ಕ್ಷಯ ಮುಕ್ತ ಜಿಲ್ಲೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಿ-ಡಾ. ಜಿಲ್ಲಾಧಿಕಾರಿ

| Published : Jan 03 2025, 12:30 AM IST

ಕ್ಷಯ ಮುಕ್ತ ಜಿಲ್ಲೆಗೆ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಿ-ಡಾ. ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯ ಗಂಭೀರ ಕಾಯಿಲೆಯಾಗಿದ್ದು, ಜಿಲ್ಲೆಯಲ್ಲಿ ಕ್ಷಯ ರೋಗ ತಡೆಗೆ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು. ಜೊತೆಗೆ ಕ್ಷಯ ಮುಕ್ತ ಜಿಲ್ಲೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಹಾವೇರಿ: ಕ್ಷಯ ಗಂಭೀರ ಕಾಯಿಲೆಯಾಗಿದ್ದು, ಜಿಲ್ಲೆಯಲ್ಲಿ ಕ್ಷಯ ರೋಗ ತಡೆಗೆ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮೂಡಿಸಬೇಕು. ಜೊತೆಗೆ ಕ್ಷಯ ಮುಕ್ತ ಜಿಲ್ಲೆಗೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷಯರೋಗ ಆಂದೋಲನ ಕುರಿತ ವಿಶೇಷ ಜಿಲ್ಲಾ ಮಟ್ಟದ ಕ್ಷಯರೋಗ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕ್ಷಯರೋಗದ ಲಕ್ಷಣಗಳು ಹಾಗೂ ಕ್ಷಯ ರೋಗ ಗುಣಪಡಿಸಲು ಇರುವ ಸೌಲಭ್ಯಗಳ ಕುರಿತು ನಗರ ಹಾಗೂ ಗ್ರಾಮೀಣ ಭಾಗದ ಜನಸಂದಣಿ ಪ್ರದೇಶಗಳಲ್ಲಿ ಆರೋಗ್ಯ ಅರಿವು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು.ಕ್ಷಯರೋಗ ಪತ್ತೆ ಶಿಬಿರವನ್ನು ಆಯೋಜಿಸುವ ಮೂಲಕ ಕ್ಷಯ ರೋಗದ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು. ಕ್ಷಯದಿಂದ ಗುಣಮುಖರಾದವರಿಂದ ಕ್ಷಯರೋಗಿಗಳಿಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು. ಈ ಕಾರ್ಯಕ್ಕೆ ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದ ಜೊತೆಗೆ ಸಾಮಾಜಿಕ ಜಾಲತಣಗಳ ಮೂಲಕ ಕ್ಷಯರೋಗ ತಗಡೆಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಕ್ಷಯರೋಗಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರದ ಕಿಟ್ ನೀಡಲು ಸಂಘ-ಸಂಸ್ಥೆಗಳ ಸಹಯೋಗ ಪಡೆದುಕೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಹ ಕ್ಷಯರೋಗಿಗಳನ್ನು ದತ್ತು ಪಡೆದುಕೊಳ್ಳುವ ಮೂಲಕ ಅವರಿಗೆ ಆರು ತಿಂಗಳ ಕಾಲ ಪೌಷ್ಠಿಕ ಆಹಾರ ಕಿಟ್ ನೀಡಲು ಮುಂದಾಗಬೇಕು ಎಂದು ತಿಳಿಸಿದರು. ಎಚ್.ಐ.ವಿ. ಸೋಂಕಿತರು ಹಾಗೂ ಬಾಧಿತರಿಗೆ ಅಗತ್ಯ ಸೇವೆಗಳನ್ನು ಆದ್ಯತೆ ಮೇರೆಗೆ ನೀಡಬೇಕು. ಆಸ್ಪತ್ರೆಗಳಲ್ಲಿ ಅವರಿಗೆ ಅಗತ್ಯ ಔಷಧೋಪಚಾರ ಹಾಗೂ ಚಿಕಿತ್ಸೆ ನೀಡಬೇಕು. ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು. ಎಚ್.ಐ.ವಿ. ಸೋಂಕು ಹರಡಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಖಾರಿ ಡಾ. ನೀಲೇಶ ಎಂ.ಎನ್. ಮಾತನಾಡಿ, ಈಗಾಗಲೇ ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದಡಿ ಶತದಿನದ ಟಿಬಿ ಆಂದೋಲನ ಡಿ.೭ರಿಂದ ಬರುವ ಮಾ.೧೭ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಹೋಗಿ ಕ್ಷಯ ರೋಗಿಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಯರೋಗದ ಲಕ್ಷಣಗಳು, ಚಿಕಿತ್ಸೆ ಕ್ರಮಗಳು, ಸಹಾಯಧನ ಸೇರಿದಂತೆ ವಿವಿಧ ಮಾಹಿತಿಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ನಿ-ಕ್ಷಯ್ ಸಹಾಯವಾಣಿ ೧೮೦೦-೧೧-೬೬೬೬ ಟೋಲ್ ಫ್ರೀ ಸಂಖ್ಯೆ ಸಂಪರ್ಕಿಸಲು ಸಹ ಅರಿವು ಮೂಡಿಸಲಾಗುತ್ತಿದೆ ಎಂದರು.ಜ.೧೬ ರಿಂದ ೨೪ರವರೆಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಶಿಬಿರ, ನಿ-ಕ್ಷಯ್ ಸಪ್ತಾಹವನ್ನು ಜ. ೨೭ರಿಂದ ಫೆ.೨ರವರೆಗೆ ಎಲ್ಲ ಇಲಾಖೆಗಳಲ್ಲಿ ಆಯೋಜಿಸಲಾಗುತ್ತಿದೆ. ಫೆ.೩ ರಿಂದ ೧೫ರವರೆಗೆ ನಿ-ಕ್ಷಯ್ ಸರ್ವಿಸ್ ಇನ್ ವರ್ಕ್ ಪ್ಲೆಸ್, ಫೆ.೧೫ ರಿಂದ ೨೮ರವರೆಗೆ ಮಾಧ್ಯಮದವರಿಗೆ ಕಾರ್ಯಾಗಾರ, ಪ್ರದೇಶ ಭೇಟಿ ಹೀಗೆ ಮಾ.೧೭ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ೧೫೮೫ ಕ್ಷಯರೋಗಿಗಳನ್ನು ಪತ್ತೆಹಚ್ಚಲಾಗಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ೨೦೨೩ನೇ ಸಾಲಿನಲ್ಲಿ ೧೭೮೦ ಕ್ಷಯರೋಗಿಗಳನ್ನು ಪತ್ತೆಹಚ್ಚಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ೧೩೫ ಜನರು ಮರಣಹೊಂದಿದ್ದಾರೆ ಎಂದರು.ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಏಡ್ಸ್ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಏಡ್ಸ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಏ. ೨೪ರಿಂದ ನ.೨೪ರ ವರೆಗೆ ೭೩,೪೦೮ ಜನರನ್ನು ತಪಾಸಣೆ ಮಾಡಲಾಗಿದ್ದು, ಈ ಪೈಕಿ ೧೪೯ ಜನರಲ್ಲಿ ಎಚ್.ಐ.ವಿ. ಸೋಂಕು ಕಂಡುಬಂದಿದೆ. ಅದೇ ರೀತಿ ೨೮,೪೩೨ ಗರ್ಭಿಣಿಯರನ್ನು ತಪಾಸಣೆ ಮಾಡಿದ ಐದು ಜನರಲ್ಲಿ ಎಚ್.ಐ.ವಿ. ಸೋಂಕು ಕಂಡುಬಂದಿದೆ. ಸೋಂಕಿತರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ಸಹ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ೩೨ ಎಚ್.ಐ.ವಿ.ಸೋಂಕಿತರಿಗೆ ಮನೆ ಮಂಜೂರು ಮಾಡಲಾಗಿದೆ. ಧನಶ್ರೀ ಯೋಜನೆಯಡಿ ೧೩೦ ಎಚ್.ಐ.ವಿ.ಸೋಂಕಿತರು ಸಹಾಯಧನ ಸೌಲಭ್ಯ ಪಡೆದುಕೊಂಡಿದಾರೆ. ವಿಶೇಷ ಪಾಲನಾ ಯೋಜನೆಯಡಿ ೮೧೪ ಎಚ್.ಐ.ವಿ. ಸೋಂಕಿತ ಬಾಧಿತ ಮಕ್ಕಳಿಗೆ ಪ್ರತಿ ತಿಂಗಳು ಒಂದು ಸಾವಿರ ರು. ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ಇತರರು ಇದ್ದರು.