ಸಾರಾಂಶ
ಬಾಣಂತಿ ಹಾಗೂ ಹಸೂಗೂಸಿನ ಸಾವು ನಿಜಕ್ಕೂ ದುರಂತದ ವಿಷಯ. ವೈದ್ಯರ ನಿರ್ಲಕ್ಷ್ಯದಿಂದ ಎರಡು ಜೀವ ಕಣ್ಮರೆಯಾದವು.
ಕನ್ನಡಪ್ರಭ ವಾರ್ತೆ ಕುಕನೂರು
ಬಾಣಂತಿ ಹಾಗೂ ಹಸೂಗೂಸಿನ ಸಾವು ನಿಜಕ್ಕೂ ದುರಂತದ ವಿಷಯ. ವೈದ್ಯರ ನಿರ್ಲಕ್ಷ್ಯದಿಂದ ಎರಡು ಜೀವ ಕಣ್ಮರೆಯಾದವು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಆಡೂರು ಗ್ರಾಮದ ಬಾಣಂತಿ ರೇಣುಕಾ ಪ್ರಕಾಶ ಹಿರೇಮನಿ ಹಾಗೂ ಹಸುಗೂಸು ಸಾವಿನ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ವೈದ್ಯರನ್ನು ನಂಬಿ ಜನರು ಆಸ್ಪತ್ರೆಗೆ ಬರುತ್ತಾರೆ. ಜೀವ ನೀಡುವ ವೈದ್ಯರು ನಿರ್ಲಕ್ಷ್ಯ ಮಾಡಿದರೆ, ಅವರನ್ನು ನಂಬುವುದು ಹೇಗೆ. ವೈದ್ಯರು ಜೀವ ಉಳಿಸಲು ಇದ್ದಾರೆ, ಹೊರತು ಜೀವ ತೆಗೆಯಲು ಅಲ್ಲ. ವೈದ್ಯರು ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಬೇಕು. ಅನುಭವದ ಕೊರತೆ ಇದ್ದರೆ ತರಬೇತಿಯಲ್ಲಿ ಭಾಗಿಯಾಗಿ ನೈಪುಣ್ಯತೆ ಪಡೆಯಬೇಕು. ರೇಣುಕಾಳನ್ನು ಕುಷ್ಟಗಿಯಲ್ಲಿ ವೈದ್ಯರು ಕೊಪ್ಪಳಕ್ಕೆ ಕಳುಹಿಸಿದ್ದಾರೆ. ಯಾಕೆ ಅಲ್ಲಿ ಅವರು ದೃಢತೆಯಿಂದ ಚಿಕಿತ್ಸೆ ನೀಡಲಿಲ್ಲ. ಕೊಪ್ಪಳಕ್ಕೂ ಬಂದ ನಂತರ ಸಿಸರಿನ್ ಆದ ಎರಡು ತಾಸಿಗೆ ಬಾಣಂತಿ ಸಾವನ್ನಪ್ಪಿದ್ದಾಳೆ. ಆಕೆಯ ಆರೋಗ್ಯದ ಕಡೆ ವೈದ್ಯರು ಯಾಕೆ ಸಂಪೂರ್ಣ ಗಮನಹರಿಸಿಲ್ಲ, ವೈದ್ಯರ ನಿರ್ಲಕ್ಷ್ಯಕ್ಕೆ ತಕ್ಕ ಶಿಕ್ಷೆ ಆಗಬೇಕು. ಯಾವ ವೈದ್ಯರೂ ಸಹ ಈ ರೀತಿಯ ಘಟನಾವಳಿ ಆಗದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಪ್ರಮುಖರಾದ ಮಾರುತಿ ಹೊಸಮನಿ, ಬಸವರಾಜ ಹಾಳಕೇರಿ, ಮಲ್ಲಿಕಾರ್ಜುನ ಗೊರ್ಲೆಕೊಪ್ಪ, ಲಕ್ಷ್ಮಣ ಕಾಳಿ, ಪ್ರಕಾಶ ಹಿರೇಮನಿ ಇತರರಿದ್ದರು.