ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಆಶಯದಂತೆ ಆಡಳಿತ ನಡೆಯುತ್ತಿಲ್ಲ. ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಹಗರಣಗಳಲ್ಲಿ ಸಿಲುಕಿದ್ದಾರೆ. ಆದರೂ ಕೂಡ ಬಂಡತನದಿಂದ ಏನು ಆಗಿಲ್ಲ ಅನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಪಷ್ಠವಾಗಿ ಕಾಣುತ್ತದೆ. ಖರ್ಗೆ ಬಂಟರು ಆತ್ಮಹತ್ಯೆಗೆ ಕಾರಣ ಆಗಿದ್ದಾರೆ. 5% ಹಣ ಕೊಡಿ ನಾವು ಟೆಂಡರ್ ಮಾಡಿಕೊಡುತೇವೆ ಎಂದು ಕಿರುಕುಳ ಕೊಟ್ಟಿದ್ದರಿಂದ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂಡತನದಿಂದ ಯಾರು ಸೇರಿಕೊಂಡಿಲ್ಲ ಎಂದು ತಾತ್ಸರದ ಉತ್ತರ ಕೊಡುತ್ತಾರೆ ಇವರಿಗೆ ಅಧಿಕಾರ ನಡೆಸುವ ನೈತಿಕತೆ ಇಲ್ಲ ಎಂಬುದು. ಪಾರದರ್ಶಕ ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ರಾಜೀನಾಮೆ ಪಡೆಯಬೇಕಿತ್ತು. ಆದರೆ ಅದ್ಯಾವುದನ್ನು ಮಾಡಿಲ್ಲ. ಅಧಿಕಾರವನ್ನು ನಡೆಸುತ್ತಿದ್ದಾರೆ.
ಬಿಜೆಪಿಯವರು ಹಗರಣಗಳ ಬಗ್ಗೆ ಮಾತನಾಡಿದರೆ ದ್ವೇಷದ ರಾಜಕಾರಣ ಎಂದು ಹೇಳುತ್ತಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಕಲುಬುರ್ಗಿಯಲ್ಲಿ ಬೃಹತ್ ಹೋರಾಟ ಮಾಡಲಿದ್ದೇವೆ. ಪೊಲೀಸರು ಕಾನೂನು ರೀತಿ ಕೆಲಸ ಮಾಡುತ್ತಿಲ್ಲ. ಕಾಂಗ್ರಸ್ ನಾಯಕರು ಮುಖಂಡರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಸರಿಯಾಗಿ ತನಿಖೆ ಮಾಡುತ್ತಿಲ್ಲ. ಆದ್ದರಿಂದ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಲ್ಲದೆ ಸಿಬಿಐ ತನಿಖೆ ವಹಿಸಬೇಕು ಎಂದು ಒತ್ತಾಯಿಸಿದರು.ಸಿದ್ದರಾಮಯ್ಯನವರು ಸ್ವತಃ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರು ಸರ್ಕಾರದಲ್ಲಿನ ಹಲವು ಮಂತ್ರಿಗಳು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಆದರೂ ಸಹ ಏನು ಆಗಿಲ್ಲ ಅನ್ನುವ ಭಂಡತನದಲ್ಲಿ ವರ್ತನೆ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ್‌ರವರು ಆತ್ಮಹತ್ಯೆ ಪ್ರಕರಣವು ರಾಜ್ಯ ಮಾತ್ರವಲ್ಲ. ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ. ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸರಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ರಾಜ್ಯ ಸರಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ.
ಸರಕಾರ, ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಹಿಂದೆಂದೂ ಇಂಥ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಕೇಳಿರಲಿಲ್ಲ. ಟೆಂಡರ್ ಮಾಡಿಕೊಡಲು ಶೇ.5 ಲಂಚದ ಬೇಡಿಕೆ ಇಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ನಾನು ಹೇಳಿದ ಮಾತನ್ನು ಮೀರುವುದಿಲ್ಲ. ಸಚಿವರ ಬೆಂಬಲ ಇದೆ ಎಂದು ರಾಜು ಕಪನೂರ್ ಹೇಳಿದ್ದಾಗಿ ಸಚಿನ್ ಡೆತ್ ನೋಟಿನಲ್ಲಿ ಬರೆದಿದ್ದಾರೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸರಕಾರವು ಕರ್ನಾಟಕ ರಾಜ್ಯಕ್ಕೆ ಆತ್ಮಹತ್ಯೆ ಭಾಗ್ಯವನ್ನು ದಯಪಾಲಿಸಿದೆ. ಭ್ರಷ್ಟಾಚಾರ ಬಯಲಾದುದರಿಂದ ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಮೊದಲ ಆತ್ಮಹತ್ಯೆ ಮಾಡಿಕೊಂಡಿದ್ದು. ಬಿಜೆಪಿ ಹೋರಾಟದಿಂದ ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತಸಹಾಯಕರ ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ದಾವಣಗೆರೆಯಲ್ಲಿ ಗುತ್ತಿಗೆದಾರರೊಬ್ಬರು ಬಾಕಿ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿಯಲ್ಲಿ ಕ್ರಷರ್ ಲಾರಿ ಮಾಲೀಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿ ಪಿಎಸ್‍ಐ ಪರಶುರಾಮ, ಸ್ಥಳೀಯ ಶಾಸಕರ ಪುತ್ರನ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿಂದೂ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದು ಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್‍ನೋಟ್‍ನಲ್ಲಿ ತಿಳಿಸಿದ್ದಾರೆ.ರಾಜ್ಯದ ಪೊಲೀಸ್ ಇಲಾಖೆಯಿಂದ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ. ಹಿಂದೆ ಇದೇ ಸರ್ಕಾರದ ಸಚಿವರಾದ ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಒಂದು ಕ್ಷಣವೂ ತಡ ಮಾಡದೇ ಪ್ರಿಯಾಂಕ ಖರ್ಗೆಯವರ ರಾಜೀನಾಮೆ ಪಡೆದುಕೊಳ್ಳಬೇಕು. ಯಾವುದೋ ನೆಪಮಾಡಿ ರಕ್ಷಿಸುವ ದುಸ್ಸಾಹಸ ಮಾಡುವುದು ಬೇಡ. ಪ್ರಿಯಾಂಕ್ ಖರ್ಗೆಯವರಿಗೆ ಮರೆವು ಜಾಸ್ತಿ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈಶ್ವರಪ್ಪರವರ ಮೇಲೆ ಆರೋಪ ಬಂದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದನ್ನು ಪ್ರಿಯಾಂಕ್ ಖರ್ಗೆ ಮರೆಯಬಾರದು. ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್ ಅಷ್ಟೇ ಅಲ್ಲದೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷದ ಅವಧಿಯಲ್ಲಿ 06 ಜನ ಅಧಿಕಾರಿಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಪ್ರತಿಯೊಬ್ಬ ಅಧಿಕಾರಿಯ ಪ್ರಕರಣದಲ್ಲಿ ಒಬ್ಬ ಸಚಿವರ ಹೆಸರು ತಳುಕು ಹಾಕಿಕೊಂಡಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಎಸ್.ಎಸ್ (ಸಿದ್ದರಾಮಯ್ಯ ಹಾಗೂ ಶಿವಕುಮಾರ್) ಸರ್ಕಾರ ಅನ್ನುತಿದ್ದರು. ಈಗ ಇದು ಇನ್ನೊಂದು ತರಹದ ಎಸ್.ಎಸ್ ಸರ್ಕಾರ ಆಗಿದೆ. (ಸುಸೈಡ್ ಮತ್ತು ಸುಪಾರಿ, ಸುಳ್ಳು ಮತ್ತು ಸಾಲ ಸರ್ಕಾರ). ಸುಸೈಡ್‌ನಲ್ಲಿ ಭಾಗಿಯಾಗಿರುವ ಮಂತ್ರಿಗಳ ಬೆಂಗಾವಲಿಗೆ ಸ್ವತಃ ಸಿದ್ಧರಾಮಯ್ಯರವರು ನಿಂತಿದ್ದಾರೆ. ಸ್ವತಹ ಸಿದ್ದರಾಮಯ್ಯನವರೇ ಮಂತ್ರಿಗಳಿಗೆ ಕ್ಲೀನ್ ಚಿಟ್ ಕೊಡುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ರಾಜ್ಯ ರೈತ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್. ಮುಖಂಡರಾದ ಲಕ್ಷ್ಮೀಕಾಂತ್, ಮಾದ್ಯಮ ವಕ್ತಾರ ಛಲವಾದಿ ತಿಪ್ಪೇಸ್ವಾಮಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ವಿಶ್ವನಾಥ್, ಸೇರಿ ಇತರರು ಭಾಗವಹಿಸಿದ್ದರು.