರಿಸಿ ನೀಡಿರುವುದರಿಂದ ಕೆರೆಗಳಲ್ಲಿ ನೀರಿಲ್ಲದೆ ಕಳೆದ 30 ವರ್ಷಗಳಿಂದ ಬರಿದಾಗಿದೆ. ಹೀಗಾಗಿ ಹುಬ್ಬೆ ಹುಣಸೆ ಕೆರೆ ಹಾಗೂ ಗುಂಡಾಲ್ ಡ್ಯಾಮ್ ಮೂರಕ್ಕೂ ನೀರು ತುಂಬಿಸುವ ಯೋಜನೆಗೆ 2018 -19 ರಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಯೋಜನೆಯಿಂದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸುವ ಉದ್ದೇಶದಿಂದ ಉಳಿದಿರುವ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ನಾಲೆಗಳನ್ನು ಸಹ ದುರಸ್ತಿ ಪಡಿಸಲು ನರೇಗಾ ಯೋಜನೆಯಡಿ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳಲ್ಲಿ ನಿವಾಸಿಗಳಿಗೆ ಕಾಮಗಾರಿ ಕೆಲಸ ನೀಡುವ ಮೂಲಕ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗಿದೆಕ್ಷೇತ್ರದಲ್ಲಿರುವ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಲಾ ರೋಡ್ ಗರಿಕೆಕಂಡಿ ರಸ್ತೆಗೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ, ಬಂಡಳ್ಳಿ ರಸ್ತೆಯನ್ನು ₹25 ಕೋಟಿ ವೆಚ್ಚದಲ್ಲಿ 10 ಕಿ.ಮೀ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟು ₹67 ಕೋಟಿ ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಸಂಪರ್ಕ ಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ₹212 ಕೋಟಿ ಅನುದಾನವನ್ನು ತಂದು ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಉಳಿದಂತ ರಸ್ತೆಗಳಿಗೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜೊತೆಗೆ ಕೇಂದ್ರ ಸ್ಥಾನದಲ್ಲಿ 50 ಹಾಸಿಗೆ ಬೆಡ್ ಇರುವ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ನೀಡಿದೆ ಹಾಗಾಗಿ ವಿಶೇಷ ಅನುದಾನದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣ ಮಾಡಲು ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಜೊತೆ ಸಂಪರ್ಕ ನಡೆಸಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಮಲೆ ಮಹದೇಶ್ವರ ಬೆಟ್ಟ ಬಂಡಳ್ಳಿ ಹಾಗೂ ರಾಮಾಪುರ ಇನ್ನಿತರ ಗ್ರಾಮಗಳಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿಗೂ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದರು.ತಾಲೂಕಿನಲ್ಲಿ ರೈತರು ಹೆಚ್ಚಾಗಿ ನೀರಾವರಿಯನ್ನು ಬಳಕೆ ಮಾಡಲು ವಿದ್ಯುತ್ ನಿಗದಿತ ಸಮಯಕ್ಕೆ ನೀಡಲು ಪಟ್ಟಣದಲ್ಲಿ 220 ಕೆವಿ ವಿದ್ಯುತ್ ಕಚೇರಿಯನ್ನು ಸಹ ಹುಲಸುಗುಡ್ಡೆ ಬಳಿ ನಿರ್ಮಾಣ ಮಾಡಲು ಸ್ಥಳ ಗುರುತು ಮಾಡಲಾಗಿದೆ .
ಪ್ರಜಾಸೌಧ ನಿರ್ಮಾಣ ಮತ್ತು ನ್ಯಾಯಾಲಯ ಹಾಗೂ ಅವರಿಗೆ ಬೇಕಾದ ವಸತಿ ಸೌಲಭ್ಯಕ್ಕೆ ನಿವೇಶನ ಸಹ ಗುರುತು ಮಾಡಲಾಗಿದೆ ಉಳಿದಂತೆ ಪಟ್ಟಣ ಪಂಚಾಯಿತಿ ಕಚೇರಿ, ತಾಲೂಕು ಕಚೇರಿ, ಬಸ್ ಡಿಪೋ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಕಚೇರಿಗಳನ್ನು ತೆರೆಯಲು ಹೆಚ್ಚಿನ ಒತ್ತು ನೀಡಲಾಗಿದೆ. ನನಗೆ ಹನೂರು ಕ್ಷೇತ್ರದಲ್ಲಿ ತಾವು ನೀಡಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕೆಲಸ ಮಾಡಿ ನೀರಾವರಿ ಯೋಜನೆಗಳನ್ನು ಮತ್ತು ವಿದ್ಯುತ್, ರಸ್ತೆ ಉಳಿದಂತೆ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡುತ್ತೇನೆ ಎಂದರು.ನೀರಾವರಿ ಇಲಾಖೆ ಎ ಇ ಇ ಕರುಣಾಮಯಿ, ಹಿರಿಯ ಮುಖಂಡರಾದ ಚಿಂಚಳ್ಳಿ ಗುರುಮಲ್ಲಪ್ಪ , ಧನರಾಜ್, ಸಿದ್ದರಾಜ್, ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಮಾದಪ್ಪ, ವಿಜಯ್ ಕುಮಾರ್, ವೆಂಕಟೇಗೌಡ, ಮಣಿ ಉಪಸ್ಥಿತರಿದ್ದರು.