ಮಳೆ-ಗಾಳಿಗೆ ತಾತ್ಕಾಲಿಕ ಶೆಡ್‌ಗಳೆಲ್ಲ ಚೆಲ್ಲಾಪಿಲ್ಲಿ: 500 ಕುಟುಂಬಗಳು ಅತಂತ್ರ!

| Published : May 18 2024, 12:33 AM IST

ಮಳೆ-ಗಾಳಿಗೆ ತಾತ್ಕಾಲಿಕ ಶೆಡ್‌ಗಳೆಲ್ಲ ಚೆಲ್ಲಾಪಿಲ್ಲಿ: 500 ಕುಟುಂಬಗಳು ಅತಂತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ಜೊತೆಗೆ ಜೋರಾಗಿ ಬೀಸಿದ ಗಾಳಿಯಿಂದಾಗಿ ತಾತ್ಕಾಲಿಕ ಶೆಡ್‌ಗಳ ತಗಡಿನ ಶೀಟುಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪರಿಣಾಮ ರಾಮಕೃಷ್ಣ ಹೆಗಡೆ ನಗರದ ನೂರಾರು ಸಂತ್ರಸ್ತ ಕುಟುಂಬಗಳು ಸಾಮಾನು, ಸರಂಜಾಮು ಸಮೇತ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಮೂಲ ಸ್ಥಳಕ್ಕೆ ಮರಳಿವೆ.

- ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರ ಬದುಕು ಇನ್ನೂ ದುಸ್ತರ । ಡಿಸಿ ಸೇರಿ ಯಾವ ಅಧಿಕಾರಿಗಳ ಸುಳಿವೇ ಇಲ್ಲ! - ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ । ರಾತ್ರೋರಾತ್ರಿ ಪುನಃ ಹೆಗಡೆ ನಗರಕ್ಕೆ ಮರಳಿದ ಸಂತ್ರಸ್ತರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಳೆ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ಜೊತೆಗೆ ಜೋರಾಗಿ ಬೀಸಿದ ಗಾಳಿಯಿಂದಾಗಿ ತಾತ್ಕಾಲಿಕ ಶೆಡ್‌ಗಳ ತಗಡಿನ ಶೀಟುಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪರಿಣಾಮ ರಾಮಕೃಷ್ಣ ಹೆಗಡೆ ನಗರದ ನೂರಾರು ಸಂತ್ರಸ್ತ ಕುಟುಂಬಗಳು ಸಾಮಾನು, ಸರಂಜಾಮು ಸಮೇತ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಮೂಲ ಸ್ಥಳಕ್ಕೆ ಮರಳಿವೆ.

ದಾವಣಗೆರೆ ನಗರ, ಜಿಲ್ಲಾದ್ಯಂತ ವಿವಿಧೆಡೆ ಗುರುವಾರ ಸಂಜೆ 4 ಗಂಟೆಗೆ ಶುರುವಾದ ಮಳೆ ಬಿಟ್ಟೂಬಿಡದೇ ಸುರಿದಿದೆ. ಆಗಾಗ ಮಿಂಚು, ಗುಡುಗು, ಸಿಡಿಲಿನ ಆರ್ಭಟದ ಮಧ್ಯೆ ಜೋರು ಗಾಳಿ ಎದ್ದಿದೆ. ಹೀಗಾಗಿ, ರಾಮಕೃಷ್ಣ ಹೆಗಡೆ ನಗರದ ಸುಮಾರು 500 ಕುಟುಂಬಗಳ ನಿವಾಸಿಗಳು ತಮ್ಮನ್ನು ಸ್ಥಳಾಂತರಿಸಿದ್ದ ಸ್ಥಳದಲ್ಲಿಯೇ ರಾತ್ರಿ ಇಡೀ ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ವಿದ್ಯುತ್ ಕಂಬಗಳು ಧರೆಗುರುಳಿ, ಶೆಡ್‌ಗಳ ಶೀಟುಗಳು ಕಿತ್ತು ಹೋಗಿವೆ. ಇದರಿಂದ ದಿಕ್ಕು ತೋಚದಂತಾಗಿ, ಹಲವಾರು ಕುಟುಂಬಗಳು ರಾತ್ರೋರಾತ್ರಿ ರಾಮಕೃಷ್ಣ ಹೆಗಡೆ ನಗರಕ್ಕೆ ಮರಳಿವೆ.

ಏಳೆಂಟು ತಿಂಗಳ ಹಿಂದಷ್ಟೇ ಸ್ಥಳಾಂತರ:

ಐದು ತಿಂಗಳ ಹಿಂದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಇಲ್ಲಿನ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳನ್ನು ಜಿಲ್ಲಾ ಕೇಂದ್ರದಿಂದ ಏಳೆಂಟು ಕಿಮೀ ದೂರದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಮನೆ ಕಟ್ಟಿಸಿ ಕೊಡುವವರೆಗೆ ತಾತ್ಕಾಲಿಕವಾಗಿ ತಗಡಿನ ಶೆಡ್‌ಗಳನ್ನು ನಿರ್ಮಿಸಿ, ಸಂತ್ರಸ್ತರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಬೇಸಿಗೆಯಲ್ಲಿ ಉರಿಬಿಸಿಲಿನಲ್ಲೂ ಜೀವನ ನಡೆಸಿದ್ದ ಸಂತ್ರಸ್ತರು ಗುರುವಾರ ಸಂಜೆಯಿಂದ ಶುರುವಾದ ಮಳೆಯಿಂದಾಗಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಹ ಸ್ಥಿತಿಗೆ ತಲುಪಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

4 ದಶಕದಿಂದಲೂ ರಾಮಕೃಷ್ಣ ಹೆಗಡೆ ನಗರದಲ್ಲಿ ನೆರಿಕೆ ಗೋಡೆ, ಮಣ್ಣಿನ ಪುಟ್ಟಗೂಡು ಕಟ್ಟಿಕೊಂಡು ಜೀವನ ನಡೆಸಿದ್ದೆವು. 5 ತಿಂಗಳ ಹಿಂದೆ ಏಕಾಏಕಿ ಅಲ್ಲಿಂದ ಎಲ್ಲರನ್ನೂ ಒಕ್ಕಲೆಬ್ಬಿಸಿ, ಈ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಸ್ಥಳಾಂತರಿಸಿದರು. ಆದರೆ, ಇಲ್ಲಿ ಈವರೆಗೆ ನಮಗೆ ಶುದ್ಧ ನೀರು, ಶೌಚಾಲಯ, ಸಾರಿಗೆ, ಆರೋಗ್ಯ ವ್ಯವಸ್ಥೆ, ಮಕ್ಕಳ ಶಿಕ್ಷಣ, ಪಡಿತರ ವ್ಯವಸ್ಥೆ ಹೀಗೆ ಯಾವುದೇ ಮೂಲ ಸೌಕರ್ಯಗಳನ್ನೂ ನೀಡದೇ ಅಧಿಕಾರಿಗಳು ಕಡೆಗಣಿಸಿದ್ದಾರೆ. ಸುಮಾರು 500 ಕುಟುಂಬಗಳ ಜೀವನವೇ ಅತಂತ್ರವಾಗಿದೆ. ನಾವು ಯಾರ ಬಳಿ ದುಃಖ ಹೇಳಿಕೊಳ್ಳಬೇಕು ಎಂದು ನೊಂದವರು ಅತಿಬೇಸರದಿಂದ ಪ್ರಶ್ನಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಾರ್ಯದರ್ಶಿ ಜಬೀನಾ ಖಾನಂ ಮಾತನಾಡಿ, 2-3 ದಿನಗಳಿಂದ ಭಾರೀ ಸಿಡಿಲು, ಗುಡುಗು, ಗಾಳಿ ಸಮೇತ ಮಳೆಯಾಗುತ್ತಿದೆ. ತಾತ್ಕಾಲಿಕವಾಗಿ ನಮಗೆ ನೀಡಿದ್ದ ತಾಡಾಪಾಲು ಹರಿದುಹೋಗಿವೆ. ತಗಡುಗಳೇ ಗಾಳಿ ಹೊಡೆತಕ್ಕೆ ಕಿತ್ತು ಹೋಗಿವೆ. ಆಕಸ್ಮಾತ್ ಹೀಗೆ ನಾವು ಇರುವಂತಹ ಪ್ರದೇಶದಲ್ಲಿ ಏನಾದರೂ ಅನಾಹುತ, ಅಪಾಯ, ಸಾವು-ನೋವು ಸಂಭವಿಸಿದರೆ ಯಾರು ಹೊಣೆ? ರಾಮಕೃಷ್ಣ ಹೆಗಡೆ ನಗರ ನಿವಾಸಿಗಳನ್ನು ಇಲ್ಲಿಗೆ ಬಲವಂತವಾಗಿ ಸ್ಥಳಾಂತರಿಸಿದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಇಲಾಖೆಗಳ ಅಧಿಕಾರಿಗಳು ಒಂದು ದಿನ ಬಂದು, ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರಿಗೆ ಕಳಿಸಿರುವ ನಿರ್ಜನ ಪ್ರದೇಶದಲ್ಲಿ ಜೀವನ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳು, ಹಸುಗೂಸುಗಳು, ಗರ್ಭಿಣಿ, ಬಾಣಂತಿಯರು, ವಿಕಲಚೇತನರು, ವಯೋವೃದ್ಧರು, ಅನಾರೋಗ್ಯ ಪೀಡಿತರು ಹೀಗೆ ಎಲ್ಲ ವಯೋಮಾನದವರನ್ನು ಅತಂತ್ರ ಮಾಡಿದ್ದೇ ಜಿಲ್ಲಾಡಳಿತ, ಪಾಲಿಕೆ ಸಾಧನೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನೀವೆಲ್ಲರೂ ಹವಾ ನಿಯಂತ್ರಿತ ವಾಹನ, ಕಚೇರಿ, ಮನೆಗಳಲ್ಲಿ ಜೀವನ ನಡೆಸುವವರು. ಬಡವರ ಕಷ್ಟ ನಿಮಗೆಲ್ಲಿಂದ ಅರ್ಥವಾಗಬೇಕು? ಪಾಲಿಕೆ ಇಇ ಸಂತ್ರಸ್ತರ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ, ಕಾರಿನಿಂದ ಇಳಿಯುವಷ್ಟು ಸೌಜನ್ಯವನ್ನೂ ತೋರಿಸಲಿಲ್ಲ. ಇಂಥವರು ಜನರ ಸಮಸ್ಯೆ ಆಳಿಸಲು ಸಾಧ್ಯವೇ ಎಂದು ಜಬೀನಾ ಕಿಡಿಕಾರಿದರು.

ಕಾನೂನು ಹೋರಾಟದ ಎಚ್ಚರಿಕೆ:

ರಾಮಕೃಷ್ಣ ಹೆಗಡೆ ನಗರ ಸಂತ್ರಸ್ತರ ಪರಿಸ್ಥಿತಿ ಬಗ್ಗೆ 5 ತಿಂಗಳಲ್ಲಿ ಹೋಗಲಿ, ನಿನ್ನೆ, ಇವತ್ತಾದರೂ ಜಿಲ್ಲಾಧಿಕಾರಿಯಾಗಲೀ, ಪಾಲಿಕೆ ಆಯುಕ್ತರಾಗಲೀ ಸ್ಥಳಕ್ಕೆ ಸೌಜನ್ಯಕ್ಕೂ ಭೇಟಿ ನೀಡಿ, ಸಮಸ್ಯೆ ಆಲಿಸುವ ವ್ಯವಧಾನ ತೋರಿಲ್ಲ. ನಿಮ್ಮ ಬಳಿ ಜನರು ಕೇಳುತ್ತಿರುವುದು ತಲೆಗೊಂದು ಸೂರು, ಒಂದಿಷ್ಟು ಮೂಲಸೌಕರ್ಯ. ನೀವ್ಯಾರು ನಿಮ್ಮ ಮನೆಯಿಂದಾಗಲೀ, ನಿಮ್ಮ ಸರ್ಕಾರಿ ಸಂಬಳದಲ್ಲಾಗಲೀ ಅವುಗಳನ್ನು ಒದಗಿಸುವುದಿಲ್ಲ. ನಿಮ್ಮಂತಹ ಬೇಜವಾಬ್ಧಾರಿ ಅಧಿಕಾರಿಗಳಿಂದಾಗಿ ಬಡವರು, ನಿರ್ಗತಿಕರಂತೂ ರೋಸಿ ಹೋಗಿದ್ದಾರೆ. ಇದೇ ಧೋರಣೆ ಮುಂದುವರಿದರೆ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.

ಈ ಸಂದರ್ಭ ಸಂತ್ರಸ್ತ ಕುಟುಂಬಸ್ಥರು ಇದ್ದರು.

ಅತ್ತ ಸಂಜೆ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಸ್ಥಳದಲ್ಲಿ ಮತ್ತೆ ವಾಪಸ್‌ ಆದ ಜನರ ಬಳಿ ಧಾವಿಸಿದ್ದ ಪಾಲಿಕೆ ಅಧಿಕಾರಿಗಳನ್ನು ಸಂತ್ರಸ್ತ ಕುಟುಂಬ ಸದಸ್ಯರು, ಸ್ಥಳೀಯ ನಿವಾಸಿಗಳು ಮುತ್ತಿಗೆ ಹಾಕಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

- - - ಕೋಟ್‌ ದಾವಣಗೆರೆಯ ರಿಂಗ್ ರಸ್ತೆಯ ರಾಮಕೃಷ್ಣ ಹೆಗಡೆ ನಗರದ ಸಂತ್ರಸ್ತರನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿ, ಕೈ ತೊಳೆದುಕೊಂಡ ಅಧಿಕಾರಿಗಳು ಸೌಜನ್ಯಕ್ಕೂ ಅಲ್ಲಿಗೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿಲ್ಲ. ಏಪ್ರಿಲ್‌, ಮೇ ತಿಂಗಳ ಬಿಸಿಲಿಗೆ ಅಲ್ಲಿ ಜನ ತತ್ತರಿಸಿದ್ದಾರೆ. ಈಗ ಮಳೆ ಆಗುತ್ತಿದ್ದು, ಸಮಸ್ಯೆ ಹೇಳತೀರದು. ನೀತಿ ಸಂಹಿತೆ ಹೆಸರಿನಲ್ಲಿ ನೆಹ ಹೇಳುವ ಅಧಿಕಾರಿಗಳು ಮೊದಲು ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಕಲಿಯಲಿ

- ಜಬೀನಾ ಖಾನಂ, ಎಂ.ಕರಿಬಸಪ್ಪ,

ನೆರಳು ಬೀಡಿ ಕಾರ್ಮಿಕರ ಯೂನಿಯನ್‌

- - - ಬಾಕ್ಸ್‌

* ಸಂತ್ರಸ್ತರ ಹಕ್ಕೊತ್ತಾಯ

- ದಾವಣಗೆರೆ ಹೆಗಡೆ ನಗರದ 500 ಕುಟುಂಬಗಳ ಸಂತ್ರಸ್ತರಿಗೆ ತಕ್ಷಣ‍ವೇ ಮನೆ ಕಟ್ಟಿಕೊಡಲಿ

- ರಸ್ತೆ, ಚರಂಡಿ, ಒಳಚರಂಡಿ, ನೀರು, ನ್ಯಾಯಬೆಲೆ ಅಂಗಡಿ, ಆಸ್ಪತ್ರೆಗಳ ವ್ಯವಸ್ಥೆ ಕಲ್ಪಿಸಬೇಕು

- ಸಂತ್ರಸ್ತರಿಗೆ ತಕ್ಷಣವೇ ಜಾಗ, ಮನೆಗಳ ಹಕ್ಕುಪತ್ರವನ್ನು ಒದಗಿಸಬೇಕು

- ಮನೆ ಕೊಡುವವರೆಗೂ ಬಾಡಿಗೆ ಮನೆ ಮಾಡಿ, ಸಂತ್ರಸ್ತರಿಗೆ ಒದಗಿಸಿ, ಪಾಲಿಕೆಯಿಂದಲೇ ಬಾಡಿಗೆಯ ಹಣ ಭರಿಸಬೇಕು

- ಎಷ್ಟು ದಿನಗಳಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಕೊಡುತ್ತೇವೆಂಬ ಬಗ್ಗೆ ಲಿಖಿತ ರೂಪದಲ್ಲಿ ಪಾಲಿಕೆಯಿಂದ ನೀಡಬೇಕು

- ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಸಮ್ಮುಖ ಸಂತ್ರಸ್ತರ ಕುಂದುಕೊರತೆ ಸಭೆ ಆಯೋಜಿಸಬೇಕು

- - - -17ಕೆಡಿವಿಜಿ11, 12, 13, 14, 15, 16:

ದಾವಣಗೆರೆ ವರ್ತುಲ ರಸ್ತೆ ರಾಮಕೃಷ್ಣ ಹೆಗಡೆ ನಗರದಿಂದ ಹೊರಭಾಗಕ್ಕೆ ಸ್ಥಳಾಂತರಗೊಂಡಿದ್ದ ಜನರು ತಾತ್ಕಾಲಿಕ ಶೆಡ್ಡುಗಳು ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕಿತ್ತುಹೋಗಿದ್ದು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಅತಂತ್ರರಾಗಿರುವುದು. -17ಕೆಡಿವಿಜಿ17:

ದಾವಣಗೆರೆ ವರ್ತುಲ ರಸ್ತೆ ರಾಮಕೃಷ್ಣ ಹೆಗಡೆ ನಗರಕ್ಕೆ ಮರಳಿ ಬಂದು, ಪಾಲಿಕೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂತ್ರಸ್ತ ಕುಟುಂಬಗಳು.